ಒಡೆದ ದುಃಖದ ಕಟ್ಟೆ

Update: 2017-06-14 18:31 GMT

ಒಂದು ದಿನ ಪತ್ನಿಯನ್ನು ನೋಡು ನೋಡುತ್ತಾ ತಟ್ಟನೆ ಕೇಳಿಯೇ ಬಿಟ್ಟರು ‘‘ನಿನಗಾದರೂ ಅವನು ಸೇನೆ ಸೇರದಂತೆ ತಡೆಯಬಹುದಿತ್ತಲ್ಲ? ನೀನೇಕೆ ಹಟ ಹಿಡಿಯಬಾರದಿತ್ತು?’’

ಲಕ್ಷ್ಮಮ್ಮ ಆ ಮಾತಿಗೆ ಪ್ರತಿಕ್ರಿಯಿಸಲೇ ಇಲ್ಲ. ‘‘ಬಹುಶಃ ನೀನು ಅವತ್ತು ಹಟ ಹಿಡಿದಿದ್ದರೆ ನನಗೂ ಒಂದು ನಿರ್ಧಾರ ತಳೆಯಲು ಸುಲಭವಾಗುತ್ತಿತ್ತು. ನೀನು ಬೇಡ ಎಂದಿದ್ದರೆ ನಾನು ಅವನನ್ನು ಕಳುಹಿಸುತ್ತಿರಲಿಲ್ಲವೇನೋ...’’ ಮತ್ತೆ ಹೇಳಿದರು.

‘‘ಈ ಮನೆಯಲ್ಲಿ ನನ್ನ ಮಾತಿಗೆ ಎಲ್ಲಿ ಬೆಲೆಯಿತ್ತು? ಒಂಬತ್ತು ತಿಂಗಳು ಹೊಟ್ಟೆಯೊಳಗಿಟ್ಟು ಹೆತ್ತ ಮಗುವಿನ ಹೆಸರನ್ನು ಇಡುವಾಗಲಾದರೂ ನನ್ನಲ್ಲಿ ಇದು ಚೆನ್ನಾಗಿದೆಯೇ? ಇಲ್ಲವೇ? ಎಂದು ಯಾರಾದರೂ ಕೇಳಿದ್ದಾರೆಯೇ?’’ ಲಕ್ಷ್ಮಮ್ಮ ಸಿಡಿದರು.

‘‘ಹೆಸರಿನಲ್ಲೇನಿದೆ ಬಿಡು?’’

‘‘ಹೆಸರಿನಲ್ಲೇ ಇದೆ. ಪ್ರತಾಪ ಸಿಂಹ ಎನ್ನುವ ಹೆಸರು ನಮಗೆ ತಕ್ಕದ್ದಲ್ಲ ಎಂದೆ. ಮುಕುಂದ ಎಂಬ ಹೆಸರಿಡೋಣ...ಅವನ ತಾತನ ಹೆಸರು. ನಮ್ಮೂರಿಗೇ ದೊಡ್ಡ ಹೆಸರು. ಕೇಳಿದಿರಾ ನೀವು? ಗುರೂಜಿಯಿಟ್ಟ ಹೆಸರು, ಅದೂ ಇದೂ ಎಂದು ನನಗೆ ಅರ್ಥವಾಗದ್ದನ್ನೆಲ್ಲ ಹೇಳಿ ಬಾಯಿ ಮುಚ್ಚಿಸಿದಿರಿ. ಸಂಗೀತ ಕಲಿಯಲಿ ಎಂದು ಹೇಳಿದೆ. ಅದಕ್ಕಾದರೂ ಆಸಕ್ತಿ ತೋರಿಸಿದಿರಾ? ಅದೂ ಇಲ್ಲ. ಸಣ್ಣ ಗುಡುಗಿನ ಸದ್ದು ಕೇಳಿದರೆ ಓಡಿ ಬಂದು ನನ್ನ ಮಡಿಲು ಸೇರುತ್ತಿದ್ದ ಕಂದ ಅದು...ಅದೆಲ್ಲೋ ಕಾಡು, ಗುಡ್ಡಗಳಲ್ಲಿ ಅಲೆದಾಡುವ ಪಾದಗಳೇ ಅವು...? ಅವನು ಯಾವಾಗ ಸೇನೆ ಸೇರಿದನೋ ಅಲ್ಲಿಂದ ಒಂದು ರಾತ್ರಿಯೂ ನಾನು ಸರಿಯಾಗಿ ನಿದ್ದೆ ಮಾಡಿಲ್ಲ.... ನಿದ್ದೆಯೇನಾದರೂ ಹತ್ತಿತೋ ದುಃಸ್ವಪ್ನಗಳು...ನನ್ನ ಮಗು ಯಾವುದೋ ದಟ್ಟಾರಣ್ಯದಲ್ಲಿ ರಾಕ್ಷಸರ ನಡುವೆ ಸಿಕ್ಕು ಹಾಕಿಕೊಂಡು ಅಮ್ಮಾ ಎಂದು ಕರೆಯುವ ಹಾಗೆ ಕನಸುಗಳು....’’ ಮಾತನಾಡುತ್ತಾ ಅವರ ದುಃಖದ ಕಟ್ಟೆ ಒಡೆಯಿತು. ಅವರು ಗೋಳೋ ಎಂದು ಅಳತೊಡಗಿದರು.

