ಅಯೋಧ್ಯೆಯಲ್ಲಿ ಭೂಮಿಪೂಜೆ ಸಂದರ್ಭ ಕೊರೋನ ನಿಯಮ ಉಲ್ಲಂಘನೆಯಾಗಬಹುದು ಎನ್ನಲು ಆಧಾರಗಳಿಲ್ಲ: ಹೈಕೋರ್ಟ್

Update: 2020-07-24 23:20 IST
ಅಯೋಧ್ಯೆಯಲ್ಲಿ ಭೂಮಿಪೂಜೆ ಸಂದರ್ಭ ಕೊರೋನ ನಿಯಮ ಉಲ್ಲಂಘನೆಯಾಗಬಹುದು ಎನ್ನಲು ಆಧಾರಗಳಿಲ್ಲ: ಹೈಕೋರ್ಟ್
  • whatsapp icon

ಹೊಸದಿಲ್ಲಿ, ಜು.24: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವ ಸಂದರ್ಭ ಕೊರೋನ ಸೋಂಕು ಹರಡುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಆಗಸ್ಟ್ 5ರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಹಿತ ಸುಮಾರು 300 ಜನರನ್ನು ಆಹ್ವಾನಿಸಲಾಗಿದೆ. ಭೂಮಿಪೂಜೆ ಸ್ಥಳದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರುವಾಗ ಕೊರೋನ ಸೋಂಕು ತಡೆಗೆ ಸರಕಾರ ಸೂಚಿಸಿರುವ ಸುರಕ್ಷಿತ ಅಂತರ ಸಹಿತ ನಿಯಮಗಳ ಉಲ್ಲಂಘನೆಯಾಗುವ ಸಾಧ್ಯತೆಯಿದ್ದು, ಇದರಿಂದ ಸೋಂಕು ತೀವ್ರ ಪ್ರಮಾಣದಲ್ಲಿ ಹರಡುವ ಆತಂಕವಿದೆ ಎಂದು ಮುಂಬೈ ಮೂಲದ ಅರ್ಜಿದಾರ ಸಾಕೇತ್ ಗೋಖಲೆ ಅರ್ಜಿಯಲ್ಲಿ ವಿವರಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಮತ್ತು ನ್ಯಾಯಾಧೀಶ ಸೌಮಿತ್ರ ದಯಾಲ್ ಸಿಂಗ್ ಅವರಿದ್ದ ನ್ಯಾಯಪೀಠ, ಉತ್ತರಪ್ರದೇಶ ಸರಕಾರ ಹಾಗೂ ಕಾರ್ಯಕ್ರಮ ಆಯೋಜಕರು ಕೊರೋನ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನಿಯಮಗಳನ್ನು ಪಾಲಿಸುವುದಾಗಿ ನಿರೀಕ್ಷಿಸುತ್ತೇವೆ . ಅರ್ಜಿಯು ಕೇವಲ ಊಹೆ ಮತ್ತು ಕಲ್ಪನೆಯನ್ನು ಆಧರಿಸಿದೆ. ನಿಯಮ ಉಲ್ಲಂಘನೆಯಾಗಬಹುದು ಎಂಬುದಕ್ಕೆ ಯಾವುದೇ ಆಧಾರವನ್ನು ನೀಡಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News