ಭಾರತೀಯರು ದೈಹಿಕವಾಗಿ ಅಸಮರ್ಥರು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಮೇಲ್ಪದರದ್ದಾಗಿದೆ : ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

Update: 2024-08-02 15:04 GMT

ಜೆ.ಪಿ.ನಡ್ಡಾ | PTI  

ಹೊಸದಿಲ್ಲಿ : ಭಾರತದ ಯುವಜನರು ದೈಹಿಕವಾಗಿ ಅಸಮರ್ಥರು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯು ಕೇವಲ ಮೂರು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಿಂದ ಸಂಗ್ರಹಿಸಲಾಗಿರುವ ದತ್ತಾಂಶವನ್ನು ಆಧರಿಸಿದೆ. ಇದರ ಫಲಿತಾಂಶವನ್ನು ಮಾದರಿ ತಾಂತ್ರಿಕತೆಯ ಮೂಲಕ ಮೇಲ್ಪದರದಲ್ಲಿ ಅನ್ವಯಿಸಲಾಗಿದೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಲೋಕಸಭೆಗೆ ತಿಳಿಸಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೆ.ಪಿ.ನಡ್ಡಾ, ಸಮರ್ಪಕ ದೈಹಿಕ ಚಟುವಟಿಕೆಯನ್ನು ಪ್ರತಿ ವಾರ ನಡೆಸುವ 150 ನಿಮಿಷಗಳ ಸಾಧಾರಣ ಪರಿಶ್ರಮದ ಚಟುವಟಿಕೆಗಳು (ಬಿರುಸಿನ ನಡಿಗೆ, ಲಘು ತೂಕವನ್ನು ಎತ್ತುವುದು ಇತ್ಯಾದಿ) ಅಥವಾ ಪ್ರತಿ ವಾರ ನಡೆಸುವ 75 ನಿಮಿಷಗಳ ತೀವ್ರ ಪರಿಶ್ರಮದ ಚಟುವಟಿಕೆಗಳು (ಓಟ, ಅಗೆಯುವುದು, ನಿರ್ಮಾಣ ಕಾಮಗಾರಿ, ಹೊರಾಂಗಣ ಕ್ರೀಡೆಗಳು ಇತ್ಯಾದಿ) ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿದೆ ಎಂದು ಅವರು ಹೇಳಿದರು.

ಕನಿಷ್ಠ ಪಕ್ಷ 10 ನಿಮಿಷಗಳ ಕಾಲ ನಡೆಯುವ ದೈಹಿಕ ಚಟುವಟಿಕೆಯ ಕುರಿತು ಸ್ವಯಂಪ್ರೇರಿತವಾಗಿ ವರದಿ ಮಾಡಿಕೊಂಡಿರುವುದನ್ನು ಆಧರಿಸಿ ಈ ಚಟುವಟಿಕೆಯ ಮಟ್ಟವನ್ನು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

2020ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ನಡೆಸಿದ್ದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಗಾ ಸಮೀಕ್ಷೆಯಲ್ಲಿ, ಶೇ. 58.7ರಷ್ಟು ಭಾರತೀಯ ಯುವಕರು ಇತರ ವಿಷಯಗಳೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳನ್ನು ಪಾಲಿಸಿರುವುದು ಕಂಡು ಬಂದಿತ್ತು ಎಂದು ನಡ್ಡಾ ಲೋಕಸಭೆಗೆ ತಿಳಿಸಿದರು.

2014ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಹಮ್ಮಿಕೊಂಡಿದ್ದ ICMR-INDIAB ಅಧ್ಯಯನ (ಒಂದನೇ ಹಂತ)ದ ಫಲಿತಾಂಶವನ್ನು “ಭಾರತದಲ್ಲಿ ದೈಹಿಕ ಚಟುವಟಿಕೆ ಹಾಗೂ ನಿಷ್ಕ್ರಿಯತೆಯ ಸ್ವರೂಪಗಳು” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿತ್ತು. ಈ ಅಧ್ಯಯನದಲ್ಲಿ ಮಾದರಿಗಾಗಿ ಆಯ್ದುಕೊಂಡಿದ್ದ ಯುವಜನರ ಪೈಕಿ ಶೇ. 54.4ರಷ್ಟು ಯುವಜನರು ಅಸಮರ್ಪಕ ದೈಹಿಕ ಕ್ರಿಯಾಶೀಲತೆ ಹೊಂದಿರುವುದು ಕಂಡು ಬಂದಿತ್ತು ಎಂದೂ ಅವರು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಲ್ಲಿ ಪತ್ತೆಯಾಗಿರುವ ಅಂಶಗಳು ತಮಿಳುನಾಡು, ಮಹಾರಾಷ್ಟ್ರ ಹಾಗೂ ಝಾರ್ಖಂಡ್ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಛತ್ತೀಸ್ ಗಢದಲ್ಲಿ ಸಂಗ್ರಹಿಸಲಾಗಿರುವ ದತ್ತಾಂಶವನ್ನು ಆಧರಿಸಿವೆ.

18 ವರ್ಷ ಮೇಲ್ಪಟ್ಟವರಲ್ಲಿ ಏರಿಕೆಯಾಗುತ್ತಿರುವ ಅಸಮರ್ಪಕ ದೈಹಿಕ ಚಟುವಟಿಕೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು 2022ರ ದೈಹಿಕ ಚಟುವಟಿಕೆ ಕುರಿತ ಜಾಗತಿಕ ಸ್ಥಿತಿ ವರದಿಯಲ್ಲಿ ಅಧ್ಯಯನ ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News