ಕುಂಭಮೇಳ| ಸಂಗಮದ ನೀರು ಕುಡಿದು ತೋರಿಸಿ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಗೆ ಗಾಯಕ ವಿಶಾಲ್ ದದ್ಲಾನಿ ಸವಾಲು

ವಿಶಾಲ್ ದದ್ಲಾನಿ / ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (Photo: instagram/PTI)
ಹೊಸದಿಲ್ಲಿ: ಕುಂಮೇಳದ ನೀರು ಮಲದ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿದೆ ಎಂಬ ವರದಿಗಳನ್ನು ತಳ್ಳಿ ಹಾಕಿ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರತಿಪಾದಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ “ಆ ನೀರನ್ನು ಒಮ್ಮೆ ಕುಡಿದು ತೋರಿಸಿ” ಎಂದು ಗಾಯಕ ಮತ್ತು ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ ಸವಾಲು ಹಾಕಿದ್ದಾರೆ.
ಮಹಾ ಕುಂಭ ಮೇಳದ ವಿವಿಧ ಸ್ಥಳಗಳಲ್ಲಿನ ನೀರಿನಲ್ಲಿ ಅತ್ಯಧಿಕ ಮಟ್ಟದ ಮಲದ ಬ್ಯಾಕ್ಟೀರಿಯಾ ಹಾಗೂ ಸಂಪೂರ್ಣ ಪ್ರಮಾಣದ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ತುಂಬಿವೆ ಎಂದು ಫೆಬ್ರವರಿ 17ರಂದು ರಾಷ್ಟ್ರೀಯ ಹಸಿರು ಮಂಡಳಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಎಚ್ಚರಿಸಲಾಗಿತ್ತು. ಇದರ ಬೆನ್ನಿಗೇ ಈ ವರದಿಯ ಕುರಿತು ದೇಶಾದ್ಯಂತ ಕಳವಳ ವ್ಯಕ್ತವಾಗಿತ್ತು. ಆದರೆ, ಈ ವರದಿಯನ್ನು ತಳ್ಳಿ ಹಾಕಿದ್ದ ಮುಖ್ಯಮಂತ್ರಿ ಆದಿತ್ಯನಾಥ್, ನದಿ ನೀರು ಕಲುಷಿತಗೊಂಡಿದೆ ಎಂದು ಹೇಳಲಾಗಿರುವ ಸ್ಥಳಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ವಿಶಾಲ್ ದದ್ಲಾನಿ, “ದ್ವೇಷಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸರ್. ನಮಗೆ ನಿಮ್ಮ ಬಗ್ಗೆ ನಂಬಿಕೆಯಿದೆ. ದಯವಿಟ್ಟು ಮುನ್ನಡೆಯಿರಿ ಹಾಗೂ ನೀರನ್ನು ಚೆನ್ನಾಗಿ ಗುಟುಕರಿಸಿ. ನೇರವಾಗಿ ನದಿಯಿಂದ, ಕ್ಯಾಮೆರಾ ಮುಂದೆ” ಎಂದು ಸವಾಲೆಸಿದ್ದಾರೆ.
ಮುಂದುವರಿದು, ಮತ್ತೊಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಷ್ಟ್ರೀಯ ಹಸಿರು ಮಂಡಳಿ ವರದಿ ಬಗೆಗಿನ ಸುದ್ದಿ ವರದಿಯೊಂದನ್ನು ಹಂಚಿಕೊಂಡಿರುವ ಅವರು, “ಈಗಾಗಲೇ ಕಂಡು ಬರುತ್ತಿರುವ ಲಕ್ಷಾಂತರ ಅತಿಸಾರ, ಕಾಲರಾ, ಅಮೀಬಿಯಾಸಿಸ್ ಪ್ರಕರಣಗಳು ನಿಮಗೆ ಕಾಣುತ್ತಿಲ್ಲವೆಂದರೆ, ನೀವು ವಿಶೇಷವೇ ಸರಿ. ದಯವಿಟ್ಟು ಮುನ್ನಡೆಯಿರಿ ಹಾಗೂ ನೀವು ಮತ್ತು ನಿಮ್ಮ ಕುಟುಂಬ ಕೊಳಚೆಯಲ್ಲಿ ಮುಳುಗಿರಿ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.