ಅಪೌಷ್ಟಿಕತೆ ನಿವಾರಣೆ ಯೋಜನೆಯ ಹಣ ಪೂರ್ಣವಾಗಿ ಬಳಕೆಯಾಗಿಲ್ಲ: ಕೇಂದ್ರದ ಅಂಕಿಅಂಶಗಳಿಂದ ಬಹಿರಂಗ
ಹೊಸದಿಲ್ಲಿ, ಡಿ.2: ದೇಶದಲ್ಲಿ ಅಪೌಷ್ಟಿಕತೆಯನ್ನು ತಡೆಯುವ ಉದ್ದೇಶವನ್ನು ಹೊಂದಿರುವ ಪೋಷಣ ಅಭಿಯಾನಕ್ಕಾಗಿ ಒದಗಿಸಲಾದ ಹಣವು ತುಂಬ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗಿದೆ ಎನ್ನುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು ತೋರಿಸಿವೆ ಎಂದು indianexpress ವರದಿ ಮಾಡಿದೆ.
ಕೇಂದ್ರವು ಪೋಷಣ ಅಭಿಯಾನಕ್ಕಾಗಿ 5,31,279.08 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿತ್ತಾದರೂ ಕೇವಲ 2,98,555.92 ಲ.ರೂ.ಗಳು ಬಳಕೆಯಾಗಿವೆ.
2021, ಮಾರ್ಚ್ ವರೆಗೆ ಪ.ಬಂಗಾಳಕ್ಕೆ 26,751.08 ಲ.ರೂ.ಗಳು ಬಿಡುಗಡೆಯಾಗಿದ್ದರೂ ಈವರೆಗೆ ಒಂದೇ ಒಂದು ಪೈಸೆ ಬಳಕೆಯಾಗಿಲ್ಲ. ಇದೇ ಅವಧಿಯಲ್ಲಿ ಉ.ಪ್ರದೇಶಕ್ಕೆ ಬಿಡುಗಡೆಯಾಗಿದ್ದ 56,968.96 ಲ.ರೂ.ಗಳ ಪೈಕಿ 19,219.28 ಲ.ರೂ.ಗಳು ಮಾತ್ರ ಬಳಕೆಯಾಗಿವೆ.
ಮಧ್ಯಪ್ರದೇಶವು 2019ರಿಂದ ತನಗೆ ಬಿಡುಗಡೆಯಾಗಿದ್ದ 39,398.53 ಲ.ರೂ.ಗಳಲ್ಲಿ 19,219.28 ಲ.ರೂ.ಗಳನ್ನು ಬಳಸಿದ್ದರೆ ರಾಜಸ್ಥಾನವು ತನಗೆ ಹಂಚಿಕೆಯಾಗಿದ್ದ ಹಣದಲ್ಲಿ ಶೇ.50ಕ್ಕೂ ಕಡಿಮೆ ಮೊತ್ತವನ್ನು ಬಳಸಿಕೊಂಡಿದೆ. ಸಚಿವಾಲಯವು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ್ದು, ಈ ಪೈಕಿ ಯಾವುದೂ ಪೋಷಣ ಅಭಿಯಾನದ ಹಣವನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ ಎಂದು ವರದಿಯಾಗಿದೆ.
ರಾಜ್ಯಸಭಾ ಸದಸ್ಯ ವಿನಯ ಸಹಸ್ರಬುದ್ಧೆ ನೇತೃತ್ವದ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವಜನ ಮತ್ತು ಕ್ರೀಡೆ ಕುರಿತು ಸಂಸದೀಯ ಸ್ಥಾಯಿ ಸಮಿತಿಯು ಸರಕಾರದಿಂದ ಕ್ರಮಾನುಷ್ಠಾನ ಕುರಿತು ತನ್ನ 33ನೇ ವರದಿಯಲ್ಲಿ ವಿವಿಧ ಯೋಜನೆಗಳಡಿ ಸಚಿವಾಲಯವು ಬಿಡುಗಡೆಗೊಳಿಸಿದ ಹಣದ ಬಳಕೆಯ ಕೊರತೆಯನ್ನು ಪ್ರಸ್ತಾಪಿಸಿದೆ. ಈ ವರದಿಯನ್ನು ಈ ವರ್ಷದ ಮಾರ್ಚ್ ನಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಗಿತ್ತು.
ಪ್ರಧಾನ ಮಂತ್ರಿ ಮಾತೃವಂದನಾ ಮತ್ತು 'ಬೇಟಿ ಬಚಾವೊ ಬೇಟಿ ಪಢಾವೊ' ಆಂದೋಲನದಂತಹ ಯೋಜನೆಗಳಿಗಾಗಿ ಹಣದ ಕಡಿಮೆ ಬಳಕೆಗೆ ಯಾವುದೇ ಕಾರಣಗಳನ್ನು ಸಚಿವಾಲಯವು ನೀಡಿಲ್ಲ ಎಂದು ನ.26ರಂದು ತನ್ನ ಸಭೆಯ ಬಳಿಕ ಸ್ಥಾಯಿ ಸಮಿತಿಯು ಬೆಟ್ಟು ಮಾಡಿತ್ತು.
ಸಚಿವಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಆರ್ಥಿಕ ವಿವೇಚನೆಯನ್ನು ಬಳಸಬೇಕು ಹಾಗು ಹಂಚಿಕೆಯಾಗಿರುವ ಹಣವನ್ನು ಗರಿಷ್ಠ ಪ್ರಮಾಣದಲ್ಲಿ ವಿವೇಚನೆಯೊಂದಿಗೆ ಬಳಸಬೇಕು. ಜೊತೆಗೆ ರಾಜ್ಯವಾರು ಪಟ್ಟಿಯನ್ನು ಕಡಿಮೆ ಬಳಕೆಗೆ ಕಾರಣಗಳೊಂದಿಗೆ ಸಲ್ಲಿಸಬೇಕು ಎಂದು ಸ್ಥಾಯಿ ಸಮಿತಿಯು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿರುವ ತನ್ನ ವರದಿಯಲ್ಲಿ ಸೂಚಿಸಿದೆ.
ಪ್ರಮುಖ ಯೋಜನೆಗಳಿಗೆ ಹಣದ ಬಳಕೆ ಹೆಚ್ಚದಿದ್ದರೆ ಹಣ ಹಂಚಿಕೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿರುವ ಸಮಿತಿಯು, ಅಪೌಷ್ಟಿಕತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ಹೊಂದಿರುವ ಅಂಗನವಾಡಿ ಕೇಂದ್ರಗಳು ಮತ್ತು ಕಾರ್ಯಕರ್ತೆಯರ ಮೇಲೆ ತಳಮಟ್ಟದಲ್ಲಿ ಹೇಗೆ ನಿಗಾಯಿರಿಸಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಸಚಿವಾಲಯವು ಒದಗಿಸಿಲ್ಲ ಎಂದು ಬೆಟ್ಟು ಮಾಡಿದೆ.