ಗಾಯವನ್ನು ಶಮನಗೊಳಿಸುವ ಮುಲಾಮು ನಚ್ಚತ್ತಿರಂ ನಗರ್‌ಗಿರದು

Update: 2022-10-06 05:19 GMT

2020ರಲ್ಲಿ ಬಿಡುಗಡೆಯಾದ ರೆಗಿನಾ ಕಿಂಗ್ ಅವರ ಚೊಚ್ಚಲ ನಿರ್ದೇಶನದ ‘ಒನ್ ನೈಟ್ ಇನ್ ಮಿಯಾಮಿ’ ಆಫ್ರೋ-ಅಮೆರಿಕನ್ ಕುರಿತಾದ ಬಹು ಚರ್ಚಿತ ವಿಚಾರವನ್ನು ವಿಭಿನ್ನವಾಗಿ ನಿರೂಪಿಸಿದ ಮಹತ್ವದ ಸಿನೆಮಾ. ಇಲ್ಲಿ ಕಪ್ಪುವರ್ಣೀಯರ ಮಾನವ ಹಕ್ಕುಗಳ ಹೋರಾಟಗಾರ ಮಾಲ್ಕಮ್ ಎಕ್ಸ್, ಬಾಕ್ಸಿಂಗ್ ಕ್ರೀಡಾಪಟು ಕಾಸ್ಸಿಯಸ್ ಕ್ಲೇ (ಮುಹಮ್ಮದ್ ಅಲಿ), ಜಾಜ್ ಹಾಡುಗಾರ ಸಾಮ್ ಕುಕ್, ಎನ್‌ಎಫ್‌ಎಲ್ ಆಟಗಾರ ಜಿಮ್ ಬ್ರೌನ್ ಫೆಬ್ರವರಿ 1964ರ ಒಂದು ರಾತ್ರಿ ಮೋಟೆಲ್‌ನ ಕೋಣೆಯೊಂದರಲ್ಲಿ ಭೇಟಿಯಾಗುತ್ತಾರೆ. ಇಡೀ ರಾತ್ರಿ ಚರ್ಚೆ, ಸಂವಾದ, ಜಗಳಗಳಲ್ಲಿ ಕಳೆದು ಹೋಗುತ್ತದೆ. ಆಫ್ರೋ-ಅಮೆರಿಕನ್ ಸಮುದಾಯದ ಸಬಲೀಕರಣ ಮತ್ತು ವಿಮೋಚನೆಯ ಕುರಿತಾಗಿ ಪ್ರಾರಂಭವಾಗುವ ಚರ್ಚೆ ಮುಂದುವರಿಯುತ್ತಾ ಅದರ ಕಾರ್ಯ ವಿಧಾನಗಳು, ಪ್ರಣಾಳಿಕೆ ಮತ್ತು ರೂಪುರೇಷೆಗಳ ಕುರಿತು ಮಾತು ಶುರುವಾದಾಗ ಇದು ಮಾಲ್ಕಮ್ ಮತ್ತು ಕುಕ್ ನಡುವೆ ತಾರಕಕ್ಕೇರಿ ಜಗಳದ ಹಂತಕ್ಕೆ ತಲುಪುತ್ತದೆ. ಆದರೆ ಇಡೀ ಸಿನೆಮಾದ ಜೀವಾಳವೇ ಈ ಹಂತದ ಸಂಭಾಷಣೆಗಳು ಮತ್ತು ಕಲಾವಿದರ ಅಭಿನಯ.

