ಭಾರತದ ಬೃಹತ್ ಅಣೆಕಟ್ಟು, ನೀರಾವರಿ ಮತ್ತು ವಿದ್ಯುತ್ ಉತ್ಪಾದನಾ ಯೋಜನೆಗಳಲ್ಲಿ ಅಂಬೇಡ್ಕರ್ ಪಾತ್ರ

Update: 2022-05-24 04:22 GMT

1942ರ ಜುಲೈನಲ್ಲಿ ಅಂಬೇಡ್ಕರ್ ಮಂತ್ರಿಯಾಗಿದ್ದ ಕಾರ್ಮಿಕ ಇಲಾಖೆಗೆ ನೀರಾವರಿ -ವಿದ್ಯುತ್ ಶಕ್ತಿ-ಜಲ ವಿದ್ಯುತ್ ಶಕ್ತಿ ಉತ್ಪಾದನಾ ಕ್ಷೇತ್ರಗಳಲ್ಲಿ ‘ನೀತಿ’ಯನ್ನು ರೂಪಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಇದು ‘ಯುದ್ಧೋತ್ತರ ಪುನರ್ ನಿರ್ಮಾಣ ಸಮಿತಿ’ಯ (Reconstruction Committe of Council-RCC) ಯೋಜನೆಗಳ ಭಾಗವಾಗಿತ್ತು . ವೈಸರಾಯ್ ಆರ್‌ಸಿಸಿಯ ಅಧ್ಯಕ್ಷರಾಗಿದ್ದರೆ, ಕೆಂದ್ರ ಸರಕಾರದ ಕ್ಯಾಬಿನೆಟ್‌ನ ಎಲ್ಲಾ ಸದಸ್ಯರು ಅಥವಾ ಮಂತ್ರಿಗಳು, ಪ್ರಾಂತೀಯ ಹಾಗೂ ರಾಜ್ಯ ಸರಕಾರಗಳ ಪ್ರತಿನಿಧಿಗಳು, ವ್ಯಾಪಾರ, ವಾಣಿಜ್ಯ, ಉದ್ದಿಮೆಗಳ ಪ್ರತಿನಿಧಿಗಳು ಅದರ ಸದಸ್ಯರಾಗಿದ್ದರು. ಈ ನೆಲೆಯಲ್ಲಿ ಸ್ವತಂತ್ರ ಕಾರ್ಮಿಕ ಇಲಾಖೆಯ ಮಂತ್ರಿಯಾಗಿ ಡಾ. ಅಂಬೇಡ್ಕರ್ ಅವರು ಆರ್‌ಸಿಸಿಯ ಸದಸ್ಯರೂ ಆಗಿದ್ದರು.

                     ಸಂವಿಧಾನ ಹಾಗೂ ಕಾನೂನು ತಜ್ಞ ಅಂಬೇಡ್ಕರ್‌ಗೂ ನೀರಾವರಿ , ವಿದ್ಯುತ್ ಯೋಜನೆಗಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಕೆಲವರಲ್ಲಿ ಉದ್ಬವವಾಗಬಹುದು. ಯಾಕೆಂದರೆ ಜಗತ್ತು ಅಂಬೇಡ್ಕರ್ ಅವರನ್ನು ಸಂವಿಧಾನ ಹಾಗೂ ಕಾನೂನು ತಜ್ಞ; ದಲಿತರ ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟಗಾರ ಎಂಬ ಸೀಮಿತ ಪರಿಧಿಯಲ್ಲಿಯೇ ಅರ್ಥಮಾಡಿಕೊಂಡು ಬಂದಿದೆ. ಅದರೆ ಅಂಬೇಡ್ಕರ್ ಮೂಲತಃ ಒಬ್ಬ ಕಾನೂನು ಹಾಗೂ ಸಂವಿಧಾನ ತಜ್ಞ ಹೇಗೆ ಆಗಿದ್ದರೋ ಹಾಗೆಯೇ ಅವರೊಬ್ಬ ಅರ್ಥಶಾಸ್ತ್ರಜ್ಞ ಕೂಡಾ ಆಗಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಸಂವಿಧಾನಗಳ ಹೊರತಾಗಿ ಅವರಲ್ಲಿ ರಾಷ್ಟ್ರ ನಿರ್ಮಾಣದ ಯೋಜನೆಗಳು ಸ್ಪಷ್ಟವಾಗಿ ಇದ್ದವು. ತನ್ನ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಗಳನ್ನು ಬೃಹತ್ ಅಣೆಕಟ್ಟು -ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆಗಳ ನೀತಿ ನಿರೂಪಣೆ ಮತ್ತು ಯೋಜನೆಗಳಲ್ಲಿ ಜಾರಿ ಮಾಡುತ್ತಾರೆ. ಹೀಗೆ ಬೃಹತ್ ನೀರಾವರಿ ಹಾಗೂ ವಿವಿಧೋದ್ದೇಶ ವಿದ್ಯುತ್ ಉತ್ಪಾದನಾ ಯೋಜನೆಗಳ ನೀತಿ ನಿರೂಪಣೆ ಮತ್ತು ಆ ಯೋಜನೆಗಳ ಸಾಕಾರದಲ್ಲಿ ಡಾ. ಅಂಬೇಡ್ಕರ್ ಅವರ ಪಾತ್ರ -ಕೊಡುಗೆ ತುಂಬಾ ಪರಿಣಾಮಕಾರಿಯಾಗಿ ಇತ್ತು ಎಂಬ ಅಂಶ ಅಷ್ಟಾಗಿ ಬೆಳಕಿಗೆ ಬರದ ವಿಚಾರವಾಗಿ ಉಳಿದುಬಿಟ್ಟಿದೆ. ಈ ಕುರಿತಂತೆ ಚರ್ಚಿಸುವುದು ಈ ಲೇಖನದ ಉದ್ದೇಶವಾಗಿದೆ.

