Fact Check | ತಿರುಪತಿಗೆ ಪಾಕಿಸ್ತಾನದ ಕಂಪೆನಿಯಿಂದ ತುಪ್ಪ ಪೂರೈಕೆ ಎಂದು ಸುಳ್ಳು ಸುದ್ದಿ ವೈರಲ್
ಹೊಸದಿಲ್ಲಿ : ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದದ ಮಧ್ಯೆ ತಿರುಪತಿಗೆ ತುಪ್ಪ ಪೂರೈಕೆ ಮಾಡಿದ ಕಂಪೆನಿ ಪಾಕಿಸ್ತಾನ ಮೂಲದ್ದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೈರಲ್ ಆಗಿತ್ತು.
ಪಾಕಿಸ್ತಾನದ ಕಂಪೆನಿ, ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್, ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಪ್ಪವನ್ನು ಸರಬರಾಜು ಮಾಡಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಎಕ್ಸ್ ಬಳಕೆದಾರರೋರ್ವರು, ಇವು ತಿರುಪತಿ ಬಾಲಾಜಿಗೆ ದೇಸಿ ತುಪ್ಪವನ್ನು ಪೂರೈಸುವ ತಮಿಳುನಾಡು ಮೂಲದ ಕಂಪೆನಿಯ ಉನ್ನತ ಉದ್ಯೋಗಿಗಳು ಎಂದು ಕೆಲ ಮುಸ್ಲಿಮರ ಪ್ರೊಫೈಲ್ ಗಳನ್ನು ಪೋಸ್ಟ್ ಮಾಡಿದ್ದರು.
►ವೈರಲ್ ಚಿತ್ರದಲ್ಲಿರುವಂತೆ ಪಾಕಿಸ್ತಾನ ಮೂಲದ ಕಂಪೆನಿ ತಿರುಪತಿಗೆ ತುಪ್ಪು ಪೂರೈಕೆ ಮಾಡಿದೆಯಾ? ವಾಸ್ತವವೇನು?
ಈ ಕುರಿತು ವಿಶ್ಲೇಷಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫ್ರೊಫೈಲ್ ಗಳು A.R ಫುಡ್ಸ್ (ಪ್ರೈ) ಲಿಮಿಟೆಡ್ ಉದ್ಯೋಗಿಗಳದ್ದೇ ಆಗಿದೆ. ಆದರೆ ತಿರುಪತಿ ದೇವಸ್ಥಾನಕ್ಕೆ A.R ಫುಡ್ಸ್ (ಪ್ರೈ) ಲಿಮಿಟೆಡ್ ತುಪ್ಪ ಪೂರೈಕೆದಾರರಲ್ಲ ಎನ್ನುವುದು ಬಯಲಾಗಿದೆ.
ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಮತ್ತು ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್ ಕಂಪೆನಿ ಬೇರೆ ಬೇರೆಯಾಗಿದೆ.
Photo : X
ಎ.ಆರ್ ಫುಡ್ಸ್ (ಪ್ರೈ) ಲಿಮಿಟೆಡ್:
ವೈರಲ್ ಚಿತ್ರದಲ್ಲಿರುವ ಕಂಪೆನಿ ಎ.ಆರ್ ಫುಡ್ಸ್ (ಪ್ರೈ) ಲಿಮಿಟೆಡ್ ಪಾಕಿಸ್ತಾನಕ್ಕೆ ಸೇರಿದ್ದಾಗಿದ್ದು, 1970ರಲ್ಲಿ ಈ ಕಂಪೆನಿಯನ್ನು ಸ್ಥಾಪಿಸಲಾಗಿದೆ.
ಎ.ಆರ್. ಫುಡ್ಸ್ (ಪ್ರೈ) ಲಿಮಿಟೆಡ್ ಪ್ಯಾಕೇಜ್ ಮಾಡಿದ ಮಸಾಲೆಗಳನ್ನು ಮಾರಾಟ ಮಾಡುತ್ತದೆ. ಈ ಕುರಿತ ವಿವರಗಳನ್ನು ಕಂಪೆನಿಯ ವೆಬ್ಸೈಟ್ (arfoods.com.pk)ನಲ್ಲಿ ಕಾಣಬಹುದು. pk ಡೊಮೇನ್ ವೆಬ್ಸೈಟ್ ಪಾಕಿಸ್ತಾನದಲ್ಲಿ ನೋಂದಾಯಿಸಲ್ಪಟ್ಟಿದೆ ಎಂಬುವುದನ್ನು ಸೂಚಿಸುತ್ತದೆ.
