ಉನ್ನತ ಶಿಕ್ಷಣದ ಕಾರ್ಪೊರೇಟೀಕರಣ

Update: 2022-07-15 06:09 GMT

ಕರ್ನಾಟಕ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಮತ್ತು ತೀರಾ ಅವಸರದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ಜಾರಿಗೆ ತಂದಿದೆ. ಎನ್‌ಇಪಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುತ್ತದೆ ಎನ್ನಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಎನ್‌ಇಪಿಯನ್ನು ಕಾರ್ಯಗತಗೊಳಿಸಲಾಗಿದ್ದು ಅದರ ಸಾಧಕ ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆಗಳು ಈಗಲೂ ನಡೆಯುತ್ತವೆ. ಇದರ ಮಧ್ಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊಸ ‘ಕರ್ನಾಟಕ ರಾಜ್ಯ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ಕಾಯ್ದೆ-2022’ರನ್ನು ಪರಿಚಯಿಸಲು ಇದರ ಕರಡು ಪ್ರತಿಯನ್ನು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಜಾಲತಾಣದಲ್ಲಿ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಬಿಡುಗಡೆ ಮಾಡಲಾಗಿದೆ.

ಡಾ. ವಾಸುದೇವ್ ಅತ್ರೆಯವರ ಅಧ್ಯಕ್ಷತೆಯಲ್ಲಿ ರೂಪಿಸಿರುವ ಈ ಕರಡು ಪ್ರತಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ ನಾರಾಯಣರವರು ನಮ್ಮ ವಿಶ್ವವಿದ್ಯಾನಿಲಯಗಳನ್ನು ಐಐಎಂ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ. ಬಹುಮುಖ್ಯವಾಗಿ ಐಐಎಂಗಳಿಗೆ ವಿಶ್ವವಿದ್ಯಾನಿಲಯದ ಸ್ವರೂಪಗಳಿಲ್ಲ. 2017ರವರೆಗೆ ಐಐಎಂಗಳು ಕೇವಲ ಸ್ನಾತಕೋತ್ತರ ಡಿಪ್ಲೊಮಾ (ಎಂಬಿಎ ಪದವಿಗಳಿಗೆ ಸಮಾನಂತರವಾಗಿ)ಗಳನ್ನು ಮಾತ್ರ ನೀಡಲಾಗುತ್ತಿತ್ತು. 2017ರ ನಂತರ ಐಐಎಂಗಳಲ್ಲಿ ಎಂಬಿಎ ಮತ್ತು ಇತರ ಪದವಿಗಳನ್ನು ನೀಡಲು ಕೇಂದ್ರ ಹೊಸ ಐಐಎಂ ಕಾಯ್ದೆ ಮೂಲಕ ಅವಕಾಶ ಕಲ್ಪಿಸಲಾಯಿತು. ಐಐಎಂಗಳನ್ನು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ (ರಾಷ್ಟ್ರೀಯ ಪ್ರಮುಖ ಸಂಸ್ಥೆಗಳು) ಎಂದು ಗುರುತಿಸಿ ಅವುಗಳಿಗೆ ಕೇಂದ್ರ ಸರಕಾರ ಸಾಕಷ್ಟು ಅನುದಾನವನ್ನು ನೀಡುವುದರ ಮೂಲಕ ಅವುಗಳ ಬೆಳವಣೆಗೆಗಳಿಗೆ ಸಾಕಷ್ಟು ಶ್ರಮವಹಿಸಿವೆ. ಇವತ್ತಿಗೂ ಐಐಎಂಗಳಲ್ಲಿ ಮ್ಯಾನೆಜ್‌ಮೆಂಟ್‌ಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಇತರ ವಿಷಯಗಳನ್ನು ಬೋಧಿಸಲಾಗುವುದಿಲ್ಲ. ಇವು ತುಂಬಾ ವಿಶೇಷ ಶಿಕ್ಷಣ ಸಂಸ್ಥೆಗಳು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿರುವ ಸರಕಾರ ಮುಂದೆ ಕೇವಲ ಬಹುಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿ ಈಗ ಏಕಮುಖ ವಿಷಯ ಬೋಧಿಸುವ ಐಐಎಂ ಮಾದರಿಯಲ್ಲಿ ನಮ್ಮ ವಿವಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದಿರುವುದು ಯಾವ ದೃಷ್ಟಿಕೋನದಲ್ಲಿ ಎಂದು ತಿಳಿಯದಾಗಿದೆ.

