ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ನರ್ಸರಿಯಲ್ಲಿವೆ ಚಾಂಪಿಯನ್ ಗಿಡಗಳು !
ಚಾಂಪಿಯನ್ ಗಿಡಗಳು ! ಗೋಪಿಚಂದ್ ಈ ಅಕಾಡಮಿ ಕಟ್ಟಲು ಹೊರಟಾಗ ಬೆಂಬಲ ಕೇಳಿ ಸರಕಾರಗಳ ಹಾಗೂ ಹಲವು ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರ ಬಳಿ ಎಡತಾಕಿ ನಿರ್ಲಕ್ಷ್ಯದ, ಅವಮಾನದ ಸನ್ನಿವೇಶಗಳನ್ನು ಎದುರಿಸಿದ್ದರು. ಆದರೆ ಅವರಿಗಿದ್ದ ಇಚ್ಛಾಶಕ್ತಿ ಅವರನ್ನು ಹತಾಶೆಯತ್ತ ದೂಡದೆ ಹಿಡಿದ ಕೆಲಸ ಮುಂದುವರಿಸುವಂತೆ ಮಾಡಿತ್ತು.
ಭಾರತದ ಖ್ಯಾತ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಸ್ವತಃ ಮಾತನಾಡುವುದು ಕಡಿಮೆ. ಹೈದರಾಬಾದ್‌ನಲ್ಲಿರುವ ಅವರ ಗಮನವೆಲ್ಲ ಅಕಾಡಮಿ ಬಗ್ಗೆ. ಅಲ್ಲಿ ತರಬೇತಾಗಿ ವಿಶ್ವ ಬ್ಯಾಡ್ಮಿಂಟನ್ ಅಖಾಡದಲ್ಲಿ ಸೆಣೆಸಾಡುತ್ತಾ ಆಟಗಾರರು ಪದಕ ಗೆದ್ದಾಗೆಲ್ಲಾ ಗೋಪಿಚಂದ್ ಬಗ್ಗೆ ಇತರರೆಲ್ಲಾ ಮಾತನಾಡಬೇಕಾಗುತ್ತದೆ.
ಕಳೆದ ಒಂದು ದಶಕದಿಂದಲೂ ಇದು ನಡೆಯುತ್ತಿದೆ. ಗೋಪಿಯಿಂದ ತರಬೇತಾದ ಸಿಂಧು ಈಗ ಇಂಡಿಯಾ ಸೂಪರ್ ಸೀರಿಸ್ ಟೂರ್ನಿಯ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೊಂದು ಮೆಡಲ್ ತಂದುಕೊಟ್ಟಿದ್ದ ಕ್ರೀಡಾಪಟು ಈ ಸಿಂಧು.
ಬಾಲ್ಯದಲ್ಲಿ ಬ್ಯಾಡ್ಮಿಂಟನ್ ಆಡುತ್ತಾ, ಇಂಜಿನಿಯರಿಂಗ್ ಓದುವುದನ್ನು ಅದೃಷ್ಟವಶಾತ್ ತಪ್ಪಿಸಿಕೊಂಡ ಗೋಪಿಚಂದ್ 2001ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಟ್ರೋಫಿ ಗೆದ್ದಿದ್ದರು. 1980ರಲ್ಲಿ ಕರ್ನಾಟಕದ ಪ್ರಕಾಶ್ ಪಡುಕೋಣೆ ಅಲ್ಲಿ ಚಾಂಪಿಯನ್ ಆಗಿದ್ದರು. ನಂತರ 2003ರಲ್ಲಿ ಆಂಧ್ರ ಸರಕಾರದಿಂದ ಐದು ಎಕರೆ ಭೂಮಿಯನ್ನು ಲೀಸ್ ಆಧಾರದಲ್ಲಿ ಪಡೆದು, ತನ್ನ ಬಂಧು ಉದ್ಯಮಿ ನಿಮ್ಮಗಡ್ಡ ಪ್ರಸಾದ್‌ರಿಂದ ಹಣಕಾಸಿನ ಬೆಂಬಲ ಪಡೆದು, ತನ್ನ ಸ್ವಂತದ ಗಳಿಕೆ-ಉಳಿಕೆಗಳನ್ನೆಲ್ಲಾ ಸುರಿದು ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ತರಬೇತಿ ಅಕಾಡಮಿಯೊಂದನ್ನು ನಿರ್ಮಿಸಲು ಗೋಪಿಚಂದ್ ಐದು ವರ್ಷ ಕಾಲ ಕಷ್ಟಪಟ್ಟರು. ಅವರ ಆ ಶ್ರಮ ವ್ಯರ್ಥವಾಗಲಿಲ್ಲ. ಸೈನಾ ನೆಹ್ವಾಲ್, ಕಶ್ಯಪ್, ಸಿಂಧು.....