           ಬೃಹತ್ ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯ ನೀತಿ ನಿರೂಪಣೆಯಲ್ಲಿ ಡಾ. ಅಂಬೇಡ್ಕರ್ ಪಾಲ್ಗೊಳ್ಳಲು ಕಾರಣವೇನೆಂದರೆ - ಅವರು ವೈಸರಾಯ್ ಕಾರ್ಯಕಾರಿ ಕೌನ್ಸಿಲ್‌ನ ಕ್ಯಾಬಿನೆಟ್ ಸದಸ್ಯರಾಗಿ ನೀರಾವರಿ, ಕಾರ್ಮಿಕ ಹಾಗೂ ವಿದ್ಯುತ್ ಇಲಾಖೆಯ ಇನ್ ಚಾರ್ಜ್ ವಹಿಸಿಕೊಂಡು 1942ರಿಂದ 1946 ವರೆಗೆ ಕಾರ್ಯನಿರ್ವಹಿಸಿದ್ದು ಮುಖ್ಯವಾಗಿದೆ. 1937ರಲ್ಲಿ ಸ್ವತಂತ್ರ ಕಾರ್ಮಿಕ ಇಲಾಖೆಯನ್ನು ರಚಿಸಲಾಯಿತು. ಕೈಗಾರಿಕಾ ಇಲಾಖೆ ಕೂಡಾ ಅದರ ಭಾಗವಾಗಿತ್ತು. ಈ ಹಂತದಲ್ಲಿ ನೀರಾವರಿ, ವಿದ್ಯುತ್ ವ್ಯವಹಾರಗಳನ್ನು ಕಾರ್ಮಿಕ ಇಲಾಖೆಗೆ ವರ್ಗಾಯಿಸಲಾಯಿತು. 1942 ರ ಜುಲೈನಲ್ಲಿ ಅಂಬೇಡ್ಕರ್ ಮಂತ್ರಿಯಾಗಿದ್ದ ಕಾರ್ಮಿಕ ಇಲಾಖೆಗೆ ನೀರಾವರಿ -ವಿದ್ಯುತ್ ಶಕ್ತಿ-ಜಲ ವಿದ್ಯುತ್ ಶಕ್ತಿ ಉತ್ಪಾದನಾ ಕ್ಷೇತ್ರಗಳಲ್ಲಿ ‘ನೀತಿ’ಯನ್ನು ರೂಪಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಇದು ‘ಯುದ್ಧೋತ್ತರ ಪುನರ್ ನಿರ್ಮಾಣ ಸಮಿತಿ’ಯ (Reconstruction Committe of Council-RCC) ಯೋಜನೆಗಳ ಭಾಗವಾಗಿತ್ತು . ವೈಸರಾಯ್ ಆರ್‌ಸಿಸಿಯ ಅಧ್ಯಕ್ಷರಾಗಿದ್ದರೆ, ಕೆಂದ್ರ ಸರಕಾರದ ಕ್ಯಾಬಿನೆಟ್‌ನ ಎಲ್ಲಾ ಸದಸ್ಯರು ಅಥವಾ ಮಂತ್ರಿಗಳು, ಪ್ರಾಂತೀಯ ಹಾಗೂ ರಾಜ್ಯ ಸರಕಾರಗಳ ಪ್ರತಿನಿಧಿಗಳು, ವ್ಯಾಪಾರ, ವಾಣಿಜ್ಯ, ಉದ್ದಿಮೆಗಳ ಪ್ರತಿನಿಧಿಗಳು ಅದರ ಸದಸ್ಯರಾಗಿದ್ದರು. ಈ ನೆಲೆಯಲ್ಲಿ ಸ್ವತಂತ್ರ ಕಾರ್ಮಿಕ ಇಲಾಖೆಯ ಮಂತ್ರಿಯಾಗಿ ಡಾ. ಅಂಬೇಡ್ಕರ್ ಅವರು ಆರ್‌ಸಿಸಿಯ ಸದಸ್ಯರೂ ಆಗಿದ್ದರು. ಆರ್‌ಸಿಸಿಗೆ ಯುದ್ಧೋತ್ತರವಾಗಿ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿ ದೇಶವನ್ನು ಅಭಿವೃದ್ಧಿಗೊಳಿಸುವುದು ದೊಡ್ಡದಾದ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್‌ಸಿಸಿ ಎಲ್ಲಾ ಇಲಾಖೆಗಳಿಗೂ ಅಖಿಲ ಭಾರತ ಮಟ್ಟದ ಆರ್ಥಿಕ ನೀತಿ ನಿರೂಪಣೆ ಮತ್ತು ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ನೀಡಿತು. ಆದರೆ ಬೇರೆ ಯಾವುದೇ ಇಲಾಖೆಗಳಿಗೆ ಅಖಿಲ ಭಾರತ ಮಟ್ಟದ ನೀತಿ ನಿರೂಪಣೆ ಹಾಗೂ ಯೋಜನೆಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ಆದರೆ ಡಾ. ಅಂಬೇಡ್ಕರ್ ನೇತೃತ್ವದಲ್ಲಿನ ಕಾರ್ಮಿಕ ಇಲಾಖೆಯು ಈ ದಿಶೆಯಲ್ಲಿ ಯಶಸ್ಸನ್ನು ಸಾಧಿಸುತ್ತದೆ. ಯಾಕೆಂದರೆ ‘ಕಾರ್ಮಿಕ ಇಲಾಖೆಯಲ್ಲಿ ಬಲವಾದ ಒಂದು ಟೀಮ್ ವರ್ಕ್ ಇತ್ತು ಮತ್ತು ಆ ತಂಡಕ್ಕೆ ಡಾ. ಅಂಬೇಡ್ಕರ್ ನಾಯಕರಾಗಿದ್ದರು’ ಎಂಬುದಾಗಿ ಸುಖ್ ದೇವ್ ಥೋರಾಟ್ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ.

