ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ: ಅಹಮದಾಬಾದ್ ವಿಮಾನ ಪ್ರಯಾಣ ದರ ದುಬಾರಿ!

Update: 2023-11-17 16:30 GMT

Photo: PTI 

ಅಹಮದಾಬಾದ್: ರವಿವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲು ಅಹಮದಾಬಾದ್ ಗೆ ಆಗಮಿಸುತ್ತಿರುವ ಪ್ರೇಕ್ಷಕರ ಬೇಡಿಕೆಯು ಮುಗಿಲು ಮುಟ್ಟಿರುವುದರಿಂದ, ಅಹಮದಾಬಾದ್ ನಲ್ಲಿನ ಹೋಟೆಲ್ ಕೋಣೆಗಳು ಹಾಗೂ ವಿಮಾನ ಪ್ರಯಾಣ ಟಿಕೆಟ್ ದರ ಗಗನಮುಖಿಯಾಗಿದೆ. ವಿಶ್ವಕಪ್ ಫೈನಲ್ ಪಂದ್ಯದ ಜ್ವರವು ಉತ್ತುಂಗಕ್ಕೇರತೊಡಗಿದ್ದು, ಅಹಮದಾಬಾದ್ ನಗರದಲ್ಲಿನ ಪ್ರಮುಖ ಪಂಚತಾರಾ ಹೋಟೆಲ್ ಗಳಲ್ಲಿ ಆ ಪಂದ್ಯದ ರಾತ್ರಿ ವಾಸ್ತವ್ಯ ಹೂಡಲು ಬಯಸುವ ಕೋಣೆಗಳ ದರವು ರೂ. ಎರಡು ಲಕ್ಷಕ್ಕಿಂತಲೂ ಹೆಚ್ಚಾಗಿದ್ದರೆ, ಇತರೆ ಹೋಟೆಲ್ ಗಳು ತಮ್ಮ ದರವನ್ನು ಐದರಿಂದ ಏಳು ಪಟ್ಟು ಏರಿಕೆ ಮಾಡಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

“ವಿಶ್ವಕಪ್ ಫೈನಲ್ ಪಂದ್ಯದ ಕುರಿತು ಕೇವಲ ಭಾರತದಲ್ಲಿ ಮಾತ್ರ ಉತ್ಸಾಹವಿಲ್ಲ. ಬದಲಿಗೆ ದುಬೈ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಂಥ ವಿದೇಶಗಳಿಂದಲೂ ಪಂದ್ಯವನ್ನು ವೀಕ್ಷಿಸಲು ಭಾರಿ ಬೇಡಿಕೆ ಇದೆ” ಎಂದು ಗುಜರಾತ್ ಹೋಟೆಲ್ ಮತ್ತು ರೆಸ್ಟೋರೆಂಟ್ ಒಕ್ಕೂಟಗಳ ಮಹಾ ಒಕ್ಕೂಟದ ಅಧ್ಯಕ್ಷ ನರೇಂದ್ರ ಸೊಮಾನಿ ತಿಳಿಸಿದ್ದಾರೆ.

“ಅಹಮದಾಬಾದ್ ನಲ್ಲಿರುವ ತ್ರಿತಾರಾ ಹಾಗೂ ಪಂಚತಾರಾ ಹೋಟೆಲ್ ಗಳಲ್ಲಿನ ಕೋಣೆಗಳ ಸಂಖ್ಯೆಯು 5,000 ಆಗಿದ್ದರೆ, ಇಡೀ ಗುಜರಾತ್ ನಲ್ಲಿರುವ ಕೋಣೆಗಳ ಸಂಖ್ಯೆ 10,000 ಆಗಿದೆ. ಆದರೆ, ನರೇಂದ್ರ ಮೋದಿ ಕ್ರೀಡಾಂಗಣದ ಸಾಮರ್ಥ್ಯವು 1.20 ಲಕ್ಷ ಆಗಿದ್ದು, ಪಂದ್ಯವನ್ನು ವೀಕ್ಷಿಸಲು ಹೊರಗಡೆಯಿಂದ 30,000ದಿಂದ 40,000 ಮಂದಿ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ” ಎಂದು ಹೇಳಿದ್ದಾರೆ.

