ಜನೌಷಧಿ ಯೋಜನೆಯ ಸಮಸ್ಯೆಗಳು

Update: 2020-07-16 19:30 GMT

ಜೆನೆರಿಕ್ ಔಷಧಿಗಳನ್ನು ಕೈಗೆಟಕುವ ಬೆಲೆಯಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು, ಭಾರತದ ಅಂಚಿನಲ್ಲಿರುವ ಜನರು ದುಬಾರಿ ಬ್ರಾಂಡ್ ಔಷಧಿಗಳನ್ನು ಖರೀದಿಸಲು ಸಾಧ್ಯವಿಲ್ಲ; ಆದ್ದರಿಂದ, ಜನಸಂಖ್ಯೆಯ ಹಿತದೃಷ್ಟಿಯಿಂದ ಅಗ್ಗದ ಜೆನೆರಿಕ್ಸ್ ಅನ್ನು ಭಾರತೀಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ತುರ್ತು ಅವಶ್ಯಕತೆಯಿದೆ. ಸಾರ್ವಜನಿಕರಲ್ಲಿ ಜಾಗೃತಿಯ ಕೊರತೆ, ರಾಜ್ಯ ಸರಕಾರಗಳಿಂದ ಬೆಂಬಲದ ಕೊರತೆ, ಕಳಪೆ ಪೂರೈಕೆ, ವೈದ್ಯರ ನಿರಾಸಕ್ತಿ ಈ ಯೋಜನೆ ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳಾಗಿವೆ. ಇದರ ಬಗ್ಗೆ ಸರಕಾರಗಳು ತ್ವರಿತ ಗಮನ ನೀಡಬೇಕಾಗಿದೆ.


ಜನೌಷಧಿ ಯೋಜನೆ ಭಾರತ ಸರಕಾರದ ಬಹು ನಿರೀಕ್ಷಿತ ಯೋಜನೆ. ಔಷಧಿಗಳು ಜನರಿಗೆ ನ್ಯಾಯಸಮ್ಮತ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ರಾಷ್ಟ್ರದಲ್ಲಿ ಬಡ ಜನರಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಯಿತು. ಭಾರತದ ಔಷಧಿ ಉದ್ಯಮವು ದೊಡ್ಡದಾಗಿದ್ದು ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಸಮಂಜಸವಾದ ಬೆಲೆಯಲ್ಲಿ ಉತ್ಪಾದಿಸುತ್ತವೆ. ಆದ್ದರಿಂದ, ಭಾರತೀಯ ಜೆನೆರಿಕ್ ಔಷಧಿಗಳು ಇಂದು ಅನೇಕ ದೇಶಗಳಿಗೆ ರಪ್ತು ಆಗುತ್ತಿವೆ. ಭಾರತದ ಬಡ ಜನರು ದುಬಾರಿ ಔಷಧಿ ಪಡೆಯಲು ಸಾಧ್ಯವಾಗದ ಕಾರಣ, ಅಗ್ಗದ ಜೆನೆರಿಕ್ ಔಷಧಿಗಳನ್ನು ಭಾರತೀಯರಿಗೆ ಲಭ್ಯವಾಗುವಂತೆ ಮಾಡುವ ತುರ್ತು ಅವಶ್ಯಕತೆಯಿದೆ. ಸಾಮಾನ್ಯವಾಗಿ ಔಷಧಿ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಜಾಹೀರಾತು ನೀಡುತ್ತವೆ. ಮಾರಾಟವನ್ನು ಹೆಚ್ಚಿಸಲು ವೈದ್ಯರ ಮೇಲೆ ವಿವಿಧ ರೀತಿಯಲ್ಲಿ ಪ್ರಭಾವ ಬೀರುತ್ತವೆ ಮತ್ತು ಅತಿಯಾಗಿ ಬೆಲೆ ನಿಗದಿಪಡಿಸುವ ಮೂಲಕ ಅದರಿಂದ ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತವೆ. ಆದರೆ ಜೆನೆರಿಕ್ ಆವೃತ್ತಿಯು ಕಡಿಮೆ ಬೆಲೆಗೆ ಜನರಿಗೆ ಲಭ್ಯವಿದೆ.