ಆರ್‌ಸಿಸಿಯ ಉದ್ದೇಶಗಳು:

  1. ಜನರ ಜೀವನ ಮಟ್ಟವನ್ನು ಸುಧಾರಿಸುವುದು ಮತ್ತು ಎಲ್ಲರಿಗೂ ಉದ್ಯೋಗಗಳನ್ನು ಖಾತರಿಪಡಿಸುವುದು

  2. ಉತ್ಪಾದಿಸಿದ ಸಂಪತ್ತನ್ನು ಜನರ ನಡುವೆ ಸಮಾನವಾಗಿ ಹಂಚದೇ ಜನರ ಜೀವನ ಮಟ್ಟ ಸುಧಾರಿಸುವುದಿಲ್ಲ ಹಾಗೂ ಅವರ ಕೊಳ್ಳುವ ಶಕ್ತಿ ಕೂಡಾ ಹೆಚ್ಚಾಗುವುದಿಲ್ಲ. ಕೊಳ್ಳುವ ಶಕ್ತಿಯನ್ನು ಉತ್ಪಾದಕತೆ ಹಾಗೂ ಶ್ರಮದ ದಕ್ಷತೆ ಮತ್ತು ಪರಿಣಾಮಕಾರಿತ್ವ ಹೆಚ್ಚಿಸುವುದರ ಜೊತೆಗೆ ‘ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರ’ಗಳನ್ನು ಪುನರ್ ಸಂಘಟಿಸುವ ಮೂಲಕ ಸಾಧಿಸುವುದು. ಹಾಗೆಯೇ ಕೃಷಿಯು ಭಾರತದ ಪ್ರಾಥಮಿಕ ಶ್ರಮವಾಗಿ ಉಳಿದಿದೆ. ಆದ್ದರಿಂದ ಕೃಷಿ ಮತ್ತು ಕೈಗಾರಿಕೆಯನ್ನು ಜೊತೆ ಜೊತೆಗೆ ಸಮತೋಲಿತವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಈ ಎರಡು ಆಯಾಮದ ಉದ್ದೇಶಗಳನ್ನು ಜಾರಿ ಮಾಡಲು ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಸ್ವತಃ ಡಾ. ಅಂಬೇಡ್ಕರ್ ಅವರು ‘ಆರ್ಥಿಕ ಯೋಜನೆಗಳು ಮತ್ತು ಯೋಜಿತ ಅಭಿವೃದ್ಧಿ’ಯ ಹಿಂದೆ ಇರುವ ಫಿಲಾಸಫಿ ಹಾಗೂ ಮಹತ್ವವನ್ನು ಪ್ರಸ್ತುತಪಡಿಸುತ್ತಾರೆ: ‘‘ಯೋಜಿತ ಆರ್ಥಿಕ ಅಭಿವೃದ್ಧಿ ಯೋಜನೆಗಳು ಕಾರ್ಯಕ್ರಮಗಳನ್ನು ಅಭಿವೃದ್ಧಿಗೊಳಿಸುವುದು ಮಾತ್ರವಲ್ಲದೆ; ಶಾಂತಿ, ವಸತಿ, ಬಟ್ಟೆ-ಬರೆ, ಶಿಕ್ಷಣ, ಉತ್ತಮ ಆರೋಗ್ಯ, ಘನತೆಯಿಂದ ದುಡಿಯುವ ಹಕ್ಕು ಮುಂತಾದ ವಿಚಾರಗಳಲ್ಲಿ ಸಾಮಾನ್ಯ ಮನುಷ್ಯನನ್ನು ಪರಿವರ್ತನೆ ಮಾಡಿಬಿಡುತ್ತದೆ’’. ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತದಲ್ಲಿ ಯೋಜಿತ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಹಲವರು ಹಲವಾರು ಪ್ರಯತ್ನಗಳನ್ನು ನಡೆಸಿಕೊಂಡು ಬಂದಿದ್ದಾರೆ. ಈ ಕುರಿತಂತೆ ಜೆ. ಆರ್.ಡಿ.ಟಾಟಾ ‘ಬಾಂಬೇ ಪ್ಲ್ಯಾನ್’ ಅನ್ನು ಮಂಡಿಸಿದರೆ; ‘ಪೀಪಲ್ಸ್ ಪ್ಲ್ಯಾನ್ ಅಥವಾ ಕಾಂಗ್ರೆಸ್ ಪ್ಲ್ಯಾನ್’ ಅನ್ನು ನೆಹರೂ ಮತ್ತು ಮೇಘನಾದ ಸಹಾ ಅವರ ಸಹಯೋಗದಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ರೂಪಿಸಿತು.