ಅನಂತಭಟ್ಟರು ಪತ್ನಿ ಅಳುವುದನ್ನೇ ನೋಡುತ್ತಿದ್ದರು. ಅದು ಅಳುವಲ್ಲ, ಭೋರ್ಗರೆವ ಜಲಪಾತ ಎನ್ನುವುದು ಅವರಿಗೆ ಗೊತ್ತಿತ್ತು. ಅದನ್ನು ಕಟ್ಟಿ ನಿಲ್ಲಿಸಲು ಸಾಧ್ಯವಿಲ್ಲ. ನಿಲ್ಲಿಸಲೂ ಬಾರದು. ಲಕ್ಷ್ಮಮ್ಮನ ಅಳು ಒಂದು ಸಣ್ಣ ತೊರೆಯಂತೆ ದಂಪತಿಯ ನಡುವೆ ದಾರಿ ಕೊರೆಯ ತೊಡಗಿತು. ಆ ಹರಿವ ತೊರೆಯ ದಡಗಳಲ್ಲಿ ಕುಳಿತು ಅವರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಸಿಟ್ಟಾಗುತ್ತಿದ್ದರು. ಪರಸ್ಪರ ಸಾಂತ್ವನ ಹೇಳುತ್ತಿದ್ದರು. ಪಪ್ಪುವಿನ ಬಾಲ್ಯದ ದಿನಗಳನ್ನು ಹಂಚಿಕೊಂಡು ಖುಷಿ ಪಡುತ್ತಿದ್ದರು.

‘‘ನಿಮಗೆ ಗೊತ್ತಾ? ಒಂದು ದಿನ ಪಪ್ಪು ಬಂದು ನನ್ನಲ್ಲಿ ಪಾರಿವಾಳಗಳಲ್ಲಿ ಮುಸ್ಲಿಮ್ ಪಾರಿವಾಳಗಳು ಇವೆಯಾ ಎಂದು ಕೇಳಿದ್ದ....’’ ಲಕ್ಷಮ್ಮ ಯಾವುದೋ ನೆನಪನ್ನು ಹೆಕ್ಕಿ ಹೇಳಿದರು.