ಐಐಎಂಗಳ ಮೂಲಭೂತ ಸೌಕರ್ಯಗಳನ್ನು ನಮ್ಮ ವಿವಿಗಳಲ್ಲಿ ನೀಡುತ್ತೇವೆ ಎನ್ನುವುದು ಮಾನ್ಯ ಸಚಿವರ ಇಂಗಿತವಾದರೆ, ಐಐಎಂಗಳ ಹಣಕಾಸಿನ ಮೂಲ ನೇರವಾಗಿ ಕೇಂದ್ರ ಸರಕಾರದ್ದು. ಜೊತೆಗೆ ಐಐಎಂಗಳು ಕೂಡ ತಮ್ಮ ಪದವಿಗಳಿಗೆ ಸಾಕಷ್ಟು ಶುಲ್ಕಗಳನ್ನು ಪಡೆಯುತ್ತವೆ. ನಮ್ಮ ರಾಜ್ಯ ಸರಕಾರಗಳ ಸೀಮಿತ ಹಣಕಾಸಿನ ಮಿತಿಯಲ್ಲಿ ಐಐಎಂ ಮಾದರಿಯ ಮೂಲಸೌಕರ್ಯವನ್ನು ನಮ್ಮ ವಿವಿಗಳಲ್ಲಿ ನೀಡುತ್ತೇವೆ ಎನ್ನುವುದು ಕೇವಲ ಉತ್ಪ್ರೇಕ್ಷೆಯಾಗಿ ಮಾತ್ರ ಕಾಣುತ್ತದೆ. ಐಐಎಂಗಳು ವಿಧಿಸುವ ಶುಲ್ಕಗಳನ್ನು ನಮ್ಮ ರಾಜ್ಯದ ವಿವಿಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳ ಎಷ್ಟು ಕುಟುಂಬಗಳು ಭರಿಸಲು ಸಾಧ್ಯ?

ಕಳೆದ ಹತ್ತು ಹದಿನೈದು ವರ್ಷಗಳಿಂದ ನಮ್ಮ ವಿವಿಗಳಿಗೆ ಯಾವುದೇ ನೇಮಕಾತಿಗಳು ನಡೆದಿಲ್ಲ. ಬಹುತೇಕ ವಿವಿಗಳು ಕೇವಲ ಬೆರಳೆಣಿಕೆಯಷ್ಟು ಖಾಯಂ ಅಧ್ಯಾಪಕರನ್ನು ಒಳಗೊಂಡಿದ್ದು ಬಹುತೇಕ ಅಧ್ಯಾಪಕರು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ವಿಶ್ವವಿದ್ಯಾನಿಲಯದಲ್ಲಿನ ಕಲಿಕೆ ಮತ್ತು ಸಂಶೋಧನೆಗೆ ಸಾಕಷ್ಟು ಘಾಸಿ ಮಾಡಿದೆ. ತಕ್ಷಣ ನಮ್ಮ ವಿವಿಗಳಿಗೆ ಅಧ್ಯಾಪಕರನ್ನು ನೇಮಿಸದಿದ್ದಲ್ಲಿ ಅವುಗಳು ಗುಣಮಟ್ಟದ ಕಲಿಕೆ ಮತ್ತು ಸಂಶೋಧನೆಯಲ್ಲಿ ಮತ್ತಷ್ಟು ಕೆಳಗಿಳಿಯುತ್ತವೆ. ಇವತ್ತು ಇಂತಹ ಗಂಭೀರ ಸಮಸ್ಯೆಗಳನ್ನು ವಿವಿಗಳು ಎದುರಿಸುತ್ತಿರುವಾಗ ಹೊಸ ಉನ್ನತ ಶಿಕ್ಷಣ ಸಂಸ್ಥೆಗಳ ಕಾಯ್ದೆಯನ್ನು ಜಾರಿ ಮಾಡಲು ಹೊರಟಿರುವ ಉದ್ದೇಶವಾದರೂ ಏನು?