                                           ಇನ್ನು ಆರ್‌ಸಿಸಿ ನೇತೃತ್ವದ ಯೋಜನೆಗಳಿಗೆ ಸಂಬಂಧಿಸಿದಂತೆ ವಿ.ಕೆ. ಆರ್.ವಿ. ರಾವ್, ಡಿ. ಆರ್. ಗಾಡ್ಗೀಲ್, ಸಿ.ಎನ್. ವಕೀಲ್, ಸಿ.ಎಸ್. ಲೋಕನಾಥನ್ ರಂತಹ ಭಾರತೀಯ ಅರ್ಥಶಾಸ್ತ್ರಜ್ಞರು, ಮೇಘನಾದ ಸಹಾರಂತಹ ವಿಜ್ಞಾನಿಗಳು ಕೂಡಾ ಈ ಸಮಿತಿಯ ಸಹಯೋಗಿಗಳು ಆಗಿರುತ್ತಾರೆ. ಹಾಗೆಯೇ ಆರ್‌ಸಿಸಿಯ ಉನ್ನತ ಸಮಿತಿ ಮತ್ತೆ ಐದು ಉಪ ಸಮಿತಿಗಳನ್ನು ನೇಮಿಸುತ್ತದೆ. ಆ ಉಪ ಸಮಿತಿಗಳು ಮತ್ತೆ ಅವುಗಳಲ್ಲಿಯೇ ‘ನೀತಿ ಸಮಿತಿ’ಗಳನ್ನು ಹೊಂದಿರುತ್ತವೆ. ಈ ನೀತಿ (ಪಾಲಿಸಿ) ಸಮಿತಿಗಳಿಗೆ ಆಯಾಯ ಇಲಾಖೆಯ ಸೆಕ್ರೆಟರಿಗಳು ಮುಖ್ಯಸ್ಥರು ಆಗಿರುತ್ತಾರೆ. ‘ಇಲಾಖೆಯ ಅಧಿಕೃತ ಹಾಗೂ ನೀತಿ ಸಮಿತಿ’ ಸೇರಿ ಆರ್‌ಸಿಸಿಗೆ ಆ ಇಲಾಖೆಗೆ ಸಂಬಂಧಪಟ್ಟ ಆರ್ಥಿಕ ನೀತಿ ಹಾಗೂ ಯೋಜನೆಯನ್ನು ಅನುಮೋದನೆಗೆ ಸಲ್ಲಿಸಬೇಕಿತ್ತು. ಈ ಕಾರ್ಯ ಪ್ರಕ್ರಿಯೆ ಪ್ರಕಾರ- ‘ಕಾರ್ಮಿಕ ಇಲಾಖೆಗೆ ನೀರಾವರಿ, ವಿದ್ಯುತ್ ಶಕ್ತಿ , ಜಲ ವಿದ್ಯುತ್ ಕೃಷಿ’ ಕ್ಷೇತ್ರಗಳಲ್ಲಿನ ನೀತಿ ನಿರೂಪಣೆ ಹಾಗೂ ಯೋಜನೆಗಳನ್ನು ತಯಾರಿಸುವ ಜವಾಬ್ದಾರಿ ಬಿದ್ದರೆ; ಕೈಗಾರಿಕಾ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಕೈಗಾರಿಕೆಗಳು; ಯುದ್ಧ ಸಾರಿಗೆ, ಅಂಚೆ ಮತ್ತು ವಾಯು ಸಾರಿಗೆ ಇಲಾಖೆಗೆ ರಸ್ತೆ ಮತ್ತು ಸಾರಿಗೆ ಕ್ಷೇತ್ರ ನೀತಿ ನಿರೂಪಣೆ ಮತ್ತು ಯೋಜನೆಯ ತಯಾರಿಕೆಯ ಹೊಣೆಯನ್ನು ಹೊರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಮಂತ್ರಿಯಾಗಿ ಆ ಇಲಾಖೆಗೆ ಆರ್‌ಸಿಸಿ ವಹಿಸಿಕೊಟ್ಟಿರುವ ಕ್ಷೇತ್ರಗಳಲ್ಲಿ ಡಾ. ಅಂಬೇಡ್ಕರ್ ಕೆಲಸ ನಿರ್ವಹಿಸಬೇಕಾತ್ತದೆ. ಈ ಸಂಬಂಧಿತವಾಗಿ ಕಾರ್ಮಿಕ ಇಲಾಖೆ ನೀರಾವರಿ, ಜಲಮಾರ್ಗ, ನೌಕಾಯಾನ ಕುರಿತಂತೆ ನೀತಿ ಹಾಗೂ ಯೋಜನೆಗಳನ್ನು ಅಖಿಲ ಭಾರತ ಮಟ್ಟದಲ್ಲಿ ಅನ್ವಯವಾಗುವಂತೆ ಅಭಿವೃದ್ಧಿಪಡಿಸಲು ಆರಂಭಿಸಿತು. ಇದರ ಭಾಗವಾಗಿ ಅಂಬೇಡ್ಕರ್ ಮತ್ತು ಅವರ ಇಲಾಖೆಯಲ್ಲಿನ ತಂಡ- ದಾಮೋದರ ನದಿ ಕಣಿವೆ ಯೋಜನೆ, ಸೋನೆ ನದಿ ಕಣಿವೆ ಯೋಜನೆ, ಒರಿಸ್ಸಾ ನದಿ ಯೋಜನೆಗಳು- ಮಹಾ ನದಿ ಯೋಜನೆ, ಚಂಬಲ್ ನದಿ ಕಣಿವೆ ಯೋಜನೆ, ದಖ್ಖನ್ ನದಿ ಯೋಜನೆ ಮುಂತಾದ ಯೋಜನೆಗಳನ್ನು ರೂಪಿಸುತ್ತದೆ. ಡಾ. ಅಂಬೇಡ್ಕರ್ ಅವರ ರಾಜಕೀಯ, ಸಂವಿಧಾನಾತ್ಮಕ ಹಾಗೂ ಅರ್ಥಶಾಸ್ತ್ರದಲ್ಲಿನ ಆಳವಾದ ಪ್ರೌಡಿಮೆ, ಜ್ಞಾನ ಮತ್ತು ಅನುಭವಗಳು ಈ ಮೇಲಿನ ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆಗಳ ತಯಾರಿಕೆಯಲ್ಲಿ ನೆರವಾಗುತ್ತವೆ ಎಂದು ಹೇಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆಗಳನ್ನು ಸುಖ್ ದೇವ್ ಥೋರಾಟ್ ಗುರುತಿಸುತ್ತಾರೆ:

   1. ಅಖಿಲ ಭಾರತ ಮಟ್ಟದಲ್ಲಿ ಜಲ ಹಾಗೂ ವಿದ್ಯುತ್ ಸಂಪಲ್ಮೂನಗಳ ಕುರಿತಾಗಿ ಒಂದು ನಿರ್ದಿಷ್ಟ ನೀತಿಯ ರೂಪಿಸುವಿಕೆ

   2. ‘ ಕೇಂದ್ರ ಜಲ ಮಾರ್ಗ, ನೀರಾವರಿ ಮತ್ತು ನೌಕಾಯಾನ ಆಯೋಗ’ದ (ಪ್ರಸ್ತುತ ಕೇಂದ್ರ ನೀರು ಆಯೋಗ) ಮತ್ತು ‘ಕೇಂದ್ರ ವಿದ್ಯುತ್ ತಾಂತ್ರಿಕ ಮಂಡಳಿ’(ಪ್ರಸ್ತುತ ಕೇಂದ್ರ ವಿದ್ಯುತ್ ಶಕ್ತಿ ಪ್ರಾಧಿಕಾರ) ರಚನೆ.

  3. ನದಿಗಳ ಸಮಗ್ರ ಅಭಿವೃದ್ಧಿಗಾಗಿ ನದಿ ಕಣಿವೆ ಪ್ರಾಧಿಕಾರಗಳು ಅಥವಾ ನಿಗಮಗಳು ಪರಿಕಲ್ಪನೆಯ ಅಳವಡಿಕೆ.

  4. ಬಹು ಉದ್ದೇಶಿತ ನದಿ ಕಣಿವೆ ಅಭಿವೃದ್ಧಿ ಯೋಜನೆಗಳನ್ನು ಭಾರತದಲ್ಲಿ ಪ್ರಥಮವಾಗಿ ಪರಿಚಯಿಸುವಿಕೆ.

  5. ದಾಮೋದರ, ಸೋನೆ, ಮಹಾನದಿ, ಮುಂತಾದ ಮುಖ್ಯ ನದಿ ಕಣಿವೆ ಯೋಜನೆಗಳ ಆರಂಭಿಸುವಿಕೆ.

  6. ಸಂವಿಧಾನದ 74 ವಿಧಿಗೆ ತಿದ್ದುಪಡಿ ತಂದು ಅದನ್ನು ಕೇಂದ್ರ ಪಟ್ಟಿಗೆ (union list ) ಸೇರಿಸಿದ್ದು ಹಾಗೂ ವಿಧಿ 262 ಅನ್ನು ಸಂವಿಧಾನಕ್ಕೆ ಸೇರಿಸಿ ಅಂತರ್ ರಾಜ್ಯ ನೀರು ವಿವಾದಗಳಿಗೆ ಸಂಬಂಧಿಸಿದ ನ್ಯಾಯಾಧಿಕರಣದ ಸ್ಥಾಪನೆ.

