ಚೀನಾ ವಿಮಾನಗಳನ್ನು ಅಟ್ಟಿಸಲು ದಾಖಲೆ ಸಂಖ್ಯೆಯಲ್ಲಿ ಜಪಾನ್ ವಿಮಾನಗಳು
ಟೋಕಿಯೊ, ಎ. 13: ಪೂರ್ವ ಚೀನಾ ಸಮುದ್ರದಲ್ಲಿ ಚೀನಾದ ಸೇನಾ ಚಟುವಟಿಕೆಗಳು ಹೆಚ್ಚುತ್ತಿರುವಂತೆಯೇ, ವಿದೇಶಿ ವಿಮಾನಗಳನ್ನು ಅಟ್ಟಿಸಿಕೊಂಡು ಹೋಗಲು ಜಪಾನ್ ತನ್ನ ಯುದ್ಧ ವಿಮಾನಗಳನ್ನು ದಾಖಲೆಯ ಸಂಖ್ಯೆಯಲ್ಲಿ ಕಳೆದ ವರ್ಷ ನಿಯೋಜಿಸಿದೆ ಎಂದು ಗುರುವಾರ ಬಿಡುಗಡೆ ಮಾಡಲಾದ ಸರಕಾರಿ ಅಂಕಿಸಂಖ್ಯೆಗಳು ತಿಳಿಸಿವೆ.
ಜಪಾನ್ ವಾಯು ಕ್ಷೇತ್ರದೊಳಗೆ ಚೀನಾ ಪ್ರವೇಶಿಸುವುದು, ಪೂರ್ವ ಚೀನಾ ಸಮುದ್ರ ಮತ್ತು ಪಶ್ಚಿಮ ಪೆಸಿಫಿಕ್ ಸಮುದ್ರದಲ್ಲಿ ತನ್ನ ಸೇನಾ ಪ್ರಭಾವವನ್ನು ಹೆಚ್ಚಿಸುವ ಅದರ ಯೋಜನೆಯ ಭಾಗವಾಗಿದೆ ಎಂಬ ಆತಂಕವನ್ನು ಜಪಾನ್ ಹೊಂದಿದೆ. ಈ ವಲಯದಲ್ಲಿ ಜಪಾನ್ 1,400 ಕಿ.ಮೀ. ವಿಸ್ತಾರದ ದ್ವೀಪ ಸಮೂಹಗಳನ್ನು ಹೊಂದಿದೆ.
‘‘ಇತ್ತೀಚೆಗೆ ಚೀನಾದ ವಿಮಾನಗಳು ಇನ್ನಷ್ಟು ದಕ್ಷಿಣಕ್ಕೆ ನುಗ್ಗುತ್ತಿರುವುದನ್ನು ಹಾಗೂ ಆ ಮೂಲಕ ಅವರು ಪ್ರಧಾನ ಒಕಿನಾವ ದ್ವೀಪಕ್ಕೆ ಹತ್ತಿರವಾಗುತ್ತಿರುವುದನ್ನು ನಾವು ನೋಡಿದ್ದೇವೆ’’ ಎಂದು ಜಪಾನ್‌ನ ಉನ್ನತ ಸೇನಾಧಿಕಾರಿ ಅಡ್ಮಿರಲ್ ಕಟ್ಸುಟೊಶಿ ಕವಾನೊ ಟೋಕಿಯೊದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ಒಕಿನಾವ ದ್ವೀಪದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಮೆರಿಕದ ಮರೀನ್ ಕಾರ್ಪ್ ಪಡೆಗಳಿವೆ. ಜಪಾನ್‌ನಲ್ಲಿ ನಿಯೋಜಿಸಲಾಗಿರುವ ಸುಮಾರು 50,000 ಅಮೆರಿಕ ಸೈನಿಕರ ಪೈಕಿ ಹೆಚ್ಚಿನವರು ಒಕಿನಾವ ದ್ವೀಪದಲ್ಲಿದ್ದಾರೆ.
ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳುವ 12 ತಿಂಗಳುಗಳ ಅವಧಿಯಲ್ಲಿ, ಜಪಾನ್ ಯುದ್ಧ ವಿಮಾನಗಳನ್ನು 1,168 ಬಾರಿ ನಿಯೋಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 873 ಅಧಿಕವಾಗಿದೆ.