ಜೆನೆರಿಕ್ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಲಭ್ಯಗೊಳಿಸಿದಾಗ, ಬ್ರಾಂಡ್ ಹೆಸರಿನಲ್ಲಿರುವ ಅದೇ ಔಷಧಿಗಳ ಬೆಲೆ ಗಣನೀಯವಾಗಿ ಇಳಿಯುತ್ತವೆ. ಜೆನರಿಕ್ ಔಷಧಿಗಳು ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಅರ್ಹತೆ ಪಡೆದಿರುತ್ತದೆ. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಜನವಸತಿ ಪ್ರದೇಶಗಳಲ್ಲಿ ಇಂತಹ ಮಳಿಗೆಗಳನ್ನು ಆರಂಭಿಸಲು ಅಂಗಡಿಯ ಮಾಲಕರಿಗೆ ಪ್ರೋತ್ಸಾಹಧನವಾಗಿ ಸರಕಾರ ರೂ. 2 ಲಕ್ಷದಿಂದ 50 ಲಕ್ಷದವರೆಗೆ ಮತ್ತು ಔಷಧಿ ಖರೀದಿಯಲ್ಲಿ ಶೇ. 16 ರಿಯಾಯಿತಿ ಮತ್ತು ಲಾಭಾಂಶವನ್ನು ಒದಗಿಸುತ್ತದೆ. ಸರಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ನೋಂದಾಯಿತ ವೃತ್ತಿಪರ ಸಂಸ್ಥೆಗಳು ಅಥವಾ ಸ್ವ-ಸಹಾಯ ಗುಂಪುಗಳು ಜನೌಷಧಿ ಮಳಿಗೆಗಳನ್ನು ತೆರೆಯಬಹುದು. ಅಧ್ಯಯನಗಳ ಪ್ರಕಾರ ಸಾರ್ವಜನಿಕ ವಲಯವನ್ನು ಸರಬರಾಜು ಮಾಡಲು ಅವಲಂಬಿಸಿರುವುದರಿಂದ, ಜೆನೆರಿಕ್ ಔಷಧಿಗಳ ಲಭ್ಯತೆಯು ಇಂದು ಮಾರುಕಟ್ಟೆಯಲ್ಲಿ ಸುಮಾರು ಶೇ. 33 ಇದೆ ಎನ್ನಲಾಗಿದೆ.