ಹೀಗೆ ಹಲವು ಆಟಗಾರರು ವಿಶ್ವ ಬ್ಯಾಡ್ಮಿಂಟನ್ ರಂಗದಲ್ಲಿ ಭಾರತಕ್ಕೆ ಒಂದು ಸ್ಥಾನ ಸಿಗುವಂತೆ ತಯಾರಾಗಿದ್ದಾರೆ. ಭಾರತದ ಕ್ರೀಡಾ ಜಗತ್ತಿನಲ್ಲಿ ಹಲವು ಅಸಾಮಾನ್ಯ ಕೋಚ್‌ಗಳು ಇದ್ದಾರೆ. ಕ್ರಿಕೆಟ್‌ನಲ್ಲಿ ರಮಾಕಾಂತ್ ಅಜ್ರೇಕರ್, ಬ್ಯಾಡ್ಮಿಂಟನ್‌ನಲ್ಲಿ ಆರಿಫ್, ಅಥ್ಲೆಟಿಕ್ಸ್‌ನಲ್ಲಿ ಒ.ಎಂ. ನಂಬಿಯಾರ್, ಕುಸ್ತಿಯಲ್ಲಿ ಮಹಾವೀರ್‌ಸಿಂಗ್ ಪೋಗಟ್, ಈಜಿನಲ್ಲಿ ನಿಹಾರ್ ಸಿಂಗ್ ಇವರೆಲ್ಲಾ ಅಸಾಧಾರಣ ಸಾಧಕರು. ವಿಶ್ವ ಕ್ರೀಡಾ ಪೈಪೋಟಿಯಲ್ಲಿ ಭಾರತ ಹಲವು ಸಾಧನೆ ದಾಖಲಿಸುವ ಮಟ್ಟಕ್ಕೆ ಯುವ ಕ್ರೀಡಾಳುಗಳಿಗೆ ತರಬೇತಿ ನೀಡಿದವರು. ಇವರ ಸಾಲಿನಲ್ಲಿ ಪುಲ್ಲೇಲ ಗೋಪಿಚಂದ್ ಅಸಾಮಾನ್ಯ ಛಲಗಾರ ಹಾಗೂ ಕೌಶಲ್ಯ ಹೊಂದಿರುವ ಕೋಚ್ ಎಂಬುದು ಈಗ ಸಾಬೀತಾಗುತ್ತಿದೆ.
ಗೋಪಿಚಂದ್ ಈ ಅಕಾಡಮಿ ಕಟ್ಟಲು ಹೊರಟಾಗ ಬೆಂಬಲ ಕೇಳಿ ಸರಕಾರಗಳ ಹಾಗೂ ಹಲವು ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರ ಬಳಿ ಎಡತಾಕಿ ನಿರ್ಲಕ್ಷ್ಯದ, ಅವಮಾನದ ಸನ್ನಿವೇಶಗಳನ್ನು ಎದುರಿಸಿದ್ದರು. ಆದರೆ ಅವರಿಗಿದ್ದ ಇಚ್ಛಾಶಕ್ತಿ ಅವರನ್ನು ಹತಾಶೆಯತ್ತ ದೂಡದೆ ಹಿಡಿದ ಕೆಲಸ ಮುಂದುವರಿಸುವಂತೆ ಮಾಡಿತ್ತು. 8 ಕೋರ್ಟ್‌ಗಳು, ಈಜುಕೊಳ, ಜಿಮ್ನಾಷಿಯಂ, ಕಿಚನ್ ಹಾಗೂ ವಸತಿ ವ್ಯವಸ್ಥೆಗಳಿರುವ ಅವರ ತರಬೇತಿ ಅಕಾಡಮಿಯಲ್ಲೀಗ ಅರುವತ್ತು ಯುವ ಆಟಗಾರರು ವಿಶ್ವದರ್ಜೆಯ ತರಬೇತಿ ಪಡೆಯುತ್ತಿದ್ದಾರೆ. ಗೋಪಿಚಂದ್ ತನ್ನ ಅಕಾಡಮಿ ಮಾತ್ರ ಅಲ್ಲದೆ ಬೇರೆಡೆಯೂ ಹೋಗಿ ಕೋಚ್‌ಗಳಿಗೂ ತರಬೇತಿ ನೀಡುತ್ತಾ ತನ್ನ ಅನುಭವಗಳನ್ನು ದಾಟಿಸುತ್ತಿದ್ದಾರೆ.
