ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ: ಸುಪ್ರೀಂ
ಹೊಸದಿಲ್ಲಿ: ಉದ್ಯೋಗದ ಸ್ಥಳದಲ್ಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಬುಧವಾರ ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಿಸಿದೆ. ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ಸೇವಾ ಆಯ್ಕೆ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರ ಶೇ.50ರಷ್ಟು ಪಿಂಚಣಿಯನ್ನು ತಡೆಹಿಡಿಯುವ ದೂರು ಸಮಿತಿಯ ಆದೇಶವನ್ನು ತಳ್ಳಿಹಾಕಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿ, ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೇವಾ ಆಯ್ಕೆ ಮಂಡಳಿಯ ಮಾಜಿ ಉದ್ಯೋಗಿ ದಿಲೀಪ್ ಪೌಲ್ ವಿರುದ್ಧ ಮಹಿಳಾ ಸಹದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದರು. ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿದ ದೂರು ಸಮಿತಿಯು ವಿಚಾರಣೆಯ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿವೃತ್ತನಾದ ಆರೋಪಿಯ ಶೇ.50ರಷ್ಟು ಪಿಂಚಣಿ, ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯುವಂತೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಆರೋಪಿ ಅಧಿಕಾರಿ ದಿಲೀಪ್ ಪೌಲ್ ಗುವಾಹಟಿ ಹೈಕೋರ್ಟ್ ಮೆಟ್ಟಲೇರಿದ್ದರು. ಆತನ ಪರವಾಗಿ ತೀರ್ಪು ನೀಡಿದ ನ್ಯಾಯಾಲಯವು, ಈ ಪ್ರಕರಣದಲ್ಲಿ ಸಮಿತಿಯು ಪ್ರಾಸಿಕ್ಯೂಟರ್‌ನ ಪಾತ್ರವಹಿಸಿದೆಯೆಂದು ಅಸಮಾಧಾನ ವ್ಯಕ್ತಪಡಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈದೀಗ ಹೈಕೋಟ್ ಕೇಂದ್ರ ಸರಕಾರದ ಮೇಲ್ಮನವಿಯನ್ನು ಪುರಸ್ಕರಿಸಿದೆ.
‘‘ಜಗತ್ತಿನಾದ್ಯಂತದ ಸಮಾಜಗಳಲ್ಲಿ ಲೈಂಗಿಕ ಕಿರುಕುಳವು ವ್ಯಾಪಕವಾಗಿ ಹಾಗೂ ಅಳವಾಗಿ ಬೇರೂರಿರುವ ಸಮಸ್ಯೆಯಾಗಿದೆ. ಭಾರತದಲ್ಲಿ, ಇದೊಂದು ಗಂಭೀರವಾದ ಕಳವಳಕಾರಿ ವಿಷಯವಾಗಿದೆ. ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಲು ಕಾನೂನುಗಳನ್ನು ಸುಧಾರಣೆಗೊಳಿಸುವುದು, ಈ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ದೇಶ ತಾಳಿರುವ ಬದ್ಧತೆಗೆ ಸಾಕ್ಷಿಯಾಗುತ್ತದೆ. ಭಾರತದಲ್ಲಿ ಲೈಂಗಿಕ ಕಿರುಕುಳವು ಶತಮಾನಗಳಿಂದ ಅಸ್ತಿತ್ವದಲ್ಲಿದೆ. ಆದರೆ 20ನೇ ಶತಮಾನದ ಉತ್ತರಾರ್ಧದಲ್ಲಿಯಷ್ಟೇ ಅದು ಕಾನೂನು ಬದ್ಧ ಮಾನ್ಯತೆಯನ್ನು ಪಡೆಯಲು ಆರಂಭಿಸಿತು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಸೆಪ್ಟೆಂಬರ್ 2006 ಹಾಗೂ ಮೇ 2012ರ ನಡುವೆ ಅಸ್ಸಾಂನ ರಂಗಿಯಾದಲ್ಲಿ ಕ್ಷೇತ್ರೀಯ ಸಂಘಟಕರಾಗಿ ನಿಯೋಜಿತರಾಗಿದ್ದ ಸೇವಾ ಆಯ್ಕೆ ಮಂಡಳಿ (ಎಸ್‌ಎಸ್‌ಬಿ)ಯ ನಿವೃತ್ತ ಅಧಿಕಾರಿಯ ಪಿಂಚಣಿಯನ್ನು ಪೂರ್ಣ ಪ್ರಮಾಣದಲ್ಲಿ ಮರುಸ್ಥಾಪಿಸುವ 2019ರ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಯಾವುದೇ ಪುರಾವೆಗಳಿಲ್ಲದ ಆರೋಪ ಇದಲ್ಲ ಎಂದು ಅಭಿಪ್ರಾಯಿಸಿದ ನ್ಯಾಯಪೀಠವು ಆರೋಪಿ ದಿಲೀಪ್ ಪೌಲ್‌ರ ಶೇ.50ರಷ್ಟು ಪಿಂಚಣಿಯನ್ನು ತಡೆಗಟ್ಟುವ ದೂರು ಸಮಿತಿಯ ಆದೇಶವನ್ನು ಎತ್ತಿಹಿಡಿಯಿತು.