             ಹೀಗೆ ಡಾ. ಅಂಬೇಡ್ಕರ್ ಬೃಹತ್ ನೀರಾವರಿ ಮತ್ತು ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿನ ಯೋಜನೆಗಳಿಗೆ ಒಂದು ಸ್ಪಷ್ಟ ರೂಪವನ್ನು ಕೊಡುತ್ತಾರೆ. ಸಂವಿಧಾನದಲ್ಲಿ ಜಲ ಸಂಪನ್ಮೂಲ ಹಾಗೂ ವಿದ್ಯುತ್ ಉತ್ಪಾದನೆಯನ್ನು ‘ರಾಜ್ಯ ಇಲ್ಲವೇ ಅರೆ -ರಾಜ್ಯ ವಿಷಯ’ವನ್ನಾಗಿ ಮಾಡುತ್ತಾರೆ. ಹಾಗೆಯೇ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಸಂಬಂಧಪಟ್ಟಂತೆ ಇಲೆಕ್ಟ್ರಿಕ್ ಇಂಜಿನಿಯರ್‌ಗಳಿಗೆ ವಿದೇಶದಲ್ಲಿ ತರಬೇತಿಯನ್ನು ಕೊಡಿಸಲಾಗುತ್ತದೆ. ತರಬೇತಿಯು ವಿದ್ಯುತ್ ಉತ್ಪಾದನೆಯ ತಾಂತ್ರಿಕತೆ, ಆಡಳಿತ ಹಾಗೂ ವಾಣಿಜ್ಯ ವಿಚಾರಗಳನ್ನು ಒಳಗೊಂಡಿತು. ಈ ರೀತಿಯಾಗಿ ತುಂಬಾ ದೂರ ದೃಷ್ಟಿಯಿಂದ ವಿದ್ಯುತ್ ಉತ್ಪಾದನೆಯನ್ನು ಡಾ. ಅಂಬೇಡ್ಕರ್ ಯೋಜಿಸುತ್ತಾರೆ. ಹಾಗೆಯೇ ರಾಜ್ಯಗಳಿಗೆ ವಿದ್ಯುತ್ ಅನ್ನು ಹಂಚಿಕೆ ಮಾಡಲು ರೀಜನಲ್ ಗ್ರಿಡ್ ವ್ಯವಸ್ಥೆಯನ್ನು ಕೂಡಾ ಯೋಜಿಸುತ್ತಾರೆ. ಇದರ ಜೊತೆಗೆ ವಿದ್ಯುತ್ ಪ್ರಸರಣ ಇಲಾಖೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ.. ಇದಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ವಿದ್ಯುತ್ ಬೆಲೆ ನಿಗದಿ ಕುರಿತ ನೀತಿಯನ್ನು ಕೂಡಾ ರೂಪಿಸಲಾಯಿತು.

   ಬರೋಡಾ, ಜೈಪುರ, ಕಾಥೇವಾಡ, ಕಚ್ಛ್, ಬವನಗರ್, ಬುಂಡಿ, ಹೌಂದ್, ಮಾರ್ವಿ ಮುಂತಾದ ಕಡೆಗಳಲ್ಲಿ ಪ್ರವಾಹದ ನೀರನ್ನು ಸಂಗ್ರಹಿಸಿ ಇಡಲು ಸಂಗ್ರಹ ಅಣೆಕಟ್ಟುಗಳನ್ನು ಕಟ್ಟಲು ಕೂಡಾ ಕಾರ್ಮಿಕ ಇಲಾಖೆ ಸಹಾಯ ಮಾಡುತ್ತದೆ.

               ಡಾ.ಅಂಬೇಡ್ಕರ್ ಅವರು 1943 ಅಕ್ಟೋಬರ್ ಮತ್ತು 1945ರ ಫೆಬ್ರವರಿಯಲ್ಲಿ ನಡೆದ ಎರಡು ಸಮ್ಮೇಳನಗಳಲ್ಲಿ ‘ಪವರ್ ಪಾಲಿಸಿ’ ಗೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ವಿದ್ಯುತ್ ಪೂರೈಕೆ ಇಲಾಖೆ ಮತ್ತು ವಿದ್ಯುತ್ ಸಂಶೋಧನಾ ಬ್ಯುರೋ ಸ್ಥಾಪನೆ, ಶಕ್ತಿಶಾಲಿ ವಿದ್ಯುತ್ ಸಾಧನ ಸಲಕರಣೆಗಳ ಉತ್ಪಾದನೆ, ಪ್ರಾಂತೀಯ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ, ತಾಂತ್ರಿಕ ಮಾನವ ಸಂಪನ್ಮೂಲ ರಚನೆಗೆ ತರಬೇತಿ ಇವೇ ವಿಚಾರಗಳ ಬಗ್ಗೆ ಡಾ. ಅಂಬೇಡ್ಕರ್ ಆ ಸಮ್ಮೇಳನಗಳಲ್ಲಿ ಚರ್ಚಿಸುತ್ತಾರೆ.