ಮುಂದೆ ವಿಶ್ವವಿದ್ಯಾನಿಲಯದ ಉಪ-ಕುಲಪತಿಗಳನ್ನು ಸಿಇಒ(ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಎಂದು ಕರೆಯಲಾಗುವುದು ಎಂದು ಮಾನ್ಯ ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಅದರೆ ಯಾವುದೇ ದೇಶದಲ್ಲಿ ವಿಶ್ವವಿದ್ಯಾನಿಲಯದ ಉಪ-ಕುಲಪತಿಗಳನ್ನು ಸಿಇಒ ಎಂದು ಕರೆದ ಉದಾಹರಣೆಗಳು ಇಲ್ಲ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಾತ್ರ ಅಲ್ಲಿನ ಮುಖ್ಯಸ್ಥರನ್ನು ಸಿಇಒ ಎಂದು ಕರೆಯಲಾಗುತ್ತದೆ. ಇದು ಸರಕಾರದ ಒಲವು ನಿಲುವುಗಳು ಯಾವ ಕಡೆ ಇದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತದೆ. ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್‌ಗಳನ್ನು ಬೋರ್ಡ್ ಆಫ್ ಗವರ್ನರ್ಸ್ ಎಂದು ಬದಲಾಯಿಸಲಾಗುವುದು ಎನ್ನಲಾಗಿದೆ. ಇದು ಕೂಡ ಕಾರ್ಪೊರೇಟ್ ಸಂಸ್ಥೆಗಳ ಮಾದರಿಯನ್ನು ವಿವಿಗಳಲ್ಲಿ ಪರಿಚಯಿಸುವ ಪ್ರಯತ್ನ. ವಿವಿಗಳನ್ನು ಕೇವಲ ಉನ್ನತ ಶಿಕ್ಷಣ ಸಂಸ್ಥೆಗಳೆಂದು ಕರೆಯಲಾಗುವುದು ಎನ್ನಲಾಗಿದೆ. ಇದು ಕೂಡ ಸಾಕಷ್ಟು ಚರ್ಚೆಯಾಗಬೇಕಿದೆ.

ನಮ್ಮ ವಿವಿಗಳಿಗೆ ಇವತ್ತು ಕಾರ್ಪೊರೇಟ್ ಸ್ವರೂಪಗಳನ್ನು ನೀಡುವ ಬದಲಿಗೆ ಅವುಗಳಿಗೆ ಅಗತ್ಯ ಅನುದಾನಗಳನ್ನು ನೀಡುವುದು, ಅವುಗಳ ಸೂಕ್ತ ಬಳಕೆ, ವಿಶ್ವವಿದ್ಯಾನಿಲಯಗಳಿಗೆ ಕಳಂಕರಹಿತ ಉಪ-ಕುಲಪತಿಗಳನ್ನು ನೇಮಕ ಮಾಡುವುದು, ಕಟ್ಟಡಗಳನ್ನು ಕಟ್ಟುವುದನ್ನು ಕಾಯಕ ಮಾಡಿಕೊಂಡಿರುವ ವಿವಿಗಳ ಉಪ-ಕುಲಪತಿಗಳನ್ನು ಮನೆಗೆ ಕಳುಹಿಸಿ ಕಲಿಕಾ ಮಟ್ಟವನ್ನು ಉನ್ನತೀಕರಿಸುವ, ಬೌದ್ಧಿಕ ಚಿಂತನೆಗಳಿಗೆ ಅವಕಾಶ ನೀಡುವ ಹೊಸ ಆವಿಷ್ಕಾರ-ಸಂಶೋಧನೆಗಳಿಗೆ ಉತ್ತೇಜನ ನೀಡುವವರನ್ನು ವಿವಿಗಳಿಗೆ ತರಬೇಕಾಗಿದೆ. ಕಾಲಕಾಲಕ್ಕೆ ಉಪನ್ಯಾಸಕ ಹುದ್ದೆಗಳಿಗೆ ಅರ್ಹರನ್ನು ನೇಮಿಸುವ ವ್ಯವಸ್ಥೆಯಾಗಬೇಕಿದೆ.