‘‘ಅದು ಆ ಬ್ಯಾರಿಯ ಸಹವಾಸ. ಆದರೆ ಆ ಬ್ಯಾರಿ ಹುಡುಗ ತುಂಬಾ ಒಳ್ಳೆಯವನು ಆಯಿತಾ. ಪೇಟೆಯಲ್ಲಿ ಆಗಾಗ ಅವನ ರಿಕ್ಷಾದ ಜೊತೆ ಸಿಗ್ತಾನೆ. ನನ್ನನ್ನು ಕಂಡರೆ ತುಂಬಾ ಗೌರವ. ಸಿಕ್ಕಿದರೆ ನೀವು ನಮ್ಮ ಪಪ್ಪುವಿನ ತಂದೆ ಅಲ್ಲವಾ? ಎಂದು ಕೇಳುತ್ತಾನೆ. ಪಪ್ಪುವಿನ ಬಗ್ಗೆ ಭಾರೀ ಹೆಮ್ಮೆ ಅವನಿಗೆ. ನಾಲ್ಕೈದು ಬಾರಿ ಅವನ ರಿಕ್ಷಾದಲ್ಲಿ ಉಪ್ಪಿನಂಗಡಿಗೆ ಹೋಗಿದ್ದೆ. ಆದರೆ ಅವನು ದುಡ್ಡೇ ತೆಗೆದುಕೊಳ್ಳುವುದಿಲ್ಲ. ಪಪ್ಪುವಿನ ತಂದೆಯ ಕೈಯಿಂದ ನಾನು ದುಡ್ಡು ತೆಗೆದುಕೊಳ್ಳುವುದಾ? ಎಂದು ಕೇಳಿದ. ಆಮೇಲೆ ನನಗೇ ಸಂಕೋಚವಾಗಿ ಅವನ ರಿಕ್ಷಾದಲ್ಲಿ ಹೋಗುವುದು ಬಿಟ್ಟೆ. ನಮ್ಮಿಂದಾಗಿ ಪಾಪ ಅವನಿಗೇಕೆ ನಷ್ಟ. ಅವನ ರಿಕ್ಷಾದ ಹೆಸರು ಗೊತ್ತುಂಟಾ...ದೇಶಪ್ರೇಮಿ ಅಂತ. ಬ್ಯಾರಿಗಳಲ್ಲಿ ಹಾಗೆಲ್ಲ ಹುಡುಗರು ಇರುವುದು ಕಮ್ಮಿ....’’

ಒಂದು ದಿನ ಲಕ್ಷ್ಮಮ್ಮ ಮಾತನಾಡುತ್ತಾ ಹೇಳಿ ಬಿಟ್ಟರು ‘‘ನರಸಿಂಹಯ್ಯ ಒಪ್ಪದೇ ಇದ್ದರೂ ಶಿವರಂಜಿನಿಗೆ ನನ್ನ ಮಗನ ಮೇಲೆ ಇಷ್ಟ ಇತ್ತು. ನನ್ನ ಪಪ್ಪುವಿಗೆ ಮೂರು ವರ್ಷ ಚಿಕ್ಕೋಳು. ಶಾಲೆಯಲ್ಲಿ ಇವನು ಓಡಾಡುವಾಗೆಲ್ಲ ಆಕೆ ಇವನನ್ನು ಗಮನಿಸುತ್ತಿದ್ದಳಂತೆ. ಸೇನೆ ಸೇರಿದ್ದು ಅವಳಿಗೆ ತುಂಬಾ ಇಷ್ಟ ಆಗಿತ್ತು. ಕೆಲ ಸಮಯದ ಹಿಂದೆ ನಾನೇ ಗುಟ್ಟಾಗಿ ಅವಳಲ್ಲಿ ಕೇಳಿದ್ದು ‘ನನಗೆ ಸೊಸೆಯಾಗಿ ಬರುತ್ತೀಯಾ?’ ಅಂತ. ಅವಳು ನಾಚಿಕೊಂಡಳು. ‘ಅಪ್ಪಾಜಿಯತ್ರ ಮಾತನಾಡಿ. ಅವರು ಒಪ್ಪಿದರೆ ಸರಿ’ ಎಂದಿದ್ದಳು. ಆ ಧೈರ್ಯದಿಂದಲೇ ನಾನು ನಿಮ್ಮಲ್ಲಿ ಆ ಸಂಬಂಧದ ಬಗ್ಗೆ ಹೇಳಿದ್ದು. ನಿಜ ಹೇಳಿದರೆ, ಹುಡುಗಿ ಮುತ್ತಿನಂಥವಳು. ಅವಳಿಗೆ ಪಪ್ಪುವನ್ನು ಮದುವೆಯಾಗುವ ಇಷ್ಟ ಇತ್ತು....’’