ಭಾರತದಲ್ಲಿ ಇದುವರೆಗೆ ಒಟ್ಟು 732 ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದೆ. ಈ ಯೋಜನೆ 2008ರಲ್ಲಿ ಆರಂಭವಾದರೂ ಇಂದಿಗೂ ಸಹ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಒಪ್ಪಂದದ ಪ್ರಕಾರ ಖಾಸಗಿ ಕಂಪೆನಿಗಳು ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಿಗಳು ಮತ್ತು 160ಕ್ಕೂ ಹೆಚ್ಚಿನ ಸರ್ಜಿಕಲ್ ವಸ್ತುಗಳನ್ನು ಕಡಿಮೆ ದರದಲ್ಲಿ ಜನೌಷಧಿ ಕೇಂದ್ರಗಳಿಗೆ ಪೂರೈಕೆ ಮಾಡಬೇಕಾಗಿದೆ. ಒಪ್ಪಂದದ ದರದಲ್ಲಿ ಔಷಧಿಗಳನ್ನು ಪೂರೈಸುವಂತೆ ಖಾಸಗಿ ಕಂಪೆನಿಗಳಿಗೆ ಸರಕಾರ ಸೂಚಿಸಿದರೂ ಹೆಚ್ಚಿನ ಕಂಪೆನಿಗಳು ಇದಕ್ಕೆ ಗಮನ ನೀಡಿದಂತೆ ಕಾಣುತ್ತಿಲ್ಲ. ಕೆಲವು ರಾಜ್ಯಗಳಲ್ಲಿ ಇವುಗಳ ವಿತರಣೆಯು ಅಸಮರ್ಪಕವಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ರಾಜ್ಯದಲ್ಲಿ ಸುಮಾರು 325ಕ್ಕೂ ಹೆಚ್ಚಿನ ಜನೌಷಧಿ ಕೇಂದ್ರಗಳಿದ್ದು ಎಲ್ಲಾ ಕೇಂದ್ರಗಳು ಹೆಚ್ಚು ಕಡಿಮೆ ಒಂದೇ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿವೆ. ಹೆಚ್ಚಿನ ಮಳಿಗೆಗಳಲ್ಲಿ ಜನರಿಗೆ ಬೇಕಾದ ಸಕ್ಕರೆ ಮತ್ತು ಬಿಪಿ ಕಾಯಿಲೆಗೆ ಸಂಬಂಧಪಟ್ಟ ಮಾತ್ರೆಗಳು ಸಿಗುತ್ತಿಲ್ಲ ಎಂಬ ಸಾಮಾನ್ಯ ದೂರಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ ಯೋಜನೆ ಹಳ್ಳ ಹಿಡಿಯಲು ಮುಖ್ಯ ಕಾರಣ ಖಾಸಗಿ ಔಷಧಿ ಕಂಪೆನಿಗಳ ಕೈವಾಡ ಮತ್ತು ಲಾಬಿ. ಜನ ಔಷಧಿ ಯೋಜನೆಯು ಮುಖ್ಯವಾಗಿ ದೊಡ್ಡ ದೊಡ್ಡ ಖಾಸಗಿ ಔಷಧಿ ಕಂಪೆನಿಗಳ ಲಾಭದ ವಿಚಾರದಲ್ಲಿ ಸಮಸ್ಯೆಗಳನ್ನು ತರುವುದರಿಂದ ಇಂತಹ ಕಂಪೆನಿಗಳು ದೊಡ್ಡ ಮಟ್ಟದಲ್ಲಿ ಲಾಬಿ ನಡೆಸುತ್ತಿವೆ. ಇಂದು ಹೆಚ್ಚಿನ ಜನೌಷಧಿ ಮಳಿಗೆೆಗಳಲ್ಲಿ ಕೆಲವು ನಿರ್ದಿಷ್ಟ ಔಷಧಿಗಳೇ ಉದ್ದೇಶ ಪೂರ್ವಕವಾಗಿ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿವೆೆ. ಇದಕ್ಕೆ ಖಾಸಗಿ ಕಂಪೆನಿಗಳ ಲಾಬಿ ಕಾರಣ ಎನ್ನಲಾಗುತ್ತಿದೆ. ಇನ್ನೊಂದು ವಾದದ ಪ್ರಕಾರ ಹೆಚ್ಚಿನ ಖಾಸಗಿ ಔಷಧಿ ತಯಾರಿಕೆ ಕಂಪೆನಿಗಳು ಔಷಧಿಗಳನ್ನು ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಯಲ್ಲಿ ಪೂರೈಕೆ ಮಾಡುತ್ತಿಲ್ಲ. ಇಲ್ಲೂ ಸಹ ಉದ್ದೇಶಪೂರ್ವಕವಾಗಿ ಕಂಪೆನಿಗಳು ವಿಳಂಬ ಮಾಡುತ್ತಿವೆ ಎನ್ನಲಾಗಿದೆ.

