ಜನಾಂಗೀಯ ದಾಳಿ ಸಂದರ್ಭ ನೆರವು : ಅಮೆರಿಕ ಪ್ರಜೆಗೆ 1 ಲಕ್ಷ ಡಾಲರ್ ಕೊಡುಗೆ ನೀಡಿದ ಭಾರತೀಯರು

Update: 2017-03-26 19:49 IST
ಜನಾಂಗೀಯ ದಾಳಿ ಸಂದರ್ಭ ನೆರವು : ಅಮೆರಿಕ ಪ್ರಜೆಗೆ 1 ಲಕ್ಷ ಡಾಲರ್ ಕೊಡುಗೆ ನೀಡಿದ ಭಾರತೀಯರು
  • whatsapp icon

ವಾಷಿಂಗ್ಟನ್, ಮಾ.26: ಕಳೆದ ತಿಂಗಳು ಕನ್ಸಾಸ್‌ನ ಬಾರ್ ಒಂದರಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಮೇಲೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗುಂಡಿನ ದಾಳಿಯ ಸಂದರ್ಭ, ಭಾರತೀಯ ವ್ಯಕ್ತಿಗಳ ನೆರವಿಗೆ ಮುಂದಾಗಿ ಗುಂಡೇಟಿನಿಂದ ಗಾಯಗೊಂಡ ಅಮೆರಿಕದ ಪ್ರಜೆಗೆ ಭಾರತೀಯ ಅಮೆರಿಕನ್ನರು ಒಟ್ಟು ಸೇರಿ 1 ಲಕ್ಷ ಡಾಲರ್ ನಿಧಿಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಇಯಾನ್ ಗ್ರಿಲ್ಲಟ್ ಎಂಬ 24ರ ಹರೆಯದ ಈ ಯುವಕನನ್ನು ಹೂಸ್ಟನ್‌ನ ಇಂಡಿಯಾ ಹೌಸ್‌ನಲ್ಲಿ ನಡೆದ 14ನೇ ವಾರ್ಷಿಕ ಸಮಾರಂಭದಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ವತಿಯಿಂದ ‘ ನೈಜ ಅಮೆರಿಕನ್ ಹೀರೊ’ ಎಂಬ ಗೌರವದೊಂದಿಗೆ , 1 ಲಕ್ಷ ಡಾಲರ್ ಮೊತ್ತ ನೀಡಿ ಗೌರವಿಸಲಾಯಿತು. ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿರುವ ನವ್‌ತೇಜ್ ಸರ್ಣ ಚೆಕ್ ಹಸ್ತಾಂತರಿಸಿದರು. ತನ್ನ ಹುಟ್ಟೂರು ಕನ್ಸಾಸ್‌ನಲ್ಲಿ ಮನೆಯೊಂದನ್ನು ಖರೀದಿಸಲು ಗ್ರಿಲ್ಲಟ್‌ಗೆ ನೆರವಾಗುವ ಉದ್ದೇಶದಿಂದ ಈ ನಿಧಿಯನ್ನು ಸಂಗ್ರಹಿಸಲಾಗಿದೆ.

ಕನ್ಸಾಸ್‌ನ ಬಾರ್ ಒಂದರಲ್ಲಿ ಕಳೆದ ತಿಂಗಳು ಭಾರತೀಯ ಮೂಲದ ವ್ಯಕ್ತಿಗಳ ಮೇಲೆ ಅಮೆರಿಕದ ನಿವೃತ್ತ ಅಧಿಕಾರಿಯೋರ್ವ ನಡೆಸಿದ ಗುಂಡಿನ ದಾಳಿಯ ಸಂದರ್ಭ ಗ್ರಿಲ್ಲಟ್ ಭಾರತೀಯರ ನೆರವಿಗೆ ಧಾವಿಸಿದ್ದ. ಈ ವೇಳೆ ಆತನಿಗೆ ಗುಂಡೇಟು ತಗಲಿತ್ತು. ಘಟನೆಯಲ್ಲಿ ಶ್ರೀನಿವಾಸ ಕುಚಿಭೋಟ್ಲ ಎಂಬವರು ಮೃತಪಟ್ಟಿದ್ದು ಇನ್ನೋರ್ವ ಭಾರತೀಯ ಗಂಭೀರವಾಗಿ ಗಾಯಗೊಂಡಿದ್ದರು.

ಆ ಕ್ಷಣ ಹಾಗೆ ಮಾಡಬೇಕೆಂದು ನನ್ನ ಆತ್ಮಸಾಕ್ಷಿ ಕರೆ ನೀಡಿತು. ಜನರಲ್ಲಿ ಪ್ರೀತಿ ಮತ್ತು ವಿಶ್ವಾಸದ ಭಾವನೆ ಬೆಳೆಸಲು ಮತ್ತು ಸಶಕ್ತಗೊಳಿಸಲು ನೆರವಾಗಬೇಕು ಎಂಬ ್ಠ ಸಂದೇಶ ನನಗೆ ಸಿಕ್ಕಿದೆ. ಹೂಸ್ಟನ್ ಪ್ರದೇಶದಲ್ಲಿರುವ ಹಲವಾರು ಸಮುದಾಯದ, ಹಲವಾರು ಕುಟುಂಬದವರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ.

ಇಂಡಿಯಾ ಹೌಸ್‌ಗೆ ಆಗಮಿಸಿರುವುದು ನನಗೆ ಸಿಕ್ಕ ಬಹುದೊಡ್ಡ ಗೌರವ ಎಂದು ಗ್ರಿಲ್ಲಟ್ ತಿಳಿಸಿದರು. ಶೀಘ್ರ ಭಾರತಕ್ಕೆ ಭೇಟಿ ನೀಡುವ ಇಚ್ಛೆಯನ್ನೂ ಅವರು ಈ ಸಂದರ್ಭ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News