RCB ನೂತನ ಕಪ್ತಾನ ರಜತ್ ಪಾಟೀದಾರ್ ಗೆ ವಿರಾಟ್ ಕೊಹ್ಲಿ ನೀಡಿದ ಸಂದೇಶವೇನು?

Update: 2025-02-13 17:01 IST
Photo of Virat Kohli

ವಿರಾಟ್‌ ಕೊಹ್ಲಿ (screengrab:X/@RCBTweets)

  • whatsapp icon

ಬೆಂಗಳೂರು: 2025ರ ಐಪಿಎಲ್ ಋತುವಿಗೆ RCB ತಂಡದ ನೂತನ ನಾಯಕರಾಗಿ ಆಯ್ಕೆಯಾಗಿರುವ ರಜತ್ ಪಾಟೀದಾರ್ ಗೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ.

ಈ ಕುರಿತು ವಿರಾಟ್ ಕೊಹ್ಲಿಯ ವಿಡಿಯೊ ಸಂದೇಶವನ್ನು RCB ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

“ರಜತ್ ಪಾಟೀದಾರ್ RCBಯ ನೂತನ ನಾಯಕ ಎಂದು ತಿಳಿಸಲು ಸಂತೋಷವಾಗುತ್ತಿದೆ. ರಜತ್ ಅವರಿಗೆ ಅಭಿನಂದನೆಗಳು. ನಾನು ಹಾಗೂ ತಂಡದ ಎಲ್ಲ ಸದಸ್ಯರೂ ನಿಮ್ಮ ಬೆಂಬಲಕ್ಕೆ ಸದಾ ಇದ್ದೇವೆ” ಎಂದು ಆ ವಿಡಿಯೊದಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

“ನೀವು ಈ ಫ್ರಾಂಚೈಸಿಯಲ್ಲಿ ಬೆಳೆದು ಬಂದ ರೀತಿ, ನಿರ್ವಹಣೆ ತೋರಿದ ರೀತಿಯಿಂದ RCB ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ನೀವಿದಕ್ಕೆ ನಿಜಕ್ಕೂ ಅರ್ಹರಾಗಿದ್ದೀರಿ” ಎಂದು ಕೊಹ್ಲಿ ತಮ್ಮ ಸಂದೇಶದಲ್ಲಿ ಪ್ರಶಂಸಿಸಿದ್ದಾರೆ.

“ನಿಜವಾಗಿಯೂ ಇದೊಂದು ದೊಡ್ಡ ಜವಾಬ್ದಾರಿ. ತುಂಬಾ ವರ್ಷಗಳವರೆಗೆ ನಾನು ಈ ಜವಾಬ್ದಾರಿ ನಿಭಾಯಿಸಿದ್ದೆ. ಕಳೆದ ಕೆಲವು ವರ್ಷಗಳಿಂದ ಫ್ಲಾಫ್ ಡುಪ್ಲೆಸಿಸ್ ನಿರ್ವಹಿಸಿದ್ದಾರೆ. ಈ ಫ್ರಾಂಚೈಸಿಯನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದ್ದು, ಇದು ನಿಮಗೆ ದೊರೆತಿರುವ ದೊಡ್ಡ ಗೌರವವಾಗಿದೆ” ಎಂದು ವಿರಾಟ್ ಹೇಳಿದ್ದಾರೆ.

“ಕಳೆದ ಕೆಲವು ವರ್ಷಗಳಲ್ಲಿ ರಜತ್ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಅವರ ಬೆನ್ನಿಗೆ ನಿಲ್ಲುವಂತೆ ತಂಡದ ಅಭಿಮಾನಿಗಳಲ್ಲೂ ವಿನಂತಿಸುತ್ತೇನೆ. ತಂಡದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ರಜತ್ ಗೆ ಶುಭ ಹಾರೈಕೆಗಳು” ಎಂದು ಅವರು ಶುಭಾಶಯ ಕೋರಿದ್ದಾರೆ.

ಈ ಮುನ್ನ, ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುವ ಕುರಿತು ವದಂತಿಗಳು ಹರಡಿದ್ದವು, ಆದರೆ, RCBಯ ಆಡಳಿತ ಮಂಡಳಿಯು ತಂಡಕ್ಕೆ ಹೊಸ ನಾಯಕನನ್ನು ಘೋಷಿಸುವುದರೊಂದಿಗೆ ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ.

ಐಪಿಎಲ್ ಟೂರ್ನಿಯಲ್ಲಿ ಒಮ್ಮೆಯೂ ಆರ್‌ಸಿಬಿ ಟ್ರೋಫಿ ಜಯಿಸಿಲ್ಲ. ಹೀಗಾಗಿ, ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡಬೇಕಾದ ಸವಾಲು ರಜತ್ ಪಾಟೀದಾರ್ ಮುಂದಿದೆ. ಹಾಗೆಯೇ ತಂಡವನ್ನು ಯಶಸ್ಸಿನತ್ತ ಮುನ್ನಡೆಸಬೇಕಾದ ಗುರುತರ ಜವಾಬ್ದಾರಿಯೂ ಇದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News