ಎರಡು ಮೂರು ತಿಂಗಳು ಕಳೆದರೂ ಕೆಲವು ಔಷಧಿಗಳು ಜನೌಷಧಿ ಮಳಿಗೆಗಳಿಗೆ ಪೂರೈಕೆಯಾಗುತ್ತಿಲ್ಲ. ಇದರಿಂದ ಜನರು ಅನಿವಾರ್ಯವಾಗಿ ಖಾಸಗಿ ಮೆಡಿಕಲ್ ಶಾಪ್‌ಗಳನ್ನು ಅವಲಂಬಿಸಬೇಕಾಗಿದೆ. ಜೆನೆರಿಕ್ ಔಷಧಿಗಳು ಸರಿಯಾದ ಸಮಯದಲ್ಲಿ ಸಿಗದಿರುವುದು ಎಲ್ಲೆಡೆ ಪ್ರಚಲಿತವಾಗಿರುವುದರಿಂದ ಹೆಚ್ಚಿನ ಜನರು ಅಂತಹ ಕೇಂದ್ರದ ಕಡೆ ಹೋಗುವುದನ್ನು ನಿಲ್ಲಿಸಿದ್ದಾರೆ. ಔಷಧಿಗಳ ಪೂರೈಕೆ ಸರಪಳಿ ಸಂಪೂರ್ಣವಾಗಿ ಯಾಂತ್ರೀಕರಣ ಆಗದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಈ ಯೋಜನೆ ಎದುರಿಸುತ್ತಿರುವ ಪ್ರಮುಖ ನಿರ್ಬಂಧವೆಂದರೆ, ಈ ಯೋಜನೆಯಲ್ಲಿ ಹೆಚ್ಚು ಅಗತ್ಯವಿರುವ ಎಲ್ಲಾ 361 ಔಷಧಿಗಳನ್ನು ಸಕಾಲದಲ್ಲಿ ಪೂರೈಸಲು ಸಾರ್ವಜನಿಕ ವಲಯದ ಔಷಧಿ ಕಂಪೆನಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಇಂದು ಕೇವಲ 130 ವಿವಿಧ ಔಷಧಿಗಳು ಇಂತಹ ಕೇಂದ್ರದಲ್ಲಿ ದೊರೆಯುತ್ತಿವೆ. ಸಾರ್ವಜನಿಕರಲ್ಲಿ ಜಾಗೃತಿ ಕೊರತೆ, ರಾಜ್ಯ ಸರಕಾರಗಳಿಂದ ಬೆಂಬಲದ ಕೊರತೆ, ಕಳಪೆ ಪೂರೈಕೆ ಸರಪಳಿ ಮತ್ತು ಜೆನೆರಿಕ್ ಔಷಧಿಗಳನ್ನು ವೈದ್ಯರು ಶಿಫಾರಸು ಮಾಡದಿರುವುದು ಇನ್ನಿತರ ಪ್ರಮುಖ ಕಾರಣಗಳು ಈ ಯೋಜನೆಯು ವೈಫಲ್ಯ ಕಾಣಲು ಕಾರಣವಾಗಿವೆ. ಭಾರತದಲ್ಲಿ ಔಷಧಿಗಳ ಉತ್ಪಾದನೆಯು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿದೆ ಮತ್ತು ಆರೋಗ್ಯ ಸಚಿವಾಲಯವು ರಾಷ್ಟ್ರದ ಆರೋಗ್ಯ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತದೆ.

ಭಾರತದಲ್ಲಿ ಆರೋಗ್ಯವು ರಾಜ್ಯದ ವಿಷಯವಾಗಿದೆ ಮತ್ತು ಭಾರತ ಸರಕಾರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಮಾತ್ರ ನಿಯಂತ್ರಿಸುತ್ತದೆ. ಈ ಅಂಶಗಳು ಸಹ ಜನೌಷಧಿ ಯೋಜನೆ ಮತ್ತು ಕಾರ್ಯಕ್ರಮದ ಮೇಲೆ ಭಾರೀ ಪರಿಣಾಮ ಬೀರುತ್ತಿವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ವೈದ್ಯರು ಮತ್ತು ಖಾಸಗಿ ಔಷಧಿ ತಯಾರಿಸುವ ಕಂಪೆನಿಗಳ ನಡುವೆ ಇರುವ ಕೊಡು-ಕೊಳ್ಳುವಿಕೆಯ ನೀತಿ, ಇದು ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಖಾಸಗಿ ಔಷಧಿ ಕಂಪೆನಿಗಳು ವೈದ್ಯರಿಗೆ ವಿದೇಶ ಪ್ರವಾಸವನ್ನು ಪ್ರಾಯೋಜಿಸುತ್ತವೆ ಮತ್ತು ವೈದ್ಯರಿಗೆ ವೈಯಕ್ತಿಕ ಉಡುಗೊರೆಗಳನ್ನು ನೀಡುತ್ತವೆ ಎಂಬುದಕ್ಕೆ ಪುರಾವೆಗಳಿವೆ. ಜೆನರಿಕ್ ಔಷಧಿಗಳನ್ನು ಶಿಫಾರಸು ಮಾಡುವುದರಿಂದ ವೈದ್ಯರು ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ, ಆದರೆ ಬ್ರಾಂಡ್ ಔಷಧಿಗಳು ಅವರಿಗೆ ಆಕರ್ಷಕ ಆದಾಯವನ್ನು ನೀಡುತ್ತದೆ. ಬ್ರಾಂಡ್ ಔಷಧಿಗಳನ್ನು ಶಿಫಾರಸು ಮಾಡುವುದು ಏಕೆಂದರೆ ಹೆಚ್ಚು ಪ್ರಚಲಿತವಾಗಿದೆ ಮತ್ತು ವೈದ್ಯರು ಬ್ರಾಂಡ್ ಹೆಸರುಗಳ ಬಗ್ಗೆ ಮಾತ್ರ ತಿಳಿದಿರುತ್ತಾರೆ ಮತ್ತು ಅವುಗಳ ಮೂಲ ವೈಜ್ಞಾನಿಕ ಹೆಸರು (ಜೆನರಿಕ್) ಹೆಚ್ಚಿನ ವೈದ್ಯರಿಗೆ ತಿಳುವಳಿಕೆ ಇರುವುದಿಲ್ಲ.

