ಕೊರೋನ ಸೋಂಕು ಪರೀಕ್ಷೆ ವ್ಯಾಪಕಗೊಳಿಸಲು ಐಸಿಎಂಆರ್ ಸೂಚನೆ

Update: 2020-06-24 15:25 GMT

ಹೊಸದಿಲ್ಲಿ, ಜೂ.24: ಕೋವಿಡ್-19 ಸೋಂಕು ಪರೀಕ್ಷೆಯು ದೇಶಾದ್ಯಂತದ ಪ್ರತಿಯೊಬ್ಬ ರೋಗಲಕ್ಷಣದ ವ್ಯಕ್ತಿಗಳಿಗೆ ವ್ಯಾಪಕವಾಗಿ ಲಭ್ಯವಿರಬೇಕು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಹೇಳಿದೆ. ಸೋಂಕು ಹರಡದಂತೆ ಮತ್ತು ಜನರ ಪ್ರಾಣ ರಕ್ಷಣೆಗೆ ‘ಪರೀಕ್ಷೆ, ಪತ್ತೆಹಚ್ಚುವುದು ಮತ್ತು ‘ಚಿಕಿತ್ಸೆ’ ಏಕೈಕ ಉಪಾಯವಾಗಿರುವುದರಿಂದ ದೇಶದೆಲ್ಲೆಡೆ ಇರುವ ಎಲ್ಲಾ ರೋಗಲಕ್ಷಣದ ವ್ಯಕ್ತಿಗಳಿಗೂ ಸೋಂಕು ಪರೀಕ್ಷೆಯ ಪ್ರಯೋಜನ ಲಭ್ಯವಿರಬೇಕು. ಅಲ್ಲದೆ ಸೋಂಕು ನಿಯಂತ್ರಣಕ್ಕಾಗಿ ಜಾಡು ಪತ್ತೆಹಚ್ಚುವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ‘ಕೊರೋನ ಸೋಂಕು ಪರೀಕ್ಷೆಗೆ ಹೊಸ ಹೆಚ್ಚುವರಿ ಕಾರ್ಯತಂತ್ರ ’ದ ಅಂಗವಾಗಿ ಮಂಗಳವಾರ ಜಾರಿಗೊಳಿಸಿರುವ ಸಲಹಾ ಪತ್ರದಲ್ಲಿ ತಿಳಿಸಲಾಗಿದೆ.

ಆರೋಗ್ಯ ಕಾರ್ಯಕರ್ತರು ಮತ್ತು ಕಚೇರಿಯ ಸಿಬಂದಿಗಳ ಭಯ ಮತ್ತು ಆತಂಕದ ನಿವಾರಣೆಗೆ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಸರಕಾರಿ ಕ್ಷೇತ್ರದ ಸಂಸ್ಥೆಗಳಲ್ಲಿ ಪ್ರತಿಕಾಯ(ಆ್ಯಂಟಿಬಾಡಿ) ಆಧಾರಿತ ಕೊರೋನ ಸೋಂಕು ಪರೀಕ್ಷೆ ಸಾಧ್ಯವಾಗಿಸುವಂತೆಯೂ ಅಧಿಕಾರಿಗಳಿಗೆ ಐಸಿಎಂಆರ್ ಸಲಹೆ ನೀಡಿದೆ. ಅಲ್ಲದೆ ಎಲ್ಲಾ ಕಂಟೈನ್‌ಮೆಂಟ್ ವಲಯಗಳಲ್ಲಿ , ಕೇಂದ್ರ ಸರಕಾರ/ರಾಜ್ಯ ಸರಕಾರದ ಅಧೀನದ ಮೆಡಿಕಲ್ ಕಾಲೇಜುಗಳಲ್ಲಿ, ಎನ್‌ಎಬಿಎಚ್ ಮಾನ್ಯತೆ ಪಡೆದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ , ಐಸಿಎಂಆರ್ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೋನ ಸೋಂಕು ಪತ್ತೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಜೊತೆಗೇ ಕ್ಷಿಪ್ರ ಪ್ರತಿಜನಕ ಪತ್ತೆ ಪರೀಕ್ಷೆಯನ್ನು ನಿಯೋಜಿಸಲು ಐಸಿಎಂಆರ್ ಶಿಫಾರಸು ಮಾಡಿದೆ.

ಪಾಂಟ್ ಆಫ್ ಕೇರ್ ಆ್ಯಂಟಿಜೆನ್ ಟೆಸ್ಟಿಂಗ್(ರೋಗಿಗೆ ಹತ್ತಿರದಲ್ಲಿ ಪ್ರತಿಜನಕ ಪರೀಕ್ಷೆ) ನಡೆಸಲು ಮುಂದಾಗುವ ಎಲ್ಲಾ ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ರಾಜ್ಯ ಸರಕಾರಗಳು ಡೇಟಾ ಎಂಟ್ರಿಗೆ ಲಾಗ್‌ಇನ್ ರುಜುವಾತು ಪಡೆಯಲು ಐಸಿಎಂಆರ್‌ನೊಂದಿಗೆ ನೋಂದಾಯಿಸಿಕೊಂಡಿರಬೇಕು ಎಂದು ಸಲಹಾಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News