ಅನಂತಭಟ್ಟರಲ್ಲಿ ಮಾತಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಅವರು ತುಟಿ ಬಿಚ್ಚಿದರು ‘‘ಲೇ...ಅವರನ್ನು ದೂರಿ ಪ್ರಯೋಜನವಿಲ್ಲ. ನಾನು ನಿನ್ನಲ್ಲಿ ಒಂದು ಮಾತು ಕೇಳುತ್ತೇನೆ. ನಿನಗೆ ಒಬ್ಬಳೇ ಒಬ್ಬಳು ಮಗಳಿದ್ದಾಳೆ ಎಂದರೆ ನೀನು ಅವಳನ್ನು ಮಿಲಿಟರಿಯವನಿಗೆ ಕೊಡುತ್ತಿದ್ದೆಯಾ?’’

‘‘ನೀವು ಒಪ್ಪುವುದಾಗಿದ್ದರೆ ಕೊಡುತ್ತಿದ್ದೆ. ನೀವು ಒಪ್ಪಿದಿರಿ ಎಂದು ತಾನೆ ನಾನು ನನ್ನ ಒಬ್ಬನೇ ಮಗನನ್ನು ಸೇನೆಗೆ ಕಳುಹಿಸಿದ್ದು....’’ ಥಟ್ಟನೆ ಉತ್ತರಿಸಿದರು. ‘‘ಯಾಕೆ, ನೀವು ಒಪ್ಪುತ್ತಿರಲಿಲ್ಲವೇ?’’ ಲಕ್ಷ್ಮಮ್ಮ ಮರು ಪ್ರಶ್ನೆ ಹಾಕಿದರು.

ಅನಂತಭಟ್ಟರಲ್ಲಿ ಮಾತಿಲ್ಲ.

‘‘ನೀವು, ನಿಮ್ಮ ಗುರೂಜಿ ಸೇರಿ ನನ್ನ ಒಬ್ಬನೇ ಮಗನನ್ನು ಗೊತ್ತಿದ್ದ್ದೂ ಗೊತ್ತಿದ್ದೂ ಹುಲಿಗೆ ಕೊಟ್ಟು ಬಿಟ್ಟಿರಿ’’ ಲಕ್ಷ್ಮಮ್ಮ ಅಬ್ಬರಿಸಿ ಎದ್ದು ಒಳ ಹೋದರು. ಹೊರಗಡೆ ಗಾಳಿಗೆ ತೆಂಗಿನ ಮಡಲು ಬಿದ್ದ ಸದ್ದು.

ಆಮೇಲೆ ಎರಡು ದಿನ ಗಂಡನ ಜೊತೆ ಅವರಲ್ಲಿ ಮಾತಿರಲಿಲ್ಲ. ಈ ನಡುವೆ ಮಳೆಗಾಳಿಗೆ ಮನೆಸುತ್ತ ಕಟ್ಟಿದ್ದ ಬೇಲಿ ತಂತಿ ಕಡಿದು ಬಿದ್ದಿತ್ತು. ನಾಲ್ಕೈದು ತೆಂಗಿನ ಗರಿಗಳು ಮರದಲ್ಲೇ ಅರ್ಧ ನೇತಾಡತೊಡಗಿದ್ದವು. ಹೀಗೆ ಬಿಟ್ಟರೆ ಮಾಡಿನ ಮೇಲೆ ಬಿದ್ದು ಆಪತ್ತು ಎಂದು ಭಟ್ಟರು ಪಕ್ಕದ ದಟ್ಟಿಗೆಯ ಮೋಂಟನನ್ನು ಕರೆಸಿ ಮರ ಹತ್ತಿಸಿದರು. ಹಾಗೆಯೇ ಉದುರುವುದಕ್ಕೆ ಸಿದ್ಧವಾಗಿದ್ದ ಕೆಲವು ಕಾಯಿಗಳನ್ನೂ ಮೋಂಟ ಕಿತ್ತು ಹಾಕಿದ. ಅಂದು ಮೋಂಟನಲ್ಲಿ ಅನಂತ ಭಟ್ಟರು ಅದೂ ಇದೂ ಅಂತ ಕುಶಲೋಪರಿ ಮಾತನಾಡುತ್ತಾ ಇದ್ದರು. ಇದ್ದಕ್ಕಿದ್ದಂತೆಯೇ ಅಲ್ಲಿಗೆ ನಗುತ್ತಾ ಬಂದ ಲಕ್ಷ್ಮಮ್ಮ ‘‘ಅಲ್ಲವಾ ಮೋಂಟ...ಈ ನಮ್ಮ ಪಪ್ಪು ನಿಮ್ಮ ಜಾತಿಯಲ್ಲಿ ಒಬ್ಬ ಯಾರೋ ಮಿಲಿಟರಿಯಲ್ಲಿದ್ದ ಎಂದು ಹೇಳುತ್ತಿದ್ದ. ಅವನ ಬಗ್ಗೆ ನಿನಗೆ ಗೊತ್ತುಂಟಾ?’’ ಎಂದು ಕೇಳಿದರು.