                  ಹೀಗೆ ಅಂಬೇಡ್ಕರ್, ನೆಹರೂ ಕರೆಯುವ ‘ಅಣೆಕಟ್ಟುಗಳು ಆಧುನಿಕ ದೇವಾಲಯಗಳು’ ಮತ್ತು ವಿದ್ಯುತ್ ಉತ್ಪಾದನೆ ಯೋಜನೆಗಳಿಗೆ ಅಡಿಪಾಯವನ್ನು ಹಾಕಿ ಕೊಡುತ್ತಾರೆ. ಈ ಎಲ್ಲಾ ನೀರಾವರಿ ಹಾಗೂ ವಿದ್ಯುತ್ ಯೋಜನೆಗಳನ್ನು 1942 ರಿಂದ 1946ರ ಅವಧಿಯಲ್ಲಿ ಸಂಪೂರ್ಣಗೊಳಿಸಲಾಗುತ್ತದೆ ಎಂಬುದಾಗಿ ಥೋರಾಟ್ ಗಮನಕ್ಕೆ ತರುತ್ತಾರೆ. ನೀರಾವರಿ ಯೋಜನೆಗಳಲ್ಲಿ ಡಾ. ಅಂಬೇಡ್ಕರ್ ಅವರು ಬಹಳ ಆಸಕ್ತಿದಾಯಕವಾಗಿ ತೊಡಗಿಕೊಂಡಿರುವುದಕ್ಕೆ ಇಡೀ ದಲಿತ ಸಮುದಾಯ ನೂರಾರು ಶತಮಾನಗಳ ಕಾಲ ಕೆರೆ, ಬಾವಿ, ನದಿಗಳ ನೀರನ್ನು ಮುಟ್ಟಲು-ಕುಡಿಯಲು ಕಷ್ಟಪಟ್ಟದ್ದು, ನಿಷೇಧವನ್ನು ಹೇರಿಸಿಕೊಂಡದ್ದು ಕಾರಣ ಇರುವಂತಿದೆ. ಸ್ವತಃ ಅಂಬೇಡ್ಕರ್ ಅವರು ಚೌದಾರ್ ಕೆರೆಯಲ್ಲಿ ನೀರನ್ನು ಕುಡಿಯಲು ಸತ್ಯಾಗ್ರಹ ಮಾಡಿದ್ದು ಕೂಡಾ ಇನ್ನೊಂದು ಮುಖ್ಯ ಕಾರಣ ಎಂಬಂತೆ ಭಾಸವಾಗುತ್ತಿದೆ. ಗಾಂಧಿ ಸಾಮಾಜಿಕ ಸಂಸ್ಥೆಗಳನ್ನು ಬಲಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದರೆ; ಇತ್ತ ಡಾ. ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಸಾಂವಿಧಾನಿಕ ಸಂಸ್ಥೆಗಳನ್ನು, ಆಧುನಿಕ ರಾಷ್ಟ್ರದ ದೇವಾಲಯಗಳಾದ ಆಣೆಕಟ್ಟುಗಳು ಹಾಗೂ ವಿದ್ಯುತ್ ಉತ್ಪಾದನೆ ಸಂಸ್ಥೆಗಳನ್ನು ಕಟ್ಟುವಲ್ಲಿ ನಿರತರಾಗಿದ್ದರು.

     (1993 ರಲ್ಲಿ ಸೆಂಟ್ರಲ್ ವಾಟರ್ ಕಮಿಷನ್ ಸುಖ್ ದೇವ್ ಥೋರಾಟ್ ಅವರ ನೇತೃತ್ವದಲ್ಲಿ ತಂದ ವರದಿಯನ್ನು ಈ ಲೇಖನ ಆಧಾರಿತವಾಗಿದೆ)

Writer - ರಘು ಧರ್ಮಸೇನ

contributor

Editor - ರಘು ಧರ್ಮಸೇನ

contributor

Similar News