ಪ.ರಂಜಿತ್ ನಿರ್ದೇಶನದ ‘ನಚ್ಚತ್ತಿರಂ ನಗರ್‌ಗಿರದು’ ಸಿನೆಮಾ ನೋಡುವಾಗ ಮತ್ತು ನೋಡಿದ ನಂತರ ‘ಒನ್ ನೈಟ್ ಇನ್ ಮಿಯಾಮಿ’ ಮತ್ತೆ ಮತ್ತೆ ಕಾಡಿತು. ಎರಡೂ ಸಿನೆಮಾಗಳಲ್ಲಿ ದಮನಿತರ ಬದುಕನ್ನು ಕೇಂದ್ರವಾಗಿಟ್ಟುಕೊಂಡ ಚಿತ್ರಕತೆಯನ್ನು ಹೆಣೆಯಲಾಗಿದೆ. ನಚ್ಚತ್ತಿರಂ ಮತ್ತು ಒನ್ ನೈಟ್ ಎರಡರಲ್ಲಿಯೂ ವ್ಯವಸ್ಥೆಯಲ್ಲಿನ ಕ್ರೌರ್ಯವನ್ನು ಬೌದ್ಧಿಕವಾಗಿ ಚರ್ಚಿಸುತ್ತಲೇ ಅದಕ್ಕೆ ಉತ್ತರವಾಗಿ ಮಾನಸಿಕ ಒಳತೋಟಿಯ ಹುಡುಕಾಟ ನಡೆಸುತ್ತವೆ ಮತ್ತು ಕ್ಲೈಮಾಕ್ಸ್ ನಲ್ಲಿ ಭೌತಿಕ ಜಗತ್ತಿನೊಂದಿಗೆ ಮುಖಾಮುಖಿಯಾಗುವ ನಿರ್ಣಾಯಕ ಸಂದರ್ಭ ಬಂದಾಗ ಬೌದ್ಧಿಕತೆಯ ಸ್ಪಷ್ಟತೆ ಮತ್ತು ಮಾನಸಿಕ ದೃಢತೆ ಎರಡೂ ವಾಸ್ತವದ ಕ್ರೌರ್ಯದಲ್ಲಿ ಕುಸಿದುಬಿಡುತ್ತವೆ. ಇದನ್ನು ನಿರೂಪಿಸಲು ನಿರ್ದೇಶಕ ಪ.ರಂಜಿತ್ ಮುಖ್ಯವಾಹಿನಿಯ ಕೇಂದ್ರಕ್ಕೆ ನುಗ್ಗಿ ಛೇದಿಸುವ ತಮ್ಮ ಹಿಂದಿನ ಮಾದರಿಯನ್ನು ಕೈಬಿಟ್ಟು ನೇರ ನಿರೂಪಣೆಯ, ಸಂಭಾಷಣೆ ಆಧರಿತ ಪ್ರಯೋಗಾತ್ಮಕ ಶೈಲಿಯನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಅನೇಕರಿಗೆ ನಚ್ಚತ್ತಿರಂ ಸಿನೆಮಾ ಮುಕ್ಕಾಲು ಭಾಗ ವಾಚ್ಯವಾಗಿದೆ ಎಂದೆನಿಸಿದರೆ ಅಚ್ಚರಿಯೇನಲ್ಲ. ಇಲ್ಲಿ ನಿರ್ದೇಶಕ ದೃಶ್ಯಗಳನ್ನು ಕಟ್ಟುವ, ಬೆಳೆಸುವ ಕಡೆಗೆ ಆಸಕ್ತಿ ವಹಿಸಿಲ್ಲ. ತಾನು ಹೇಳಬೇಕೆಂದಿರುವ ವಿಚಾರಕ್ಕೆ ಪೂರಕವಾಗಿ ದೃಶ್ಯಗಳನ್ನು ರೂಪಿಸಿದ್ದಾರೆ. ನಚ್ಚತ್ತಿರಂ.. ಸಿನೆಮಾದಲ್ಲಿ ರಂಜಿತ್ ಪ್ರೀತಿ ಎಂದರೆ ಏನು? ಎನ್ನುವ ಪ್ರಶ್ನೆಯ ಮೂಲಕ ಅದರ ಎಲ್ಲಾ ಮಗ್ಗಲುಗಳನ್ನು ಚರ್ಚಿಸುತ್ತಾರೆ. ಪ್ರೀತಿ, ಪ್ರೇಮ, ಪ್ರಣಯದ ವಸ್ತು ಕುರಿತಾಗಿ ಇದುವರೆಗಿನ ಎಲ್ಲಾ ಸಿದ್ಧ ಮಾದರಿಯ ನಿರೂಪಣೆಯನ್ನು ಒಂದೇ ಸಾರಿಗೆ ಗುಡಿಸಿ ಹಾಕುವ ನಿರ್ದೇಶಕ ಇಲ್ಲಿ ಭಾವನೆಗಳನ್ನು ಆದರ್ಶ, ಸಾಮಾಜಿಕತೆ ಮತ್ತು ರಾಜಕಾರಣದೊಂದಿಗೆ ಬೆಸೆಯಲು ಪ್ರಯತ್ನಿಸುತ್ತಾರೆ. ಈ ಹೆಣೆಯುವ ಪ್ರಕ್ರಿಯೆಯಲ್ಲಿ ಜಿಗಿತವಿದೆ ಮತ್ತು