7.6 ಲಕ್ಷ ಕೊರೋನ ಪ್ರಕರಣ: ಪ್ರಮಾಣ ಇನ್ನೂ ಕನಿಷ್ಠ ಎಂದ ಕೇಂದ್ರ ಸರ್ಕಾರ

Update: 2020-07-09 18:59 GMT

ಹೊಸದಿಲ್ಲಿ: ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಸೋಂಕು ತಗುಲಿರುವುದನ್ನು ಲೆಕ್ಕಾಚಾರ ಮಾಡಿದರೆ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಆಧಾರದಲ್ಲಿ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಬುಧವಾರದವರೆಗೆ ದೇಶದಲ್ಲಿ 7.67 ಲಕ್ಷ ಪ್ರಕರಣಗಳು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ ಗರಿಷ್ಠ ಅಂದರೆ 24,879 ಹೊಸ ಪ್ರಕರಣಗಳು ವರದಿಯಾಗಿರುವುದನ್ನು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ದೃಢಪಡಿಸುತ್ತವೆ. ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕ ಹಾಗೂ ಬ್ರೆಝಿಲ್ ದೇಶಗಳನ್ನು ಹೊರತುಪಡಿಸಿದರೆ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.

“ವಿಶ್ವದಲ್ಲೇ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶ ನಮ್ಮದು. ಸಕ್ರಿಯ ಪ್ರಕರಣಗಳು, ಒಟ್ಟು ಪ್ರಕರಣಗಳು, ಸಾವಿನ ಸಂಖ್ಯೆಯ ಬಗ್ಗೆ ಮಾತನಾಡುವಾಗ ನಮ್ಮ ಜನಸಂಖ್ಯೆಯ ಪ್ರಮಾಣವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು” ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮದ ಜತೆ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು.

130 ಕೋಟಿ ಜನಸಂಖ್ಯೆಯ ನಡುವೆಯೂ ಭಾರತ ವೈರಸ್ ಸೋಂಕನ್ನು ನಿಜವಾಗಿಯೂ ಚೆನ್ನಾಗಿ ನಿಭಾಯಿಸುತ್ತಿದೆ ಎಂದು ವಿವರಿಸಿದರು.

ಪ್ರತಿ ಹತ್ತು ಲಕ್ಷ ಮಂದಿಯ ಪೈಕಿ ಸೋಂಕು ತಗುಲಿರುವುದನ್ನು ಲೆಕ್ಕ ಹಾಕಿದರೆ ಭಾರತದಲ್ಲಿ ಕನಿಷ್ಠ. ಸದ್ಯ ದೇಶದಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ 538 ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶ ಹೇಳುತ್ತದೆ. ಇತರ ದೇಶಗಳಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ ಸೋಂಕಿತರ ಸಂಖ್ಯೆ 15-16 ಪಟ್ಟು ಅಧಿಕ ಎಂದು ಹೇಳಿದರು.

ಸಾವಿನ ಪ್ರಮಾಣವನ್ನು ಗಮನಿಸಿದರೆ ಇತರ ದೇಶಗಳಲ್ಲಿ, ಭಾರತದಲ್ಲಿ ಸಂಭವಿಸಿದ ಸಾವಿನ 40 ಪಟ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News