ಎ.ಆರ್ ಫುಡ್ಸ್ (ಪ್ರೈ) ಲಿಮಿಟೆಡ್ನ ಲಿಂಕ್ಡ್ಇನ್ ಪ್ರೊಫೈಲ್ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಕಂಪೆನಿ ಇರುವುದನ್ನು ಸೂಚಿಸುತ್ತದೆ.
ವೈರಲ್ ಚಿತ್ರದಲ್ಲಿ ಪಟ್ಟಿ ಮಾಡಲಾದ ಐವರು ಉದ್ಯೋಗಿಗಳ ಬಗ್ಗೆ ಪರಿಶೀಲಿಸಲಾಗಿದೆ. ಐವರು ಉದ್ಯೋಗಿಗಳ ಹೆಸರುಗಳು, ಫೋಟೋಗಳನ್ನು ಪರಿಶೀಲಿಸಿದಾಗ ಅವರು ಪಾಕಿಸ್ತಾನದ ಕಂಪೆನಿಯ ಉದ್ಯೋಗಿಗಳು ಎನ್ನುವುದು ತಿಳಿದು ಬಂದಿದೆ . ಹೀಗಾಗಿ, ಈ ವೈರಲ್ ಚಿತ್ರವನ್ನು ಪಾಕಿಸ್ತಾನದ ಕಂಪೆನಿಯ ಉದ್ಯೋಗಿಗಳ ಲಿಂಕ್ಡ್ಇನ್ ಖಾತೆಗಳಿಂದ ತೆಗೆಯಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದಲ್ಲದೆ, ವೈರಲ್ ಚಿತ್ರ ಮತ್ತು ಮೂಲ ಪ್ರೊಫೈಲ್ ಗಳೆರಡರಲ್ಲಿರುವ ಸ್ಥಳಗಳು ಪಾಕಿಸ್ತಾನದಲ್ಲಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.
ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್
ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ತಮಿಳುನಾಡು ಮೂಲದ ಡೈರಿ ಕಂಪೆನಿಯಾಗಿದ್ದು ಅದು ರಾಜ್ ಮಿಲ್ಕ್ ಬ್ರಾಂಡ್ ಅನ್ನು ನಿರ್ವಹಿಸುತ್ತದೆ.
ಈ ಕಂಪೆನಿಯನ್ನು 1995ರಲ್ಲಿ ಭಾರತದಲ್ಲಿ ಸ್ಥಾಪಿಸಲಾಗಿದೆ.
ರಾಜಶೇಖರನ್ ಸೂರ್ಯಪ್ರಭ, ರಾಜು ರಾಜಶೇಖರನ್ ಮತ್ತು ಶ್ರೀನಿವಾಸಲುನಾಯ್ಡು ರಾಮಚಂದ್ರನ್ ಶ್ರೀನಿವಾಸನ್ ಕಂಪೆನಿಯ ನಿರ್ದೇಶಕರಾಗಿದ್ದಾರೆ. ಕಂಪೆನಿಯು ತಮಿಳುನಾಡಿನ ದಿಂಡಿಗಲ್ನಲ್ಲಿದ್ದು, ಗೂಗಲ್ ಮ್ಯಾಪ್ ನಲ್ಲೂ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕಂಪೆನಿ ತಿರುಪತಿ ದೇವಸ್ಥಾನಕ್ಕೆ ಕಳಪೆ ತುಪ್ಪವನ್ನು ಸರಬರಾಜು ಮಾಡಿದೆ ಎಂದು ಆರೋಪಿಸಲಾಗಿದೆ.
ಆದರೆ ಕಂಪೆನಿಯು ತನ್ನ ಉತ್ಪನ್ನಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದೆ. ತಿರುಮಲ ದೇವಸ್ಥಾನ (ಟಿಟಿಡಿ) ಎ.ಆರ್. ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಕಲಬೆರಕೆ ತುಪ್ಪವನ್ನು ಪೂರೈಸಿದ್ದಾರೆಂದು ಕಪ್ಪುಪಟ್ಟಿಗೆ ಸೇರಿಸಿದೆ.