ದ್ರಾವಿಡ ಭಾಷೆಗಳು 4,500 ವರ್ಷಗಳಷ್ಟು ಹಳೆಯವು:ಅಧ್ಯಯನ

Update: 2018-03-22 17:20 GMT

ಬರ್ಲಿನ್,ಮಾ.22: ದ್ರಾವಿಡ ಭಾಷಾ ಸಮೂಹದ ನಾಲ್ಕು ದೊಡ್ಡ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಶತಮಾನಗಳಷ್ಟು ಹಳೆಯದಾಗಿದ್ದು, ಈ ಪೈಕಿ ತಮಿಳು ಅತ್ಯಂತ ಪುರಾತನ ಭಾಷೆಯಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ದಕ್ಷಿಣ ಮತ್ತು ಮಧ್ಯಭಾರತದಲ್ಲಿ ಸುಮಾರು 22 ಕೋಟಿ ಜನರು ಮಾತನಾಡುವ 80 ವಿವಿಧ ಭಾಷಾವೈವಿಧ್ಯ ಗಳನ್ನೊಳಗೊಂಡಿರುವ ದ್ರಾವಿಡ ಭಾಷೆಗಳ ಸಮೂಹವು ಸುಮಾರು 4,500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತ್ತು ಎಂದು ಅದು ಹೇಳಿದೆ.

 ಈ ಅಂದಾಜು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಮಾನವ ಇತಿಹಾಸ ವಿಜ್ಞಾನ ಸಂಸ್ಥೆ ಮತ್ತು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಗಳ ಸಂಶೋಧಕರನ್ನೊಳಗೊಂಡ ಅಂತಾರಾಷ್ಟ್ರೀಯ ತಂಡದ ನೂತನ ಭಾಷಾವ್ಯಾಸಂಗ ವಿಶ್ಲೇಷಣೆಯನ್ನು ಆಧರಿಸಿದೆ.

ಪಶ್ಚಿಮದಲ್ಲಿ ಅಫಘಾನಿಸ್ತಾನದಿಂದ ಪೂರ್ವಕ್ಕೆ ಬಾಂಗ್ಲಾದೇಶ ವರೆಗಿನ ದಕ್ಷಿಣ ಏಷ್ಯಾವು ದ್ರಾವಿಡ, ಭಾರತೀಯ-ಐರೋಪ್ಯ ಮತ್ತು ಚೀನಿ-ಟಿಬೆಟನ್ ಸೇರಿದಂತೆ ಆರು ದೊಡ್ಡ ಭಾಷಾ ಕುಟುಂಬಗಳಿಗೆ ಸೇರಿದ ಕನಿಷ್ಠ 600 ಭಾಷೆಗಳಿಗೆ ತವರಾಗಿದೆ.

 ಸಂಸ್ಕೃತದಂತೆ ತಮಿಳು ಕೂಡ ವಿಶ್ವದ ಶಾಸ್ತ್ರೀಯ ಭಾಷೆ ಗಳಲ್ಲೊಂದಾಗಿದೆ. ಆದರೆ ಸಂಸ್ಕೃತ ನಿಂತ ನೀರಾಗಿದ್ದರೆ ತಮಿಳು ಭಾಷೆಯು ಶಾಸನಗಳು, ಕವಿತೆಗಳು, ಜಾತ್ಯತೀತ ಮತ್ತು ಧಾರ್ಮಿಕ ಪುಸ್ತಕಗಳು ಮತ್ತು ಹಾಡುಗಳಲ್ಲಿ ದಾಖಲಾಗಿರುವ ತನ್ನ ಶಾಸ್ತ್ರೀಯ ಮತ್ತು ಆಧುನಿಕ ರೂಪಗಳಲ್ಲಿ ನಿರಂತರತೆೆಯನ್ನು ಕಾಯ್ದುಕೊಂಡು ಬಂದಿದೆ ಎಂದು ಅಧ್ಯಯನ ವರದಿಯು ಹೇಳಿದೆ.

ದ್ರಾವಿಡರು ಭಾರತೀಯ ಉಪಖಂಡದ ಮೂಲನಿವಾಸಿ ಗಳಾಗಿದ್ದು, ಸುಮಾರು 3,500 ವರ್ಷಗಳ ಹಿಂದೆ ಆರ್ಯರು ಭಾರತಕ್ಕೆ ಬರುವ ಮುನ್ನವೇ ಇದ್ದರು ಎಂದು ಸಂಶೋಧಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News