ಕೊರೋನ ಸೋಂಕು ಪ್ರಕರಣ ಇಳಿಮುಖ ಎಂಬ ಕೇಂದ್ರದ ಹೇಳಿಕೆ ಸಂದೇಹಾಸ್ಪದ: ಪ್ರಶಾಂತ್ ಕಿಶೋರ್

Update: 2020-04-21 17:36 GMT

ಹೊಸದಿಲ್ಲಿ, ಎ.21: ಕೊರೋನ ವೈರಸ್ ಸೋಂಕು ಪ್ರಕರಣವನ್ನು ಕೇಂದ್ರ ಸರಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ನಿರಂತರ ಟೀಕಾಪ್ರಹಾರ ನಡೆಸುತ್ತಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೊರೋನ ವೈರಸ್ ದ್ವಿಗುಣಗೊಳ್ಳುವ ಪ್ರಮಾಣ ಇಳಿಮುಖವಾಗುತ್ತಿದೆ ಎಂಬ ಸರಕಾರದ ಹೇಳಿಕೆ ಸಂದೇಹಾಸ್ಪದವಾಗಿದೆ ಎಂದಿದ್ದಾರೆ.

ಕೊರೋನ ಸೋಂಕಿನ ಪ್ರಕರಣದ ಪರೀಕ್ಷೆ ನಿಧಾನಗತಿಯಲ್ಲಿ ನಡೆಯುತ್ತಿರುವುದೂ ಇದಕ್ಕೆ ಕಾರಣವಾಗಿರಬಹುದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ದೇಶದಲ್ಲಿ ಈಗ ಕೊರೋನ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ ಇಳಿಮುಖವಾಗಿದೆ ಎಂಬ ಹೇಳಿಕೆ ಅಸಮಂಜಸವಾಗಿದೆ. ಬಹುಷಃ ಪರೀಕ್ಷೆ ನಿಧಾನಗತಿಯಲ್ಲಿ ನಡೆಯುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. ಪರೀಕ್ಷೆ ನಡೆಸಿರುವುದರಲ್ಲಿ ಶೂನ್ಯ ಪ್ರಮಾಣದ ಪಾಸಿಟಿವ್ ವರದಿ ಬಂದರೆ ಉತ್ತಮ ಎಂದವರು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಕೊರೋನ ಸೋಂಕು ಪರೀಕ್ಷೆ ತೀವ್ರಗತಿಯಲ್ಲಿ ನಡೆಯಬೇಕಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೊರೋನ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ ಈಗ ಇಳಿಮುಖವಾಗಿದೆ. ಲಾಕ್‌ಡೌನ್ ಜಾರಿಯ ಮುನ್ನ , ಪ್ರತೀ 3.4 ದಿನಕ್ಕೆ ಕೊರೋನ ಸೋಂಕಿನ ಪ್ರಮಾಣ ದ್ವಿಗುಣಗೊಳ್ಳುತ್ತಿದ್ದರೆ ಈಗ ಸರಾಸರಿ ಪ್ರತೀ 7.5 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News