ಪ್ರಸಿದ್ಧ ಕವಯಿತ್ರಿ ಮೀನಾ ಅಲೆಕ್ಸಾಂಡರ್ ನಿಧನ
ಲಕ್ನೊ, ನ.22: ಲೇಖಕಿ, ಸಾಹಿತಿ ಹಾಗೂ ವಿದ್ವಾಂಸರಾಗಿದ್ದ ಮೀನಾ ಅಲೆಕ್ಸಾಂಡರ್ (67 ವರ್ಷ) ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದ್ದ ಮೀನಾ ಕೇರಳ ಹಾಗೂ ಸುಡಾನ್‌ನಲ್ಲಿ ಬೆಳೆದಿದ್ದರು.
ಅಮೆರಿಕದ ಸಿಟಿ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ ಇಂಗ್ಲಿಷ್ ಮತ್ತು ಮಹಿಳಾ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು. ಅಮೆರಿಕನ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 2009ರಲ್ಲಿ ಸೌತ್ ಏಶ್ಯನ್ ಲಿಟರರಿ ಅಸೋಸಿಯೇಷನ್‌ನಿಂದ ಪ್ರತಿಷ್ಠಿತ ಸಾಧನಾ ಪುರಸ್ಕಾರ ಪಡೆದಿದ್ದರು. 2014ರಲ್ಲಿ ಶಿಮ್ಲದಲ್ಲಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡಿ’ಯ ನ್ಯಾಷನಲ್ ಫೆಲೊ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
‘ನ್ಯಾಂಪಲ್ಲಿ ರೋಡ್’ ಹಾಗೂ ‘ಮ್ಯಾನ್‌ಹಟನ್ ಮ್ಯೂಸಿಕ್’ ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಅಟ್‌ಮೊಸ್ಫರಿಕ್ ಎಂಬ್ರಾಯ್ಡರಿ, ಬರ್ತ್‌ಪ್ಲೇಸ್ ವಿತ್ ಬರೀಡ್ ಸ್ಟೋನ್ಸ್, ಕ್ವಿಕ್ಲಿ ಚೇಂಜಿಂಗ್ ರಿವರ್, ರಾ ಸಿಲ್ಕ್, ಇಲ್ಲಿಟರೇಟ್ ಹಾರ್ಟ್ ಎಂಬ ಕವನಸಂಗ್ರಹಗಳನ್ನು ಪ್ರಕಟಿಸಿದ್ದಾರೆ.
ಇಲ್ಲಿಟರೇಟ್ ಹಾರ್ಟ್ ಕೃತಿ 2002ರಲ್ಲಿ ‘ಪೆನ್ ಓಪನ್‌ಬುಕ್’ ಪುರಸ್ಕಾರ ಪಡೆದಿದೆ. ಇವರ ಕವನಗಳು ‘ದಿ ನ್ಯೂಯಾರ್ಕರ್’, ‘ಹಾರ್ವರ್ಡ್ ರಿವ್ಯೆ’ ಹಾಗೂ ಇತರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೀನಾ ನಿಧನಕ್ಕೆ ‘ದಿ ಏಶ್ಯನ್ ಅಮೆರಿಕನ್ ರೈಟರ್ಸ್ ವರ್ಕ್‌ಶಾಪ್’ ಸಂತಾಪ ವ್ಯಕ್ತಪಡಿಸಿದೆ.