ಅವಧಿ ಮೀರಿದ ಬ್ರಾಂಡ್ ಔಷಧಿಗಳನ್ನು ಕಂಪೆನಿಗಳು ಬದಲಾಯಿಸಿ ಕೊಡುತ್ತದೆ. ಆದರೆ ಜೆನೆರಿಕ್ ಔಷಧಿಗಳನ್ನು ಈ ರೀತಿ ಬದಲಾಯಿಸಲಾಗುವುದಿಲ್ಲ. ಆದ್ದರಿಂದ, ಅವಧಿ ಮೀರಿದ ಜೆನೆರಿಕ್ ಔಷಧಿಗಳನ್ನು ವಿಲೇವಾರಿ ಮಾಡುವುದು ಅಂಗಡಿಯವರ ಜವಾಬ್ದಾರಿಯಾಗಿದೆ. ಹೀಗಾಗಿ, ಮಾರಾಟವಾಗದ ಜೆನೆರಿಕ್ಸ್ ಔಷಧಿಗಳು ಮಾಲಕರಿಗೆ ಆರ್ಥಿಕ ನಷ್ಟದ ಅಪಾಯವನ್ನು ಹೊಂದಿದೆ. ಇದಲ್ಲದೆ, ಬ್ರಾಂಡೆಡ್ ಔಷಧಿಗಳು ಹೆಚ್ಚಿನ ಲಾಭವನ್ನು ಒದಗಿಸುತ್ತವೆ. ಜೆನರಿಕ್ ಔಷಧಿಗಳಿಂದ ಅಂಗಡಿ ಮಾಲಕರಿಗೆ ಲಾಭದ ಪ್ರಮಾಣ ತುಂಬಾ ಕಡಿಮೆ. ಈ ಯೋಜನೆಯ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಹೆಚ್ಚಿನ ಇಂತಹ ಔಷಧಿ ಕೇಂದ್ರ ಜನವಸತಿ ಪ್ರದೇಶಗಳಿಂದ ದೂರ ಇವೆ. ಹಾಗಾಗಿ ಇಂತಹ ಕೇಂದ್ರಗಳ ಬಗ್ಗೆ ಜನರಿಗೆ ಅರಿವು ತುಂಬ ಕಡಿಮೆ ಇದೆ. ಪ್ರಚಾರದ ಕೊರತೆ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಇಂತಹ ಔಷಧಿ ಕೇಂದ್ರಗಳು ದಿನದ ಕೆಲವೇ ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಹಾಗಾಗಿ ಜನರಿಗೆ ಕೆಲವು ತುರ್ತು ಔಷಧಿಗಳು ಇಂತಹ ಕೇಂದ್ರಗಳಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಇಂತಹ ಕೇಂದ್ರಗಳನ್ನು ಪರಿಣಿತರಲ್ಲದ ಜನರು ನಡೆಸುತ್ತಾರೆ. ಹಾಗಾಗಿ ವೈದ್ಯರು ಬರೆದುಕೊಡುವ ಔಷಧಿಗಳು ಕೆಲವರಿಗೆ ತಿಳಿಯುವುದೇ ಇಲ್ಲ ಎಂಬ ವ್ಯಾಪಕ ದೂರಿದೆ.

