ಮಹಿಳೆಗೆ ಕಿರುಕುಳ ನೀಡಿ ಕಾರಿನಿಂದ ಹೊರಹಾಕಿದ ಉಬೆರ್ ಚಾಲಕ

Update: 2017-03-17 04:31 GMT

ಹೊಸದಿಲ್ಲಿ, ಮಾ.17: ದೇಶಾದ್ಯಂತ ತನ್ನ ಚಾಲಕರಿಗೆ ಮಾದರಿ ನಡವಳಿಕೆ ಮಾರ್ಗಸೂಚಿಯನ್ನು ಉಬೆರ್ ಘೋಷಿಸಿದ ಒಂದು ವಾರದಲ್ಲೇ, ಉಬೆರ್ ಕ್ಯಾಬ್ ಚಾಲಕನೊಬ್ಬ ಮಹಿಳೆಗೆ ಕಿರುಕುಳ ನೀಡಿ, ಆಕೆಯನ್ನು ದಾರಿ ಮಧ್ಯೆಯೇ ವಾಹನದಿಂದ ಹೊರಹಾಕಿದ್ದಾನೆ ಎಂದು ಆಪಾದಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಪೋಸ್ಟ್ ವೈರಲ್ ಆಗಿದೆ. ಬುಧವಾರ ಪ್ರಯಾಣದ ವೇಳೆ ಮೊದಲು ಮಾತಿಗಿಳಿದ ಚಾಲಕ, ಬಳಿಕ ಕಿರುಕುಳ ನೀಡಿದ್ದಲ್ಲದೇ, ಬೆದರಿಕೆಯನ್ನೂ ಹಾಕಿದ್ದಾನೆ. ಇಷ್ಟಲ್ಲದೇ ಮಾರ್ಗ ಮಧ್ಯದಲ್ಲೇ ಕ್ಯಾಬ್‌ನಿಂದ ಹೊರಹಾಕಿದ್ದಲ್ಲದೇ, ತನ್ನನ್ನು ಹಿಂಬಾಲಿಸಿದ್ದ. ಕೊನೆಗೆ ಆತನನ್ನು ಹೆದರಿಸಿದ ಬಳಿಕ ವಾಪಸ್ಸಾದ ಎಂದು ಮಹಿಳೆ ದೂರಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗಿದ್ದು, ಚಾಲಕ ಕಂಪೆನಿಯ ಆ್ಯಪ್ ಬಳಸದಂತೆ ತಕ್ಷಣ ನಿರ್ಬಂಧ ವಿಧಿಸಲಾಗಿದೆ ಎಂದು ಉಬೆರ್ ಹೇಳಿದೆ.

ದಿಲ್ಲಿ ಹೊರವಲಯದ ಮೆಹರೌಲಿಯಿಂದ ಗುರಗಾಂವ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಮಹಿಳೆ ಹೇಳಿದ್ದಾರೆ. ಆರಂಭದಲ್ಲಿ ತೀರಾ ಸಲುಗೆಯಿಂದ ಚಾಲಕ ಮಾತನಾಡಿದ. ಆದರೆ ಖಾಸಗಿ ಪ್ರಶ್ನೆಗಳನ್ನು ಕೇಳತೊಡಗಿದಾಗ ಅನುಮಾನ ಮೂಡಿತು. ಪದೇ ಪದೇ ಮುಜುಗರ ತರುವ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದ. ನಿಮ್ಮ ಮನೆ ಎಲ್ಲಿ? ಒಬ್ಬರೇ ಇರುತ್ತೀರಾ? ನೀವು ದಿಲ್ಲಿಯವರಂತೆ ಕಾಣುವುದಿಲ್ಲ. ಏಕೆ ಏನೂ ಹೇಳುತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದ ಎಂದು ವಿವರಿಸಿದ್ದಾರೆ.

ಇಂಥ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಮಹಿಳೆ ಫೋನ್‌ನಲ್ಲಿ ಮಾತನಾಡತೊಡಗಿದರು. ಚಾಲಕನನ್ನು ನಿರ್ಲಕ್ಷ್ಯಿಸತೊಡಗಿದಾಗ ಕಾರಿನ ರೇಡಿಯೊ ಧ್ವನಿಯನ್ನು ಹೆಚ್ಚಿಸಿ ರಭಸದಿಂದ ವಾಹನ ಚಲಾಯಿಸತೊಡಗಿದ. ಅಂತಿಮವಾಗಿ ರಸ್ತೆ ಮಧ್ಯದಲ್ಲೇ ಕೆಳಕ್ಕೆ ಇಳಿಸಿ, ಹಿಂಬಾಲಿಸತೊಡಗಿದೆ. ಕೊನೆಗೆ ಮಹಿಳೆ ಕಾರು ಸಂಖ್ಯೆಯನ್ನು ಗುರುತು ಹಾಕಿಕೊಳ್ಳಲು ಮುಂದಾದಾಗ ಪರಾರಿಯಾದ ಎಂದು ಮಹಿಳೆ ಹೇಳಿದ್ದಾರೆ. ಈ ಬಗ್ಗೆ ಕಂಪೆನಿಗೂ ಮಹಿಳೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News