ಅವರೀಗ ಭಾರತದ ಮುಂದಿನ ಮೂರು ಒಲಿಂಪಿಕ್ಸ್ ಟೂರ್ನಿಯ ಸಿದ್ಧತಾ ಸಮಿತಿಯ ಸದಸ್ಯದಲ್ಲಿ ಒಬ್ಬರಾಗಿದ್ದಾರೆ. ಪ್ರಾಕ್ಟಿಕಲ್ಲಾಗಿ ಯೋಚಿಸುವ, ಅಗತ್ಯವಿರುವಷ್ಟೆ ಮಾತಾಡುವ ಗೋಪಿಚಂದ್ ಭಾರತದ ಕ್ರೀಡಾಕ್ಷೇತ್ರ ಕಂಡಿರುವ ಅಪರೂಪದ ಕೋಚ್.
ನಮ್ಮ ರಾಜಕಾರಣಿಗಳು, ಮೀಡಿಯಾಗಳೆಲ್ಲಾ ಸೈನಾ, ಸಿಂಧು, ಕಶ್ಯಪ್, ಜ್ವಾಲಾ, ಅಶ್ವಿನ್‌ರನ್ನು ಮೆಚ್ಚಿ ಕೊಂಡಾಡುತ್ತಿರುವಾಗ ಗೋಪಿಚಂದ್ ಇನ್ನಷ್ಟು ಮುಂದಕ್ಕೆ ಯೋಚಿಸುತ್ತಿದ್ದರು.
ಅವರ ಯೋಚನಾ ಧಾಟಿ ಹಾಗೂ ವ್ಯಕ್ತಿತ್ವ ಅರ್ಥಮಾಡಿಕೊಳ್ಳಲು ಆತನದ್ದೇ ಒಂದು ವಿಶ್ಲೇಷಣೆ ನೋಡಿ.
‘‘ವಿಶ್ವಬ್ಯಾಡ್ಮಿಂಟನ್‌ನ ಟಾಪ್ 25 ಆಟಗಾರರಲ್ಲಿ ಈಗ ಭಾರತದ ಐದು ಮಂದಿ ಇದ್ದಾರೆ. ಆದರೆ ಚೀನಾದವರು ಏಳು ಮಂದಿ ಇದ್ದಾರೆ. ಹಾಗೂ ಅವರೆಲ್ಲಾ ಮೊದಲ ಹತ್ತು ರ್ಯಾಂಕ್‌ನೊಳಗಿದ್ದಾರೆ ಅಂದಿದ್ದಾರೆ’’ ಗೋಪಿಚಂದ್. ಅಂದರೆ ವಿಶ್ವ ರ್ಯಾಂಕಿಂಗ್‌ನ ಮೊದಲ 25ರೊಳಗೆ ಕಾಣಿಸಿಕೊಳ್ಳುವುದು ಒಂದು ಸಾಧನೆ ನಿಜ. ಆದರೆ ಬ್ಯಾಡ್ಮಿಂಟನ್‌ನ ಪ್ರಮುಖ ಟೂರ್ನಿಗಳ ಚಿನ್ನದ ಪದಕಗಳನ್ನೆಲ್ಲಾ ಮೊದಲ ಹತ್ತು ಸ್ಥಾನದಲ್ಲಿರುವ ಆಟಗಾರರ ನಡುವೆ ವಿಲೇವಾರಿಯಾಗುತ್ತವೆ. ಉಳಿದವರಿಗೆ ಕೇವಲ ರ್ಯಾಂಕಿಂಗ್ ಸ್ಥಾನಗಳಷ್ಟೇ ಸಮಾಧಾನಕರ ಬಹುಮಾನಗಳಾಗಿ ಸಿಗುತ್ತವೆ.