‘‘ಯಾರಕ್ಕ...ಯಾರ ಬಗ್ಗೆ ನೀವು ಮಾತನಾಡು ವುದು?’’ ಮೋಂಟ ಅರ್ಥವಾಗದೆ ಕೇಳಿದ.

ಆಗ ಅನಂತಭಟ್ಟರು ಧ್ವನಿಗೂಡಿಸಿದರು ‘‘ಅದೇ ವೆಂಕಟ ಅಂತ. ಒಂದು ಏಳೆಂಟು ವರ್ಷಗಳ ಹಿಂದೆ ಯುದ್ಧದಲ್ಲಿ ಗುಂಡೇಟು ಬಿದ್ದು ಸತ್ತದ್ದು...ಶಾಲೆಯಲ್ಲಿ ಮೆರವಣಿಗೆ ಆಯಿತು ನೋಡು...’’

‘‘ಓ ಗೊತ್ತಾಯಿತು...ಆ ವೆಂಕಟನಾ? ಎರಡು ದಿನದ ಹಿಂದೆ ಅವರ ದಟ್ಟಿಗೆಗೆ ಹೋಗಿದ್ದೆ. ಮೊನ್ನೆಯ ಮಳೆಗೆ ಅವರ ಮುಳಿಮಾಡು ಪೂರ್ತಿ ಹಾರಿ ಹೋಗಿದೆ...ಸರಿಮಾಡುವುದಕ್ಕೆಂದು ಹೋದದ್ದು...ಅವನ ಹೆಂಡತಿಯ ಕಷ್ಟ ಹೇಳಿ ಸುಖ ಇಲ್ಲ. ಬೆಳೆದ ಮಗಳು ಒಂದು ಇದೆ. ಮತ್ತೊಂದು ಸಣ್ಣದು. ವೆಂಕಟ ಸತ್ತಾಗ ಅವಳು ತುಂಬು ಗರ್ಭಿಣಿಯಾಗಿದ್ದಳು....’’

