ಯುಜಿಸಿ-ನೆಟ್ ರದ್ದು | ಮೋದಿ ಸರಕಾರಕ್ಕೆ ಒಂದು ಪರೀಕ್ಷೆಯನ್ನೂ ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲ : ಅಸದುದ್ದೀನ್ ಉವೈಸಿ ವ್ಯಂಗ್ಯ

Update: 2024-06-20 14:40 GMT

ಅಸದುದ್ದೀನ್ ಉವೈಸಿ | PC : PTI

ಹೈದರಾಬಾದ್: ಯುಜಿಸಿ-ನೆಟ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಸಂಶಯಗಳು ವ್ಯಕ್ತವಾಗಿರುವುದರಿಂದ ಕೇಂದ್ರ ಶಿಕ್ಷಣ ಸಚಿವಾಲಯವು ಈ ಪರೀಕ್ಷೆಯನ್ನು ರದ್ದುಗೊಳಿಸಿದೆ. ಇದರ ಬೆನ್ನಿಗೇ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಒಂದು ಪರೀಕ್ಷೆಯನ್ನೂ ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದರೊಂದಿಗೆ, ಭವಿಷ್ಯದಲ್ಲಿ ಪ್ರಶ್ನೆಕ ಪತ್ರಿಕೆ ಸೋರಿಕೆಯನ್ನು ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಹೈದರಾಬಾದ್ ಸಂಸದರೂ ಆದ ಉವೈಸಿ, “ನೀಟ್ ಹಗರಣದ ನಂತರ, ಇದೀಗ ಯುಜಿಸಿ-ನೆಟ್ ಪರೀಕ್ಷೆಯನ್ನೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕಾರಣಕ್ಕೆ ರದ್ದುಗೊಳಿಸಲಾಗಿದೆ. ದೇಶದ ಭದ್ರತೆ ಮಹತ್ತರವಾದುದಾಗಿದೆ. ಮೋದಿ ಸರಕಾರಕ್ಕೆ ಒಂದು ಪರೀಕ್ಷೆಯನ್ನೂ ಸಮರ್ಪಕವಾಗಿ ನಡೆಸಲು ಸಾಧ್ಯವಾಗಿಲ್ಲ” ಎಂದು ಕುಟುಕಿದ್ದಾರೆ.

“ಪ್ರಶ್ನೆ ಪತ್ರಿಕೆ ಸೋರಿಕೆಯ 41 ಪ್ರಕರಣಗಳಿಂದ 15 ರಾಜ್ಯಗಳಲ್ಲಿನ ಉದ್ಯೋಗಾಕಾಂಕ್ಷಿಗಳ ಮೇಲೆ ದುಷ್ಪರಿಣಾಮವುಂಟಾಗಿದೆ. ಒಟ್ಟಾರೆ 1.4 ಕೋಟಿ ಯುವಕರು ಈ ಪರೀಕ್ಷೆಗಳನ್ನು ತೆಗೆದುಕೊಂಡಿದ್ದರು. ಇವರಿಗೆ ಉದ್ಯೋಗ ನೀಡದಿರಲು ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ಕಾರಣವೆ?” ಎಂದೂ ಉವೈಸಿ ಪ್ರಶ್ನಿಸಿದ್ದಾರೆ.

ನೀಟ್ ಪರೀಕ್ಷೆ ಸುತ್ತ ವಿವಾದ ಭುಗಿಲೆದ್ದಿರುವಾಗಲೇ, ಬುಧವಾರ ಕೇಂದ್ರ ಶಿಕ್ಷಣ ಸಚಿವಾಲಯವು ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಈ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಸಂಶಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News