ವಿನೇಶ್ ಫೋಗಟ್ ರನ್ನು ಪದಕ ವಿಜೇತರಂತೆ ಗೌರವಿಸಲಾಗುವುದು: ಹರ್ಯಾಣ ಸಿಎಂ ಸೈನಿ

Update: 2024-08-08 16:17 GMT

 ನಯಾಬ್ ಸಿಂಗ್ ಸೈನಿ, ವಿನೇಶ್ ಫೋಗಟ್ | PC : PTI 

ಚಂಡಿಗಢ: ಒಲಿಂಪಿಕ್ಸ್ ನ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದಲ್ಲಿ ಹೆಚ್ಚುವರಿ ತೂಕದ ಕಾರಣಕ್ಕೆ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಹರ್ಯಾಣ ಸರಕಾರ ಪದಕ ವಿಜೇತರಂತೆ ಪರಿಗಣಿಸಿ ಸನ್ಮಾನಿಸಲಿದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಗುರುವಾರ ಹೇಳಿದ್ದಾರೆ.

ರಾಜ್ಯ ಸರಕಾರ ಒಲಿಂಪಿಕ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತರಿಗೆ ನೀಡವಂತಹ ಸನ್ಮಾನವನ್ನೇ ವಿನೇಶ್ ಫೋಗಟ್ ಅವರಿಗೆ ಕೂಡ ನೀಡಲಾಗುವುದು ಎಂದು ಸೈನಿ ತಿಳಿಸಿದರು.

ಸೈನಿ ಅವರು ‘ಎಕ್ಸ್’ನ ಪೋಸ್ಟ್ ನಲ್ಲಿ, ‘‘ಹರ್ಯಾಣದ ನಮ್ಮ ಧೈರ್ಯಶಾಲಿ ಪುತ್ರಿಯಾಗಿರುವ ವಿನೇಶ್ ಫೋಗಟ್ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ ಹಾಗೂ ಫೈನಲ್ ಗೆ ಪ್ರವೇಶಿಸಿದ್ದಾರೆ. ಕೆಲವು ಕಾರಣಗಳಿಂದ ಅವರಿಗೆ ಫೈನಲ್ ನಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಇರಬಹುದು. ಆದರೆ, ಅವರು ನಮಗೆಲ್ಲರಿಗೂ ಚಾಂಪಿಯನ್’’ ಎಂದು ಹೇಳಿದ್ದಾರೆ.

‘‘ವಿನೇಶ್ ಫೋಗಟ್ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಹಾಗೂ ಗೌರವಿಸಲು ನಮ್ಮ ಸರಕಾರ ನಿರ್ಧರಿಸಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ಹರ್ಯಾಣ ಸರಕಾರ ನೀಡುವ ಎಲ್ಲಾ ಗೌರವ, ಬಹುಮಾನ ಮತ್ತು ಸೌಲಭ್ಯಗಳನ್ನು ವಿನೇಶ್ ಫೋಗಟ್ ಅವರಿಗೆ ಕೂಡ ನೀಡಲಾಗುವುದು’’ ಎಂದು ಅವರು ಹೇಳಿದ್ದಾರೆ.

ತನ್ನ ಕ್ರೀಡಾ ನೀತಿಗೆ ಅನುಗುಣವಾಗಿ ಹರ್ಯಾಣ ಸರಕಾರ ಒಲಿಂಪಿಕ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋ.ರೂ., ಬೆಳ್ಳಿ ಪದಕ ವಿಜೇತರಿಗೆ 4 ಕೋ.ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 2.5 ಕೋ.ರೂ. ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News