ಮುಸ್ಲಿಮೇತರ ಅಧಿಕಾರಿಯಿಂದ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ| ಸಂಸದೀಯ ಸಮಿತಿ ಸಭೆಯಲ್ಲಿ ಮತ್ತೆ ಜಟಾಪಟಿ
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ದಿಲ್ಲಿ ವಕ್ಫ್ ಮಂಡಳಿಯು ಶಾಸನದ ಪ್ರಸ್ತಾವಿತ ಬದಲಾವಣೆಗಳನ್ನು ಬೆಂಬಲಿಸಿದ ಕಾರಣ ಮತ್ತೆ ವಾಗ್ವಾದಕ್ಕೆ ಕಾರಣವಾಗಿದೆ.
ದಿಲ್ಲಿ ವಕ್ಫ್ ಮಂಡಳಿಯ ಆಡಳಿತಾಧಿಕಾರಿ ಅಶ್ವಿನಿ ಕುಮಾರ್ ಅವರ ನಿಲುವು ʼಕಾನೂನುಬಾಹಿರʼ ಎಂದು ವಿರೋಧ ಪಕ್ಷದ ಸಂಸದರು ಹೇಳಿದ್ದಾರೆ.
ದಿಲ್ಲಿ ವಕ್ಫ್ ಬೋರ್ಡ್ ಆಡಳಿತಾಧಿಕಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶವಿಲ್ಲ ಎಂದು ಕಾನೂನು ಹೇಳುತ್ತದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿದೆ. ಈ ವೇಳೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದಾಗ ದಿಲ್ಲಿ ವಕ್ಫ್ ಮಂಡಳಿಗೆ ಹಿಂದೂ ಸಮುದಾಯಕ್ಕೆ ಸೇರಿದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಬಿಜೆಪಿ ಸಂಸದರೋರ್ವರು ಹೇಳಿದ್ದಾರೆ.
ದಿಲ್ಲಿ ವಕ್ಫ್ ಮಂಡಳಿಯ ನಿಲುವನ್ನು ವಿರೋಧಿಸಿ ಪ್ರತಿಪಕ್ಷಗಳು ಸಭೆಯಿಂದ ಹೊರ ನಡೆದಿವೆ. ನಿಲುವನ್ನು ದಿಲ್ಲಿ ಸರ್ಕಾರ ಪರಿಶೀಲಿಸಿಲ್ಲ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಅತಿಶಿ ಅವರ ಅನುಮೋದನೆಯಿಲ್ಲದೆ ವಕ್ಫ್ ಮಂಡಳಿಯ ವರದಿಯನ್ನು ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷವು ಆರೋಪಿಸಿದೆ.
ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಕಳೆದ ವಾರ ಅಶಿಸ್ತಿನ ವರ್ತನೆಗಾಗಿ ಒಂದು ದಿನದ ಮಟ್ಟಿಗೆ ಅಮಾನತುಗೊಂಡಿದ್ದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಕೂಡ ಭಾಗವಹಿಸಿದ್ದರು. ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ ಅವರೊಂದಿಗೆ ವಾಗ್ವಾದ ವೇಳೆ ಬ್ಯಾನರ್ಜಿ ಗಾಜಿನ ನೀರಿನ ಬಾಟಲಿಯನ್ನು ಒಡೆದಿದ್ದರು. ಇದರಿಂದ ಅವರ ಕೈಗೆ ಗಾಯವಾಗಿತ್ತು.