ಇದೇ ಮೊದಲ ಬಾರಿಗೆ ಖಾಸಗಿ ವಿಶ್ವವಿದ್ಯಾನಿಲಯಗಳ ಕಾಯ್ದೆಗಳನ್ನು ಸರಕಾರ ಕರ್ನಾಟಕದಲ್ಲಿ ತರಲು ಹೊರಟಿದೆ. ಇದು ಕೂಡ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಮತ್ತು ಖಾಸಗಿಯವರನ್ನು ಉತ್ತೇಜಿಸುವ ಪ್ರಯತ್ನದಂತೆ ಕಾಣುತ್ತಿದೆ. ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರು ಶೇ. 25ರಷ್ಟು ಮಾತ್ರ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿಯವರಿಗೆ ಉತ್ತೇಜಿಸಿದಷ್ಟು ಉನ್ನತ ಶಿಕ್ಷಣ ಪಡೆಯುವವರು ಬ್ಯಾಂಕ್ ಮತ್ತಿತರ ಸಾಲದ ಸುಳಿಗೆ ಸಿಲುಕುವರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣದ ಕಾಯ್ದೆಗಳನ್ನು ತಯಾರಿಸಲು ವಿಜ್ಞಾನಿಗಳು ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವವಿರುವವರನ್ನು ಹೆಚ್ಚು ಅವಲಂಬಿಸುತ್ತಿರುವುದು ಕೂಡ ಏಕೆಂದು ತಿಳಿಯದಾಗಿದೆ. ಕರ್ನಾಟಕ ರಾಜ್ಯ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ಕಾಯ್ದೆ-2022 ಸಮಿತಿಯ ಅಧ್ಯಕ್ಷರಾದ ಡಾ. ವಾಸುದೇವ ಅತ್ರೆಯವರು ವಿಜ್ಞಾನಿ. ಜೊತೆಗೆ ಸಮಿತಿಯ ಬಹುತೇಕ ಸದಸ್ಯರು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬಂದವರು. ಯಾವುದೇ ಸದಸ್ಯರು ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಬಂದವರಲ್ಲ ಎನ್ನುವುದನ್ನು ಗಮನಿಸಬೇಕು.

ಒಟ್ಟಾರೆ ಈ ಕರಡು ಕಾಯ್ದೆಗಳಲ್ಲಿ ನಮೂದಿಸಿರುವ ಅನೇಕ ಅಂಶಗಳು ಸಾಕಷ್ಟು ಚರ್ಚೆಗಳಿಗೆ ಮತ್ತು ವಿಮರ್ಶೆಗಳಿಗೆ ಒಳಗಾಗಬೇಕು. ಆದರೆ ಇವುಗಳನ್ನು ಜಾರಿಗೊಳಿಸಲು ತೋರಿಸುತ್ತಿರುವ ಉತ್ಸಾಹವನ್ನು ಈ ಕಾಯ್ದೆಯ ಬಗ್ಗೆ ಸವಿವರವಾದ ಕೂಲಂಕಷ ಚರ್ಚೆ, ವಿಮರ್ಶೆಗೆ ತೋರಿಸದಿರುವುದು ಎಲ್ಲೋ ಈ ಸರಕಾರಗಳು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೊರೇಟ್ ಮಾದರಿಯ ವ್ಯವಸ್ಥೆಗಳನ್ನು ಜಾರಿಗೊಳಿಸಲು ಸಾಕಷ್ಟು ಉತ್ಸುಕವಾಗಿವೆ ಎನ್ನುವ ಅನುಮಾನಗಳು ನಿಜವಾಗ ತೊಡಗಿವೆ.

Writer - ವಸಂತ ರಾಜು ಎನ್. ತಲಕಾಡು

contributor

Editor - ವಸಂತ ರಾಜು ಎನ್. ತಲಕಾಡು

contributor

Similar News