ಕ್ರಿಪ್ಟೊ ಕರೆನ್ಸಿಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ಅದರ ನಿಯಂತ್ರಣ ಅಗತ್ಯ: ಸಂಸದೀಯ ಸ್ಥಾಯಿ ಸಮಿತಿ ಸಭೆ

Update: 2021-11-15 16:48 GMT

ಹೊಸದಿಲ್ಲಿ,ನ.15: ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕ್ರಿಪ್ಟೊಕರೆನ್ಸಿ ಬಗ್ಗೆ ಸೋಮವಾರ ಕರೆದಿದ್ದ ಸಭೆಯಲ್ಲಿ ವಿವಿಧ ಪಾಲುದಾರರು,ಕ್ರಿಪ್ಟೊಕರೆನ್ಸಿಯನ್ನು ನಿಲ್ಲಿಸಲು ಸಾಧ್ಯವಿಲ್ಲ,ಆದರೆ ಅದನ್ನು ನಿಯಂತ್ರಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಸರಕಾರದ ಮೂಲಗಳು ಸುದ್ದಿಗಾರರಿಗೆ ತಿಳಿಸಿವೆ.

ಇದು ಸ್ಥಾಯಿ ಸಮಿತಿಯು ಕರೆದಿದ್ದ ಇಂತಹ ಮೊದಲ ಸಭೆಯಾಗಿದ್ದು,ಕ್ರಿಪ್ಟೊ ವಿನಿಮಯ ಕೇಂದ್ರಗಳು,ಬ್ಲಾಕ್ ಚೇನ್, ಕ್ರಿಪ್ಟೊ ಅಸೆಟ್ಸ್ ಕೌನ್ಸಿಲ್ ಮತ್ತು ಭಾರತೀಯ ಕೈಗಾರಿಕೆ ಒಕ್ಕೂಟದ ಪ್ರತಿನಿಧಿಗಳು ಹಾಗೂ ಐಐಎಂ ಅಹ್ಮದಾಬಾದ್ ನ ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು. ನಿಯಂತ್ರಣ ವ್ಯವಸ್ಥೆ ಅಗತ್ಯ ಎಂದು ಈ ಪಾಲುದಾರರು ಒಪ್ಪಿಕೊಂಡರಾದರೂ ಬೆಳೆಯುತ್ತಿರುವ ಕ್ರಿಪ್ಟೊ ಉದ್ಯಮಕ್ಕೆ ನಿಯಂತ್ರಕವನ್ನು ನಿರ್ಧರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಕ್ರಿಪ್ಟೊಕರೆನ್ಸಿಯನ್ನು ನಿಯಂತ್ರಿಸಲು ನಿಯಂತ್ರಣ ವ್ಯವಸ್ಥೆಯೊಂದು ಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿದೆ, ಆದರೆ ನಿಯಂತ್ರಕ ಯಾರಾಗಬೇಕು ಎನ್ನುವ ಬಗ್ಗೆ ಉದ್ಯಮ ಸಂಘಗಳಿಗೆ ಮತ್ತು ಪಾಲುದಾರರಿಗೆ ಸ್ಪಷ್ಟವಿರಲಿಲ್ಲ ಎಂದು ಮೂಲಗಳು ತಿಳಿಸಿದವು.


ಜಯಂತ್ ಸಿನ್ಹಾ ನೇತೃತ್ವದ ಸಮಿತಿಯು ಹೂಡಿಕೆದಾರರ ಹಣಕ್ಕೆ ಭದ್ರತೆಯನ್ನು ಖಚಿತಪಡಿಸುವ ಮಹತ್ವವನ್ನೂ ಚರ್ಚಿಸಿತು. ರಾಷ್ಟ್ರಮಟ್ಟದ ದೈನಿಕಗಳಲ್ಲಿ ಕ್ರಿಪ್ಟೊಕರೆನ್ಸಿಗಳ ಬಗ್ಗೆ ಪೂರ್ಣಪುಟದ ಜಾಹೀರಾತುಗಳು ಪ್ರಕಟಗೊಳ್ಳುತ್ತಿರುವ ಬಗ್ಗೆ ಸಮಿತಿಯ ಸದಸ್ಯರೋರ್ವರು ಕಳವಳವನ್ನೂ ವ್ಯಕ್ತಪಡಿಸಿದರು. 

ಕ್ರಿಪ್ಟೊಕರೆನ್ಸಿಗಳು ಒಂದು ರೀತಿಯಲ್ಲಿ ಹೂಡಿಕೆದಾರರ ಪ್ರಜಾಪ್ರಭುತ್ವ ಆಗಿವೆ ಎಂದು ಐಐಎಂ ತಜ್ಞರು ಮತ್ತು ಶಿಕ್ಷಣ ತಜ್ಞರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಡಿಜಿಟಲ್ ಕರೆನ್ಸಿಗಳು ವಿಶ್ವಾದ್ಯಂತ ಸದ್ದು ಮಾಡುತ್ತಿದ್ದು,ಕ್ರಿಪ್ಟೊಕರೆನ್ಸಿಗಳನ್ನು ನಿಷೇಧಿಸಿ ಆರ್ಬಿಐ ಹೊರಡಿಸಿದ್ದ ಸುತ್ತೋಲೆಯನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.
ತನ್ನ ಮುಂದಿನ ಹೆಜ್ಜೆಯಾಗಿ ಸಮಿತಿಯು ಸರಕಾರದ ಅಧಿಕಾರಿಗಳು ತನ್ನೆದುರು ಹಾಜರಾಗಿ ಉಳಿದಿರುವ ಕಳವಳಗಳನ್ನು ನಿವಾರಿಸಬೇಕು ಎಂದು ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News