ಜೆನೆರಿಕ್ ಔಷಧಿಗಳನ್ನು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಆರಂಭಿಸಲಾಗಿದೆ, ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮಾತ್ರ ಸೀಮಿತವಾಗಿಲ.್ಲ ಜನಸಾಮಾನ್ಯರಿಗೆ ಸುಲಭವಾಗಿ ತಲುಪಲು ಖಾಸಗಿ ವಲಯಕ್ಕೆ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಜೆನೆರಿಕ್ ಔಷಧಿಗಳು ಮತ್ತು ಅವುಗಳ ಸಾಮರ್ಥ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನವು ಸಹ ಆರಂಭವಾಗಿದೆ. ಆದರೆ ಇದು ಯಶಸ್ಸು ಕಂಡಿಲ್ಲ. ಇಂತಹ ಔಷಧಿಗಳು ಕಡಿಮೆ ಬೆಲೆಗೆ ಒದಗಿಸಲಾಗಿರುವುದರಿಂದ, ಇದರ ದಕ್ಷತೆಯ ಬಗ್ಗೆ ಜನರಲ್ಲಿ ವಿಭಿನ್ನ ಅಭಿಪ್ರಾಯವಿದೆ. ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡಲು ವೈದ್ಯರನ್ನು ಪ್ರೋತ್ಸಾಹಿಸಲಾಗುತ್ತದೆ. ಆದರೆ ಹೆಚ್ಚಿನವರಿಗೆ ಹೆಚ್ಚಿನ ಆಸಕ್ತಿ ಇಲ್ಲ. ಈ ಯೋಜನೆಯು ಜನರ ಆರೋಗ್ಯ ವೆಚ್ಚದಲ್ಲಿ ಗಣನೀಯ ಪ್ರಮಾಣದ ಉಳಿತಾಯವನ್ನು ಶಕ್ತಗೊಳಿಸುತ್ತದೆ.

ವಿಶೇಷವಾಗಿ ಆರ್ಥಿಕವಾಗಿ ಬಡವರಿಗೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಇದು ಉಪಯುಕ್ತ. ಎಲ್ಲರಿಗೂ ಕಡಿಮೆ ಬೆಲೆಯ ಗುಣಮಟ್ಟದ ಔಷಧಿಗಳನ್ನು ಲಭ್ಯವಾಗುವಂತೆ ಮಾಡುವುದು, ಆ ಮೂಲಕ ಪ್ರತಿ ವ್ಯಕ್ತಿಗೆ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಯೋಜನೆಯ ಉದ್ದೇಶವಾಗಿದೆ. ಜೆನೆರಿಕ್ ಔಷಧಿಗಳನ್ನು ಕೈಗೆಟಕುವ ಬೆಲೆಯಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು, ಭಾರತದ ಅಂಚಿನಲ್ಲಿರುವ ಜನರು ದುಬಾರಿ ಬ್ರಾಂಡ್ ಔಷಧಿಗಳನ್ನು ಖರೀದಿಸಲು ಸಾಧ್ಯವಿಲ್ಲ; ಆದ್ದರಿಂದ, ಜನಸಂಖ್ಯೆಯ ಹಿತದೃಷ್ಟಿಯಿಂದ ಅಗ್ಗದ ಜೆನೆರಿಕ್‌ಅನ್ನು ಭಾರತೀಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ತುರ್ತು ಅವಶ್ಯಕತೆಯಿದೆ. ಸಾರ್ವಜನಿಕರಲ್ಲಿ ಜಾಗೃತಿ ಕೊರತೆ, ರಾಜ್ಯ ಸರಕಾರಗಳಿಂದ ಬೆಂಬಲದ ಕೊರತೆ, ಕಳಪೆ ಪೂರೈಕೆ, ವೈದ್ಯರ ನಿರಾಸಕ್ತಿ ಈ ಯೋಜನೆ ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳಾಗಿವೆ. ಇದರ ಬಗ್ಗೆ ಸರಕಾರಗಳು ತ್ವರಿತ ಗಮನ ನೀಡಬೇಕಾಗಿದೆ.

Writer - ಡಾ. ಡಿ.ಸಿ ನಂಜುಂಡ

contributor

Editor - ಡಾ. ಡಿ.ಸಿ ನಂಜುಂಡ

contributor

Similar News