ದಂಪತಿ ವೌನವಾದರು. ಮೋಂಟ ಅಂದು ಹೋಗುವಾಗ ಲಕ್ಷ್ಮಮ್ಮ ಒಂದು ಚೀಲದಲ್ಲಿ ಒಂದಿಷ್ಟು ತರಕಾರಿ, ಅಕ್ಕಿ, ತೆಂಗಿನಕಾಯಿ ಕೊಟ್ಟು ಹೇಳಿದರು ‘‘ನೋಡು...ಇದನ್ನು ನೀನು ಕೊಂಡು ಹೋಗಿ ಆ ವೆಂಕಟನ ಹೆಂಡತಿಯ ಕೈಗೆ ಕೊಡಬೇಕು...ಆಯಿತಾ?’’ ಅಂದು ಇಡೀ ದಿನ ಲಕ್ಷ್ಮಮ್ಮ ಲವಲವಿಕೆ ಯಿಂದಿದ್ದುದು ನೋಡಿ ಅನಂತಭಟ್ಟರಿಗೆ ಖುಷಿಯಾಯಿತು. ಒಂದು ರಾತ್ರಿ ಲಕ್ಷಮ್ಮನಿಗೆ ವಿಚಿತ್ರ ಕನಸು ಬಿತ್ತು. ಆ ಕನಸಲ್ಲಿ ನೇತ್ರಾವತಿಯ ನೆರೆ ನೀರಿನ ಮಧ್ಯೆ ಇರುವ ಕಂಚಿಕಲ್ಲು ಕಂಡಿತು. ಮತ್ತು ಅದರ ಕಡೆಗೆ ಯಾರೋ ಈಜುತ್ತಾ ಸಾಗುತ್ತಿದ್ದಾರೆ. ಪಪ್ಪು ಆಗಿರಬಹುದು ಎಂದು ಹೆದರಿ ಲಕ್ಷ್ಮಮ್ಮ ‘ಬೇಡ..ವಾಪಾಸು ಬಾ...’ ಎಂದು ಕೂಗುವುದಕ್ಕೆ ಯತ್ನಿಸಿದರೆ ಆಗುತ್ತಲೇ ಇಲ್ಲ. ಕಂಚಿಕಲ್ಲಿನ ತುತ್ತ ತುದಿಯಲ್ಲಿ ನಿಂತು ಯಾರೋ ಪಪ್ಪುವನ್ನು ಜೋರಾಗಿ ಕರೆಯುತ್ತಿದ್ದಾರೆ. ಯಾರು? ಬಹುಶಃ ಗುರೂಜಿಯಂತೆಯೇ ಕಾಣುತ್ತಿದೆ. ಪಪ್ಪು ನನ್ನ ಕಡೆಗೆ ಮಗದೊಮ್ಮೆ ಕಂಚಿಕಲ್ಲಿನ ಕಡೆಗೆ ನೋಡುತ್ತಾ, ಮುಳುಗೇಳುತ್ತಾ ಇದ್ದಾನೆ. ಲಕ್ಷ್ಮಮ್ಮ ಕನಸನ್ನು ಸೀಳಿ ಎದ್ದು ಕುಳಿತರು. ನೀರೊಳಗೆ ಉಸಿರುಗಟ್ಟಿದಂತಾಗಿತ್ತು ಅವರಿಗೆ. ‘‘ಕನಸು ಬಿತ್ತಾ?’’ ಕೇಳಿದರು ಅನಂತಭಟ್ಟರು. ‘‘ನೀವಿನ್ನೂ ಮಲಗಿಲ್ವೇ?’’

‘‘ಇತ್ತೀಚೆಗೆ ನಿದ್ದೆ ಹತ್ತಿರ ಸುಳಿವುದೇ ತಡವಾಗಿ’’

ಸ್ವಲ್ಪ ಹೊತ್ತಿನ ಬಳಿಕ ಲಕ್ಷ್ಮಮ್ಮ ತನಗೆ ತಾನೇ ಹೇಳಿದರು ‘‘ಪಪ್ಪು ಒಮ್ಮೆ ನನ್ನ ಬಳಿ ಜಿನ್ನ್‌ಗಳು ಎಂದರೆ ಏನಮ್ಮ? ಎಂದು ಕೇಳಿದ್ದ. ನಿನ್ನ ತಂದೆಯ ಬಳಿ ಕೇಳು ಎಂದಿದ್ದೆ. ನಿಮಗೆ ಗೊತ್ತಾ? ಜಿನ್ನ್‌ಗಳು ಅಂದರೆ ಏನು?’’

‘‘ಅವನೆಂತದೋ ಮಕ್ಕಳಾಟಿಕೆಯಲ್ಲಿ ಕೇಳಿದರೆ ನೀನಿನ್ನೂ ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದೀಯ...’’ ಭಟ್ಟರು ಹುಸಿ ನಕ್ಕರು.

