ವಿಷಪ್ರಾಶನದಿಂದ ಮೃತ್ಯು: ಲೋಯಾ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು
ಮುಂಬೈ, ನ. 22: ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿಗೆ ವಿಕಿರಣಶೀಲ ಐಸೋಟೋಪ್ ವಿಷಪ್ರಾಶನ ಕಾರಣ ಎಂದು ಆಪಾದಿಸಿ ವಕೀಲ ಸತೀಶ್ ಉಕೇ, ಮುಂಬೈ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಹೊಸದಾಗಿ ರಿಟ್ ಅರ್ಜಿ ಸಲ್ಲಿಸುವುದರೊಂದಿಗೆ ಇಡೀ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದಂತಾಗಿದೆ.
290 ಪುಟಗಳ ಕ್ರಿಮಿನಲ್ ರಿಟ್ ಅರ್ಜಿಯಲ್ಲಿ ಉಕೇ, ತಮ್ಮ ಜೀವಕ್ಕೆ ಅಪಾಯವಿದೆ ಎಂದೂ ದೂರಿದ್ದಾರೆ.
ನ್ಯಾಯಾಧೀಶ ಲೋಯಾ ಸಾವಿಗೆ ವಿಕಿರಣಶೀಲ ಐಸೋಟೋಪ್ ಪ್ರಾಶನ ಮಾಡಿಸಿರುವುದು ಕಾರಣ ಎಂದು ನಿಗೂಢವಾಗಿ ಸಾವನ್ನಪ್ಪಿದ ವಕೀಲರಾದ ಶ್ರೀಕಾಂತ್ ಖಂಡಲ್ಕರ್ ಮತ್ತು ಪ್ರಕಾಶ್ ಥೋಂಬ್ರೆ ಹೇಳಿದ್ದರು ಎಂದು ವಿವರಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಅಣು ವಿದ್ಯುತ್ ಕಮಿಷನ್ ಆಯೋಗದ ಅಧ್ಯಕ್ಷ ರತನ್ ಕುಮಾರ್ ಸಿನ್ಹಾ ಅವರನ್ನು 2015ರ ಮಾರ್ಚ್‌ನಲ್ಲಿ ಮೂರು ದಿನಗಳ ನಾಗ್ಪುರ ಭೇಟಿ ವೇಳೆ ಭೇಟಿ ಮಾಡಿದ್ದರು. ಈ ಭೇಟಿಯ ಅಧಿಕೃತ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದೂ ಅರ್ಜಿಯಲ್ಲಿ ವಾದಿಸಲಾಗಿದೆ.
"ಲೋಯಾ ಅವರಿಗೆ ವಿಕಿರಣಶೀಲ ಐಸೋಟೋಪ್ ಪ್ರಾಶನ ಮಾಡಲಾಗಿದೆ ಎನ್ನುವ ಸುಳಿವನ್ನು ಈ ಭೇಟಿ ನೀಡುತ್ತದೆ. ಲೋಯಾ ಅವರು ಮಾತನಾಡಲು ಬಯಸಿದ್ದಾರೆ ಎಂದು ಸಹೋದ್ಯೋಗಿಗಳಾದ ಖಂಡಲ್ಕರ್ ಮತ್ತು ಥೋಂಬ್ರೆ ಹೇಳಿದ ಬಳಿಕ ಲೋಯಾ ಅವರೊಂದಿಗೆ ವೀಡಿಯೊ ಕರೆ ಮಾಡಿ ಮಾತನಾಡಿದ್ದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೊಹ್ರಬುದ್ದೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ್ದಾರೆ ಎಂಬ ಅಂಶವನ್ನು ಲೋಯಾ ಹೇಳಿದ್ದರು" ಎಂದು ಲೈವ್‌ಲಾ ವೆಬ್‌ಸೈಟ್ ಜತೆ ಮಾತನಾಡಿದ ಉಕೇ ಆಪಾದಿಸಿದ್ದಾರೆ.
ಸೊಹ್ರಬುದ್ದೀನ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಮಿತ್ ಶಾ ಅವರನ್ನು ದೋಷಮುಕ್ತಗೊಳಿಸಿದ ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ಲೋಯಾ ಸಿದ್ಧಪಡಿಸಿದ್ದ ಕರಡು ಪ್ರತಿಯನ್ನು ವಕೀಲ ಖಂಡಲ್ಕರ್ ಜತೆ ಹಂಚಿಕೊಂಡಿದ್ದರು ಎಂದೂ ಅರ್ಜಿಯಲ್ಲಿ ಹೇಳಲಾಗಿದೆ. ಆದಾಗ್ಯೂ ಖಂಡಲ್ಕರ್ ನಿಗೂಢವಾಗಿ ಸಾವಿಗೀಡಾದರು. ಅವರ ದೇಹ ನ್ಯಾಯಾಲಯ ಆವರಣದಲ್ಲಿ ಪತ್ತೆಯಾಗುವ ಎರಡು ದಿನ ಮುನ್ನ ಅವರು ಕಾಣೆಯಾಗಿದ್ದರು ಎಂದೂ ಅರ್ಜಿ ವಿವರಿಸಿದೆ.
ವಕೀಲ ಪ್ರಕಾಶ್ ಥೋಂಬ್ರೆ ಕೂಡಾ 2016ರ ಮೇ ತಿಂಗಳಲ್ಲಿ ನಾಗ್ಪುರ- ಬೆಂಗಳೂರು ರೈಲಿನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.