ಅನುಮತಿ ಪಡೆಯದೆ ಇತರ ರಾಜ್ಯಗಳು ಉತ್ತರ ಪ್ರದೇಶದ ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಕೊಳ್ಳುವಂತಿಲ್ಲ
ಲಕ್ನೋ,ಮೇ 25: ರಾಜ್ಯಕ್ಕೆ ವಾಪಸಾಗಿರುವ ವಲಸೆ ಕಾರ್ಮಿಕರಿಗೆ ರಕ್ಷಣೆ ಒದಗಿಸಲು ಮುಂದಾಗಿರುವ ಉತ್ತರ ಪ್ರದೇಶ ಸರಕಾರವು ಅವರಿಗಾಗಿ ವಲಸೆ ಆಯೋಗವನ್ನು ರಚಿಸಲು ನಿರ್ಧರಿಸಿದೆ. ಇನ್ನು ಮುಂದೆ ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಕರೆಸಿಕೊಳ್ಳುವ ರಾಜ್ಯಗಳು ತನ್ನ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಅದು ಸ್ಪಷ್ಟಪಡಿಸಿದೆ. ರವಿವಾರದವರೆಗೆ 23 ಲಕ್ಷಕ್ಕೂ ಅಧಿಕ ಕಾರ್ಮಿಕರು ಮತ್ತು ವಲಸಿಗರು ರಾಜ್ಯಕ್ಕೆ ಮರಳಿದ್ದಾರೆ.
ವಲಸೆ ಕಾರ್ಮಿಕರ ಜೀವನ ಸುಭದ್ರತೆಗಾಗಿ ಅವರಿಗೆ ವಿಮಾ ರಕ್ಷಣೆಯನ್ನು ಒದಗಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.
ವಲಸೆ ಕಾರ್ಮಿಕರ ಹಕ್ಕುಗಳೊಂದಿಗೆ ಗುರುತಿಸಿಕೊಂಡಿರುವ ವಿವಿಧ ಅಂಶಗಳನ್ನು ಪರಿಶೀಲಿಸುವ,ಅವರಿಗೆ ಸಾಮಾಜಿಕ-ಆರ್ಥಿಕ-ಕಾನೂನು ಬೆಂಬಲ ದೊರೆಯುವಂತಾಗಲು ಅಧಿಕೃತ ವ್ಯವಸ್ಥೆಯನ್ನು ರೂಪಿಸುವ ಮತ್ತು ಅವರ ಶೋಷಣೆಯನ್ನು ತಡೆಯುವ ಪ್ರಸ್ತಾವ ಸರಕಾರದ ಮುಂದಿದೆ. ವಿಮೆ, ಸಾಮಾಜಿಕ ಭದ್ರತೆ,ಮರು-ಉದ್ಯೋಗ ನೆರವು,ನಿರುದ್ಯೋಗ ಭತ್ತೆಗೆ ಅವಕಾಶ ಇವೇ ಮುಂತಾದ ಅಂಶಗಳನ್ನು ಆಯೋಗವು ಪರಿಶೀಲಿಸಲಿದೆ ಎಂದು ಆದಿತ್ಯನಾಥ್ ಹೇಳಿದರು.
ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು ವಲಸೆ ಕಾರ್ಮಿಕರನ್ನು ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು,‘ಈ ಕಾರ್ಮಿಕರು ನಮ್ಮ ಅತ್ಯಂತ ದೊಡ್ಡ ಸಂಪನ್ಮೂಲವಾಗಿದ್ದಾರೆ ಮತ್ತು ನಾವು ಅವರಿಗೆ ಉತ್ತರ ಪ್ರದೇಶದಲ್ಲಿಯೇ ಉದ್ಯೋಗಗಳನ್ನು ನೀಡುತ್ತೇವೆ. ಅವರ ಉದ್ಯೋಗ ನಿಯೋಜನೆಗಾಗಿ ರಾಜ್ಯ ಸರಕಾರವು ಆಯೋಗವನ್ನು ರಚಿಸಲಿದೆ. ಅವರು ನಮ್ಮ ಜನರು. ಕೆಲವು ರಾಜ್ಯಗಳು ಅವರು ತಮ್ಮಲ್ಲಿಗೆ ಮರಳಬೇಕೆಂದು ಬಯಸಿದರೆ ಅವು ರಾಜ್ಯ ಸರಕಾರದಿಂದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಕಾರ್ಮಿಕರ ಸಾಮಾಜಿಕ-ಕಾನೂನು-ಹಣಕಾಸು ಹಕ್ಕುಗಳನ್ನು ಖಚಿತ ಪಡಿಸುವ ಅಗತ್ಯವಿದೆ ಎಂದರು.