ನೋಟು ರದ್ದತಿಯ 2 ವರ್ಷಗಳಲ್ಲಿ ಉದ್ಯೋಗ ಕಳೆದುಕೊಂಡ 50 ಲಕ್ಷ ಜನರು: ಅಧ್ಯಯನ ವರದಿ

Update: 2019-04-17 13:25 IST
ನೋಟು ರದ್ದತಿಯ 2 ವರ್ಷಗಳಲ್ಲಿ ಉದ್ಯೋಗ ಕಳೆದುಕೊಂಡ 50 ಲಕ್ಷ ಜನರು: ಅಧ್ಯಯನ ವರದಿ
  • whatsapp icon

ಹೊಸದಿಲ್ಲಿ, ಎ.17: ನವೆಂಬರ್ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಘೋಷಿಸಿದ ನಂತರ 50 ಲಕ್ಷ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆಂದು ಬೆಂಗಳೂರಿನ ಅಝೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಮಂಗಳವಾರ ಬಿಡುಗಡೆಗೊಳಿಸಿರುವ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2019' ವರದಿ ತಿಳಿಸಿದೆ.

ಉದ್ಯೋಗ ಪ್ರಮಾಣದ ಕುಸಿತವು ಅಮಾನ್ಯೀಕರಣದ ನಂತರವೇ ಆರಂಭಗೊಂಡಿದ್ದರೂ ಲಭ್ಯ ಅಂಕಿಅಂಶಗಳ ಪ್ರಕಾರ  ಉದ್ಯೋಗ ಪ್ರಮಾಣ ಕುಸಿತಕ್ಕೆ  ಅದೇ ಕಾರಣ ಎಂದು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

ಉದ್ಯೋಗ ಪ್ರಮಾಣ ಕುಸಿತದಲ್ಲಿ ಮಹಿಳೆಯರು ಹೆಚ್ಚು ಬಾಧಿತರಾಗಿದ್ದಾರೆ ಎಂದು ವರದಿ ತಿಳಿಸಿದೆ. 2011ರ ನಂತರ ನಿರುದ್ಯೋಗ ಹೆಚ್ಚಾಗುತ್ತಲೇ ಹೋಗಿದೆ. ನಿರುದ್ಯೋಗಿಗಳ ಪೈಕಿ ಉನ್ನತ ಶಿಕ್ಷಣ ಪಡೆದವರು ಹಾಗೂ ಯುವ ಜನತೆ ಹೆಚ್ಚಿದ್ದಾರೆಂದು ವರದಿ ಹೇಳಿದೆ.

ಕೇವಲ ಶಿಕ್ಷಿತ ವರ್ಗಗಳಿಗೆ ಮಾತ್ರ ನಿರುದ್ಯೋಗ ಪ್ರಮಾಣ ಸೀಮಿತವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಡಿಮೆ ಶಿಕ್ಷಣ ಪಡೆದವರಲ್ಲಿ ನಿರುದ್ಯೋಗ ಕಡಿಮೆಯಾಗಿದ್ದರೂ, ಉದ್ಯೋಗಾವಕಾಶಗಳ ಇಳಿಕೆಯಿಂದಾಗಿ ಈ ವಿಭಾಗದವರೂ ಕೆಲಸದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

 ದೇಶದಲ್ಲಿ ನಿರುದ್ಯೋಗ ಪ್ರಮಾಣ 2017-18ರಲ್ಲಿ ಕಳೆದ 45 ವರ್ಷಗಳಲ್ಲಿಯೇ ಗರಿಷ್ಠವಾಗಿದೆ ಎಂದು ಕೆಲ ಸಮಯದ ಹಿಂದೆ ಸೋರಿಕೆಗೊಂಡ ಹಾಗೂ ಇನ್ನೂ ಬಿಡುಗಡೆಗೊಳ್ಳದ ಸರಕಾರಿ ವರದಿಯೊಂದರಲ್ಲ ಉಲ್ಲೇಖಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News