‘‘ನಿಮ್ಮ ಹತ್ತಿರ ಒಂದು ಕೇಳುವುದಕ್ಕಿತ್ತು...’’

‘‘ಏನು ಕೇಳು...’’

‘‘ಅವತ್ತು ರಾತ್ರಿ ಹೇಳಿದರಲ್ಲ, ಅದು ನಿಜವಾ?’’

‘‘ಯಾವುದು?’’

‘‘ಅದೇ ಜಾನಕಿ ಅಮೆರಿಕದಲ್ಲಿ ಯಾವುದೋ ಕಿರಿಸ್ತಾನಿ ಹುಡುಗನನ್ನು ಮದುವೆಯಾಗಿದ್ದಾಳೆ ಎನ್ನೋದು...’’

ಅನಂತಭಟ್ಟರು ತಕ್ಷಣ ಏನನ್ನು ಉತ್ತರಿಸಲಿಲ್ಲ.

‘‘ನಿಜ ಇರಲಿಕ್ಕಿಲ್ಲ, ಅಲ್ಲವೇ?’’ ಲಕ್ಷ್ಮಮ್ಮನೇ ಮತ್ತೆ ಕೇಳಿದಳು.

‘‘ಹಾಗಲ್ಲ ಇವಳೇ, ದೊಡ್ಡವರ ವಿಷಯ. ಅವರೇನು ಮಾಡಿದರೂ ಅದು ಸರಿಯಾಗಿಯೇ ಇರುತ್ತದೆ. ನನಗೆ ಗೊತ್ತಿರುವ ಹಾಗೆ ಹುಡುಗಿ ಕಿರಿಸ್ತಾನಿ ಪ್ರೊಫೆಸರ್ ಒಬ್ಬರನ್ನು ಮದುವೆಯಾಗಿರುವುದಂತೆ...ಅದರಲ್ಲಿ ಅಚ್ಚರಿಯೇನೂ ಇಲ್ಲ. ಪುತ್ತೂರಿನಲ್ಲಿ ಅವಳು ಅದು ಯಾವುದೋ ಬ್ಯಾರಿ ಹುಡುಗನನ್ನು ಲವ್ ಮಾಡಿದ್ದು ಗಲಾಟೆಗೆ ಕಾರಣ ಆಗಿ ಅಲ್ಲವಾ ಅವಳು ಪುತ್ತೂರು ಬಿಟ್ಟದ್ದು...ತುಂಬಾ ಅಹಂಕಾರದ ಹುಡುಗಿ. ತಂದೆ ತಾಯಿಯ ಯಾವ ಸಂಸ್ಕಾರವೂ ಅವಳಲ್ಲಿ ಇಲ್ಲ.....ನಮಗ್ಯಾಕೆ ಬಿಡು...’’ ‘‘ಜಾನಕಿಯ ಮೇಲೆ ನಮ್ಮ ಪಪ್ಪುವಿಗೆ ಇಷ್ಟ ಇತ್ತು ಅನ್ನಿಸುತ್ತದೆ’’ ಲಕ್ಷಮ್ಮ ತನಗೆ ತಾನೆ ಪಿಸುಗುಟ್ಟಿದರು.

‘‘ಆದರೆ ಜಾನಕಿ ನಮ್ಮ ಹುಡುಗನನ್ನು ಒಪ್ಪುವವಳಲ್ಲ. ದೇಶವನ್ನೇ ತಾಯಿಯೆಂದು ಸ್ವೀಕರಿಸಿದ ನನ್ನ ಮಗನೆಲ್ಲಿ? ದೇಶ, ಸಂಸ್ಕೃತಿ ಎಲ್ಲವನ್ನೂ ಬಿಟ್ಟ ಆ ಹುಡುಗಿಯೆಲ್ಲಿ?’’ ಅನಂತಭಟ್ಟರು ಪತ್ನಿಯನ್ನು ಸಮಾಧಾನಿಸಿದರು.

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News