ದಿಲ್ಲಿ: ವಲಸೆ ಕಾರ್ಮಿಕರಿಗೆ 5,000 ರೂ. ಪರಿಹಾರ ಧನ
ಹೊಸದಿಲ್ಲಿ, ಎ.22: ದಿಲ್ಲಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 5,000 ರೂ.ಪರಿಹಾರ ಧನ ಒದಗಿಸುವುದಾಗಿ ದಿಲ್ಲಿ ಸರಕಾರ ಬುಧವಾರ ಘೋಷಿಸಿದೆ. ಕೊರೋನ ಸೋಂಕು ನಿಯಂತ್ರಿಸುವ ಸಲುವಾಗಿ ದಿಲ್ಲಿ ಸರಕಾರ 6 ದಿನಗಳಾವಧಿಯ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ನಗರದಿಂದ ಗುಳೆ ಹೋಗುತ್ತಿರುವುದನ್ನು ತಡೆಯಲು ರಾಜ್ಯ ಸರಕಾರ ಹಲವು ಉಪಕ್ರಮಗಳನ್ನು ಆರಂಭಿಸಿದೆ.
ದಿಲ್ಲಿಯಲ್ಲಿ ಒಟ್ಟು 1,71,861 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು ಕಾರ್ಮಿಕರ ನೋಂದಾವಣೆ ಈಗಲೂ ಮುಂದುವರಿದಿದೆ. ಹೊಸದಾಗಿ ನೋಂದಾವಣೆಗೊಳ್ಳುವ ಕಾರ್ಮಿಕರನ್ನೂ ಯೋಜನೆ ವ್ಯಾಪ್ತಿಗೆ ಸೇರಿಸಲಾಗುವುದು. ದಿಲ್ಲಿ ಹೈಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿನಗೂಲಿ ಕಾರ್ಮಿಕರ ಕ್ಷೇಮಾಭ್ಯುದಯ ಖಾತರಿಗೆ ಅಧಿಕಾರಿಗಳ ಸಮಿತಿಯನ್ನು ನೇಮಿಸಲಾಗುತ್ತದೆ. ದಿನಗೂಲಿ ಕಾರ್ಮಿಕರಿಗೆ ಆಹಾರ, ನೀರು, ವಸತಿ, ಬಟ್ಟೆ ಹಾಗೂ ಔಷಧದ ವ್ಯವಸ್ಥೆ ಮಾಡುವುದು ಈ ಸಮಿತಿಯ ಕೆಲಸವಾಗಿರುತ್ತದೆ.
ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿರುವ ಕಾರ್ಮಿಕರಿಗೆ ಆಹಾರ, ವಸತಿ ಹಾಗೂ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗುವುದು. ಆಹಾರ ಒದಗಿಸಲು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿದ್ದ ಗುತ್ತಿಗೆದಾರರನ್ನೇ ಬಳಸಲಾಗುವುದು ಎಂದು ಸರಕಾರದ ಆದೇಶ ತಿಳಿಸಿದೆ. ವಿತ್ತ ಇಲಾಖೆ ಮತ್ತು ಜಿಎನ್‌ಸಿಟಿಡಿ ಯಿಂದ ಅಗತ್ಯದ ಹಣವನ್ನು ಪಡೆಯಲಾಗುವುದು. ಅಗತ್ಯಬಿದ್ದರೆ ದಿಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕ್ಷೇಮಾಭ್ಯುದಯ ಮಂಡಳಿಯ ನಿಧಿಯನ್ನು ಇದಕ್ಕೆ ಬಳಸಲಾಗುವುದು.
ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪಟ್ಟಿಯನ್ನು ಅಧಿಕಾರಿಗಳು ತಕ್ಷಣ ಕಂದಾಯ ಇಲಾಖೆಯ ವಿಭಾಗೀಯ ಆಯುಕ್ತರಿಗೆ ರವಾನಿಸಬೇಕು. 11 ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟ ಒದಗಿಸುತ್ತಿದ್ದ 39 ಸಂಸ್ಥೆಗಳ ವಿವರವನ್ನು ಶಿಕ್ಷಣ ಇಲಾಖೆ ನೀಡಿದೆ. ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ವೈದ್ಯಕೀಯ ನೆರವು ಒದಗಿಸಲು ಆಯಾ ಪ್ರದೇಶದ ಆರೋಗ್ಯ ಕೇಂದ್ರ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಪೂರಕವಾಗಿ ಅಗತ್ಯವಿರುವ ಸಿಬಂದಿಗಳ ನೆರವನ್ನು ಜಿಲ್ಲಾಡಳಿತ ಒದಗಿಸಲಿದೆ ಎಂದು ಸರಕಾರದ ಆದೇಶ ತಿಳಿಸಿದೆ.