ವಯನಾಡ್ ಭೂಕುಸಿತ ರಾಷ್ಟ್ರೀಯ ವಿಪತ್ತು : ರಾಹುಲ್ ಗಾಂಧಿ

Update: 2024-08-01 16:48 GMT

PC : PTI

ವಯನಾಡ್ : ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಬಣ್ಣಿಸಿದ ರಾಹುಲ್ ಗಾಂಧಿ, ಈ ದುರಂತದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಮತ್ತು ಮನೆಗಳನ್ನು ಕಳೆದುಕೊಂಡಿರುವವರನ್ನು ನೋಡುವುದು ತುಂಬ ನೋವನ್ನುಂಟು ಮಾಡಿದೆ. ಈ ಪರಿಸ್ಥಿತಿಯಲ್ಲಿ ಅವರೊಂದಿಗೆ ಮಾತನಾಡುವುದೂ ಕಷ್ಟವಾಗಿದೆ. ಏಕೆಂದರೆ ಅವರಿಗೆ ಏನು ಹೇಳಬೇಕು ಎನ್ನುವುದೇ ತೋಚುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು,‘ಇದು ವಯನಾಡ್, ಕೇರಳ ಮತ್ತು ದೇಶಕ್ಕೆ ಭೀಕರ ದುರಂತವಾಗಿದೆ. ನನ್ನ ಮಟ್ಟಿಗೆ ಇದು ಖಂಡಿತವಾಗಿಯೂ ರಾಷ್ಟ್ರೀಯ ವಿಪತ್ತು ಆಗಿದೆ ,ಆದರೆ ಸರಕಾರವೇನು ಹೇಳುತ್ತದೆ ಎನ್ನುವುದನ್ನು ನೋಡೋಣ ’ ಎಂದು ಹೇಳಿದರು.

‘ಇಂದು ನನ್ನ ಪಾಲಿಗೆ ಕಷ್ಟದ ದಿನವಾಗಿದೆ, ಆದರೆ ಬದುಕುಳಿದವರು ತಾವು ಪಡೆಯಬೇಕಾಗಿದ್ದನ್ನು ಪಡೆಯುತ್ತಾರೆ ಎನ್ನುವುದನ್ನು ಖಚಿತಪಡಿಸಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದಕ್ಕೆ ನೆರವಾಗುತ್ತೇವೆ ’ಎಂದರು.

ಈ ಪ್ರದೇಶದಲ್ಲಿಯ ಜನರು ಅನುಭವಿಸುತ್ತಿರುವ ನೋವು ಊಹೆಗೂ ನಿಲುಕುವುದಿಲ್ಲ ಎಂದು ಹೇಳಿದ ಪ್ರಿಯಾಂಕಾ ಗಾಂಧಿ,‘ಅವರಿಗೆ ನೆರವಾಗಲು ಮತ್ತು ಅವರಿಗೆ ಸಾಧ್ಯವಿದ್ದಷ್ಟು ಬೆಂಬಲ ಮತ್ತು ಅನುಕೂಲವನ್ನು ಒದಗಿಸಲು ನಾವಿಲ್ಲಿದ್ದೇವೆ ’ ಎಂದರು.

ಭೂಕುಸಿತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಎಕ್ಸ್ ಪೋಸ್ಟ್‌ನಲ್ಲಿ ರಾಹುಲ್,‘ಈ ಸಂಕಷ್ಟದ ಸಮಯದಲ್ಲಿ ನಾನು ಮತ್ತು ಪ್ರಿಯಾಂಕಾ ವಯನಾಡಿನ ಜನರ ಜೊತೆಯಲ್ಲಿದ್ದೇವೆ. ಪರಿಹಾರ,ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆಗಳನ್ನು ನಿಕಟವಾಗಿ ಗಮನಿಸುತ್ತಿದ್ದು,ಎಲ್ಲ ಅಗತ್ಯ ನೆರವನ್ನು ಒದಗಿಸಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಾಧ್ಯವಿರುವ ಎಲ್ಲ ಬೆಂಬಲವನ್ನುಒದಗಿಸಲು ಯುಡಿಎಫ್ ಬದ್ಧವಾಗಿದೆ. ಭೂಕುಸಿತಗಳು ಮತ್ತು ನೈಸರ್ಗಿಕ ಪ್ರಕೋಪಗಳು ಪದೇಪದೇ ಸಂಭವಿಸುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಸಮಗ್ರ ಕ್ರಿಯಾಯೋಜನೆಯ ತುರ್ತು ಅಗತ್ಯವಿದೆ ’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News