ಹೋಟೆಲ್ ಕೋಣೆಗಳಿಗೆ ಬೇಡಿಕೆ ತೀವ್ರವಾಗಿರುವುದರಿಂದ, ಅವುಗಳ ದರವೂ ಏರಿಕೆಯಾಗುತ್ತಿದೆ. ಈ ಹಿಂದೆ ಕಡಿಮೆ ದರಕ್ಕೆ ದೊರೆಯುತ್ತಿದ್ದ ಹೋಟೆಲ್ ಕೋಣೆಗಳ ದರ ಇದೀಗ ರೂ. 50,000ದಿಂದ ರೂ. 1.25 ಲಕ್ಷದವರೆಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ವಿವಿಧ ಸ್ಥಳಗಳಿಂದ ಅಹಮದಾಬಾದ್ ಗೆ ಪ್ರಯಾಣಿಸುವ ವಿಮಾನಗಳ ಪ್ರಯಾಣ ದರವೂ ಈ ಹಿಂದಿನ ಸಾಮಾನ್ಯ ದರಕ್ಕೆ ಹೋಲಿಸಿದರೆ ಗಣನೀಯವಾಗಿ ಏರಿಕೆಯಾಗಿದೆ.

ಈ ಹಿಂದೆ ಚೆನ್ನೈನಿಂದ ಅಹಮದಾಬಾದ್ ಗೆ ಪ್ರಯಾಣಿಸಬೇಕಿದ್ದರೆ, ವಿಮಾನ ಪ್ರಯಾಣ ದರವು ಸುಮಾರು ರೂ. 5,000 ಇರುತ್ತಿತ್ತು. ಆದರೆ, ಇದೀಗ ಆ ದರವು ರೂ. 16,000ದಿಂದ ರೂ. 25,000 ನಡುವೆ ಇದೆ.

“ಅಹಮದಾಬಾದ್ ಗೆ ಪ್ರಯಾಣಿಸುವ ವಿಮಾನಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗಿರುವುದರಿಂದ, ಅಹಮದಾಬಾದ್ ಗೆ ವಿವಿಧ ಸ್ಥಳಗಳಿಂದ ಆಗಮಿಸುವ ಎಲ್ಲ ವಿಮಾನಗಳ ಪ್ರಯಾಣ ದರವು ಮೂರರಿಂದ ಐದು ಪಟ್ಟು ಹೆಚ್ಚಳವಾಗಿದೆ” ಎಂದು ಟ್ರಾವೆಲ್ ಏಜೆಂಟ್ ಆದ ಮನುಭಾಯಿ ಪಂಚೋಲಿ ತಿಳಿಸಿದ್ದಾರೆ.

“ತನ್ನ ತಾಯ್ನೆಲದಲ್ಲೇ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವಾಡುತ್ತಿರುವ ಭಾರತ ತಂಡದ ಆಟಕ್ಕೆ ಸಾಕ್ಷಿಯಾಗಲು ಜೀವಮಾನದಲ್ಲಿ ಒಮ್ಮೆ ದೊರೆತಿರುವ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಕ್ರಿಕೆಟ್ ಅಭಿಮಾನಿಗಳು ಎಷ್ಟು ದೊಡ್ಡ ಮೊತ್ತವನ್ನು ಬೇಕಾದರೂ ಪಾವತಿಸಲು ಸಿದ್ಧರಾಗಿದ್ದಾರೆ. ಹೀಗಾಗಿ ಹೋಟೆಲ್ ಗಳು ಹಾಗೂ ವಿಮಾನ ಪ್ರಯಾಣ ಟಿಕೆಟ್ ಗಳ ಬೇಡಿಕೆ ಏರುಗತಿಯಲ್ಲಿದೆ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News