ವಕ್ಫ್ ಜಂಟಿ ಸಮಿತಿಯು ಮುಸ್ಲಿಮರ ಅನಿಸಿಕೆಗಳನ್ನು ಕಡೆಗಣಿಸಿದೆ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
Credit: PTI File Photo
ಹೊಸದಿಲ್ಲಿ: ಲೋಕಸಭೆಯ ವಕ್ಫ್ (ತಿದ್ದುಪಡಿ) ವಿಧೇಯಕ ಕುರಿತ ಜಂಟಿ ಸಮಿತಿಯು ಭಾರತೀಯ ಮುಸ್ಲಿಮರ ಅನಿಸಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಹಾಗೂ ಏಕಪಕ್ಷೀಯವಾಗಿ ಪ್ರಜಾಸತ್ತಾತ್ಮಕವಲ್ಲದ ಪ್ರಕ್ರಿಯೆಯೆಡೆಗೆ ಸಾಗಿದೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಪಿಎಂಎಲ್ಬಿ) ಆರೋಪಿಸಿದೆ.
ವಕ್ಫ್ (ತಿದ್ದುಪಡಿ)ವಿಧೇಯಕ ಕುರಿತ ಜಂಟಿ ಸಮಿತಿಯು ಗುರುವಾರ ಲೋಕಸಭೆಯಲ್ಲಿ ವರದಿಯನ್ನು ಮಂಡಿಸಿದ ಬೆನ್ನಲ್ಲೇ ಅದು ಈ ಹೇಳಿಕೆಯನ್ನು ನೀಡಿದೆ.
ಒಂದು ವೇಳೆ ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾದಲ್ಲಿ ಸಂವಿಧಾನದ ಚೌಕಟ್ಟಿನೊಳಗೆ ತಾನು ರಾಷ್ಟ್ರವ್ಯಾಪಿ ಚಳವಳಿಯನ್ನು ನಡೆಸುವುದಾಗಿ ಎಐಎಂಪಿಎಲ್ಬಿ ಹೇಳಿದೆ.
ವಕ್ಫ್ ಕುರಿತ ಇಂತಹ ಯಾವುದೆ ಮಸೂದೆಯನ್ನು ಜಾರಿಗೊಳಿಸುವುದರಿಂದ ಹಿಂದೆ ಸರಿಯುವಂತೆ ಮಂಡಳಿಯು ಸರಕಾರವನ್ನು ಆಗ್ರಹಿಸಿದೆ.
ಎಐಎಂಪಿಎಲ್ಬಿ ಅಧ್ಯಕ್ಷ ಖಾಲಿದ್ ಸೈಫುಲ್ಲಾ ಅವರು ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ವಿವಿಧ ಧರ್ಮಗಳ, ಭಾಷೆಗಳ, ಸಂಸ್ಕೃತಿಗಳ ಹಾಗೂ ಸಂಪ್ರದಾಯಗಳ ವಿವಿಧ ಜನರು ವಾಸವಾಗಿರುವುದರಿಂದ ಈ ದೇಶವು ಇತರ ರಾಷ್ಟ್ರಗಳಿಗಿಂತ ವಿಭಿನ್ನವಾಗಿರಬೇಕೆಂದು ನಮ್ಮ ದೇಶದ ಸಂಸ್ಥಾಪಕರು ಆಶಯವನ್ನು ಹೊಂದಿದ್ದರೆಂದು ಹೇಳಿದರು.
ವಕ್ಫ್ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಹಾಗೂ ವಕ್ಫ್ ವಿಧೇಯಕವು ಧಾರ್ಮಿಕ ತಾರತಮ್ಯದಿಂದ ಕೂಡಿದೆಯೆಂದು ಅವರು ಆಪಾದಿಸಿದರು.
ನಮ್ಮ ಧರ್ಮಕ್ಕನುಗುಣವಾಗಿ ಬದುಕುವುದು ನಮ್ಮ ಆಚರಣೆ ಹಾಗೂ ಸಂಪ್ರದಾಯಗಳಿಗೆ ಅನುಸಾರವಾಗಿ ಸಂಸ್ಥೆಗಳನ್ನು ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕಾಗಿದೆ ಎಐಎಂಪಿಎಲ್ಬಿ ವರಿಷ್ಠರು ಹೇಳಿದ್ದಾರೆ.
ಸಿಖ್ಖರು ಹಾಗೂ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಆಯಾ ಸಮುದಾಯಗಳವರೇ ನಡೆಸುತ್ತಿದ್ದಾರೆ. ಅದೇ ರೀತಿ ಮಸೀದಿಗಳು, ಖಬರಸ್ತಾನಗಳು ಇತ್ಯಾದಿಗಳನ್ನು ಮುಸ್ಲಿಮರೇ ನಡೆಸಬೇಕಿದೆ ಎಂದವರು ಹೇಳಿದರು.
‘‘ಹಾಲಿ ಸರಕಾರವು ಸುಳ್ಳುಗಳನ್ನು ಹರಡುತ್ತಿದೆ ಮತ್ತು ಅದು ಸತ್ಯವನ್ನು ಇಷ್ಟಪಡುವುದಿಲ್ಲ. ವಕ್ಫ್ ಎಲ್ಲಾ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಲುತ್ತದೆ ಹಾಗೂ ಅದು ಯಾವುದೇ ಜಮೀನನ್ನು ವಶಪಡಿಸಿಕೊಳ್ಳಬಹುದಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ದೇಶದಲ್ಲಿ ನ್ಯಾಯಾಲಯಗಳಿರುವಾಗ ಈ ರೀತಿಯಾಗಿ ಯಾರಿಗೆ ತಾನೇ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಾಧ್ಯ’’ ಎಂದು ರಹ್ಮಾನಿ ಪ್ರಶ್ನಿಸಿದರು.
ವಕ್ಫ್ ವಿವಾದವು ಹಿಂದೂಗಳು ಹಾಗೂ ಮುಸ್ಲಿಮರ ಅಥವಾ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ಸಂಘರ್ಷವಲ್ಲ. ಆದರೆ ಇದು ನ್ಯಾಯಕ್ಕಾಗಿ ನಡೆಯುವ ಹೋರಾಟವಾಗಿದೆ ಎಂದು ಎಐಎಂಪಿಎಲ್ಬಿ ವರಿಷ್ಠ ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್ನ ನಾಯಕ ಮಾಲಿಕ್ ಮೊವಾತಾಸಿಮ್ ಖಾನ್ ಅವರು ಮಾತನಾಡಿ, ಒಂದು ವೇಳೆ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಅಥವಾ ಚಂದ್ರಬಾಬು ನಾಯ್ಡು, ವಿಧೇಯಕದ ವಿರುದ್ಧದ ಧ್ವನಿಗಳಿಗೆ ಕಿವಿಗೊಡದೆ ಇದ್ದಲ್ಲಿ ರಾಜಕೀಯವಾಗಿ ಅವರು ಬೆಲೆತೆರಬೇಕಾದೀತೆಂದು ಎಚ್ಚರಿಕೆ ನೀಡಿದರು.
ಜಮಿಯತ್ ಉಲೇಮಾ ಎ ಹಿಂದ್ನ ಅಧ್ಯಕ್ಷ ಅರ್ಷದ್ ಮದನಿ ಅವರು ವಿವಾದಿತ ವಕ್ಫ್ತಿದ್ದುಪಡಿ ವಿಧೇಯಕವು ಸಂವಿಧಾನ ವಿರೋಧಿಯೆಂದು ಆಪಾದಿಸಿದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