ಈ ವಿಚಾರದಲ್ಲಿ ಸದ್ಯಕ್ಕೆ ಚೀನಿಯರನ್ನು ಮೀರಿಸುವವರೇ ಇಲ್ಲ. ವಿಶ್ವ ಬ್ಯಾಡ್ಮಿಂಟನ್‌ನ ಅತ್ಯುತ್ತಮ ಆಟಗಾರರನ್ನು ಹಾಗೂ ತಂಡಗಳನ್ನು ಪಾಯಿಂಟ್ಸ್ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.
ಈಗಿನ ರ್ಯಾಂಕಿಂಗ್ ಹೀಗಿದೆ.
ಈ ಅಂಕಿಅಂಶ ನೋಡಿದರೆ ಭಾರತ ಕ್ರಮಿಸಬೇಕಾದ ಹಾದಿ ಅದಿನ್ನೆಷ್ಟು ದೂರವಿದೆ ಎಂಬುದು ತಿಳಿಯುತ್ತದೆ. ನಮ್ಮ ಸಾಮಾಜಿಕ ರೋಗಗಳು, ಜಾತಿ, ಅಂತಸ್ತು, ಆಹಾರದ ವಿಚಾರದ ಬೀದಿ ಜಗಳಗಳು, ಸರಕಾರಗಳ ನಿಷ್ಕ್ರೀಯತೆಗಳಿಂದಾಗಿ ಇಲ್ಲಿ ಚಾಂಪಿಯನ್‌ಗಳನ್ನು ರೂಪಿಸುವುದು ಕಷ್ಟದ ಕೆಲಸ. ಕ್ರೀಡಾಪಟುಗಳ ಸಾಧನೆಗೆ ಜಾತಕ, ಗ್ರಹಗತಿ, ನಾಗದೋಷಗಳಲ್ಲಿ ಕಾರಣ ಹುಡುಕುವ, ಗಂಜಲ ಕುಡಿದರೆ ಚಾಂಪಿಯನ್ ಆಗಬಹುದು ಎಂದರೂ ನಂಬುವ ಜನರಿರುವ ದೇಶ ಇದು. ವೃತ್ತಿಪರತೆ, ವೈಜ್ಞಾನಿಕ ಮನೋಭಾವ, ಖಡಕ್ ಲೆಕ್ಕಾಚಾರಗಳ ಕ್ರೀಡಾರಂಗದಲ್ಲಿ ಆಧುನಿಕ ಮನಸ್ಥಿತಿ ಇದ್ದರಷ್ಟೆ ಸೆಣೆಸಾಡಲು ಸಾಧ್ಯ.
ಪುಲ್ಲೇಲ ಗೋಪಿಚಂದ್ ತಕ್ಷಣದ ಯಶಸ್ಸು, ಒಂದೆರಡು ಪದಕಗಳಿಗೆ ತೃಪ್ತಿ ಪಡುವ ಕೋಚ್ ಅಲ್ಲ. ತಮ್ಮ ಶಿಷ್ಯರು ಯಾವುದಾದರೂ ಪದಕ ಜಯಿಸಿ ಬಂದಾಗ ನಕ್ಕು, ಬೆನ್ನುತಟ್ಟಿ ಸಂತೋಷ ವ್ಯಕ್ತಪಡಿಸುತ್ತಾರೆ. ಆದರೆ ಸಾಗಬೇಕಾದ ಹಾದಿ ಬಹಳ ದೂರವಿದೆ ಎಂಬುದು ಅವರಿಗೆ ತಿಳಿದಿದೆ.
ಅದೇನೆ ಇರಲಿ, ವಿಶ್ವಬ್ಯಾಡ್ಮಿಂಟನ್ ರಂಗದಲ್ಲಿ ಭಾರತಕ್ಕೊಂದು ಗೌರವ ದ ಸ್ಥಾನ ತಂದುಕೊಟ್ಟ ಪುಲ್ಲೇಲ ಗೋಪಿಚಂದ್ ಅಭಿನಂದನಾರ್ಹರು.