ಇಂದಿರಾ ಗಾಂಧಿ ಶಾಂತಿ ಪುರಸ್ಕಾರಕ್ಕೆ ಸಿಎಸ್‌ಇ ಆಯ್ಕೆ

Update: 2018-11-19 16:57 GMT

ಹೊಸದಿಲ್ಲಿ,ನ.19: ದಿಲ್ಲಿಯ ಪರಿಸರ ಚಿಂತನ ಚಾವಡಿ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್(ಸಿಎಸ್‌ಇ) ಪರಿಸರ ಶಿಕ್ಷಣ ಮತ್ತು ರಕ್ಷಣೆಯಲ್ಲಿ ತನ್ನ ಕಾರ್ಯಗಳಿಗಾಗಿ ಈ ವರ್ಷದ ಇಂದಿರಾ ಗಾಂಧಿ ಶಾಂತಿ,ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪುರಸ್ಕಾರಕ್ಕೆ ಪಾತ್ರವಾಗಿದೆ. ಪರಿಸರ ನಾಶವನ್ನು ತಡೆಯುವಲ್ಲಿ ತನ್ನ ಕಾರ್ಯಗಳಿಗಾಗಿ ಮತ್ತು ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸರಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ಸಿಗಾಗಿ ಸಿಎಸ್‌ಇ ಅನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಸೋಮವಾರ ತಿಳಿಸಿದೆ.

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಧ್ಯಕ್ಷತೆಯ ಅಂತರಾಷ್ಟ್ರೀಯ ಆಯ್ಕೆ ಸಮಿತಿಯು ಸಿಎಸ್‌ಇ ಅನ್ನು ಆಯ್ಕೆ ಮಾಡಿದೆ.

ಈ ಪುರಸ್ಕಾರವು ಹವಾಮಾನ ಬದಲವಾವಣೆಯಿಂದಾಗಿ ಅಭದ್ರತೆ, ಸಮಾನತೆಯಿಲ್ಲದ ಅಭಿವೃದ್ಧಿ ಮತ್ತು ಹೆಚ್ಚುತ್ತಿರುವ ಪರಿಸರ ನಾಶದಂತಹ,ವಿಶ್ವವು ಎದುರಿಸುತ್ತಿರುವ ತಕ್ಷಣದ ಬೆದರಿಕೆಗಳಿಗೆ ನೀಡಿರುವ ಮಾನ್ಯತೆಯಾಗಿದೆ ಎಂದು ಪುರಸ್ಕಾರ ಘೋಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಸ್‌ಇ ಮಹಾ ನಿರ್ದೇಶಕಿ ಸುನೀತಾ ನಾರಾಯಣ್ ಹೇಳಿದರು.

ಈ ಹಿಂದೆ ಈ ಪುರಸ್ಕಾರವನ್ನು ಪಡೆದವರಲ್ಲಿ ಆಗಿನ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಮಿಖಾಯಿಲ್ ಗೊರ್ಬಚೇವ್ (1987),ನಾರ್ವೆಯ ಪ್ರಧಾನಿ ಗ್ರೋ ಹಾರ್ಲೆಮ್ ಬ್ರಂಡ್ಲಂಡ್(1988), ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್(1997),ವಿಶ್ವಸಂಸ್ಥೆ ಮತ್ತು ಅದರ ಮಹಾ ಕಾರ್ಯದರ್ಶಿ ಕೋಫಿ ಅನ್ನಾನ್(2003) ಮತ್ತಿತರರು ಸೇರಿದ್ದಾರೆ.

ಕಳೆದ ವರ್ಷ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪುರಸ್ಕಾರಕ್ಕೆ ಪಾತ್ರರಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News