ನಿರ್ದೇಶಕರು ಯಾವುದೇ ತರ್ಕ, ಜಿಜ್ಞಾಸೆಗಳಿಗೆ ಕೈ ಹಾಕದೆ ತನ್ನ ಧೋರಣೆಯನ್ನು ನೇರವಾಗಿ ಮಂಡಿಸುತ್ತಾರೆ. ನಚ್ಚತ್ತಿರಂ.. ಸಿನೆಮಾದ ರಾಜಕೀಯ ಹೇಳಿಕೆಯ ಮುಂದೆ ಮರೋಚರಿತ್ರ, ಗೀತಾಂಜಲಿ ಮಾದರಿಯ ಜನಪ್ರಿಯ ಸಿನೆಮಾಗಳು ಅಪ್ರಸಕ್ತಗೊಳ್ಳುತ್ತವೆ. ಆದರೆ ಪ.ರಂಜಿತ್‌ರ ಈ ಪ್ರಯೋಗಾತ್ಮಕ ಶೈಲಿಯು ಮುಖ್ಯವಾಹಿನಿಯ ಅಂಗಳದಲ್ಲಿ ಸ್ವೀಕಾರವಾಗುವುದು ಸಹ ಕಷ್ಟದ ಬಾಬತ್ತು. ಪ್ರೇಕ್ಷಕ ಯಾಕೆ ಸ್ಪಂದಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಪ.ರಂಜಿತ್‌ಗೆ ಉತ್ತರ ಗೊತ್ತಿದೆ. ಪ್ರತಿಯೊಂದು ವಸ್ತುವೂ ಪ್ರತ್ಯೇಕ ಸಿನೆಮಾದ ವಿಷಯವಾಗಬಲ್ಲ ಜಾತಿ, ಧರ್ಮ, ಲಿಂಗತ್ವ, ಟ್ರಾನ್ಸ್‌ಜೆಂಡರ್, ಭಾಷೆ ಮುಂತಾದವುಗಳನ್ನು ಒಂದೇ ಚೌಕಟ್ಟಿನಲ್ಲಿ ಬಂಧಿಸಿ, ವ್ಯಕ್ತಿತ್ವಗಳ ಸಂಘರ್ಷ ಮತ್ತು ಸಂಭಾಷಣೆಗಳ ಮೂಲಕ ಚಿತ್ರಕತೆಯನ್ನು ಮಂಡಿಸಿದಾಗ ಪ್ರೇಕ್ಷಕನಿಗೆ ತಲುಪುವ ಸಾಧ್ಯತೆಗಳು ಒಂದು ಬಗೆಯ ಜೂಜಿನ ತರ. ಗೊಂದಲಗಳಿಲ್ಲದ ಇಲ್ಲಿನ ಕಥನ ಕ್ರಮವು ಸಮಸ್ಯೆಯೂ ಹೌದು. ಇದುವರೆಗೂ ಜನಪ್ರಿಯ ಸಿನೆಮಾದ ಮೂಲಕವೇ ಇಲ್ಲಿನ ಜಾತಿ ಶ್ರೇಣೀಕರಣದ ವಿಕೃತಿಯನ್ನು ನಿರೂಪಿಸಿದ ಪ.ರಂಜಿತ್ ನಚ್ಚತ್ತಿರಂ..ನಲ್ಲಿ ಕತೆ ಹೇಳುವ ಗೋಜಿಗೆ ಹೋಗದೆ ಪ್ರೀತಿ, ಲಿಂಗ, ಮತ್ತು ಜಾತಿ/ಧರ್ಮ ರಾಜಕಾರಣದ ಒಳಸುಳಿಗಳನ್ನು ನಿರೂಪಿಸಲು ನಾಟಕೀಯತೆಯನ್ನು ನೆಚ್ಚಿಕೊಂಡಿದ್ದಾರೆ ಮತ್ತು ಸಹಜವಾಗಿವೇ ರಂಗಭೂಮಿ ಈ ಸಿನೆಮಾದ ಆಡೊಂಬಲವಾಗಿದೆ. ಒಂದು ದೃಶ್ಯದಲ್ಲಿ ಸಿನೆಮಾ, ಮತ್ತೊಂದರಲ್ಲಿ ನಾಟಕವಾಗುವ ತಂತ್ರಗಾರಿಕೆಯ ಪ್ರಯೋಗವಿದೆ.

ಈ ಸಿನೆಮಾದ ಪ್ರೊಟಗಾನಿಸ್ಟ್ ರೆನಾ ಆಧುನಿಕ ಪ್ರಜ್ಞೆಯ ಕಲಾವಿದೆ. ಮಾರ್ಕ್ವೇಜ್‌ನ ‘ಒನ್ ಹಂಡ್ರೆಡ್ ಇಯರ್ಸ್‌ ಆಫ್ ಸಾಲಿಟ್ಯೂಡ್’ನ ಪಾತ್ರ ರೆನೆಟಾ ಇಲ್ಲಿ ‘ಆನು ಒಲಿದಂತೆ ಹಾಡುವ’ ರೆನಾ. ಆಕೆಗೆ ತನ್ನ ವಿಚಾರಗಳಲ್ಲಿ, ಭಾವನೆಗಳಲ್ಲಿ ಒಂದಿನಿತೂ ಗೊಂದಲವಿಲ್ಲ. ಆಕೆಯ ಸುಡು ಸ್ಪಷ್ಟತೆಯ ನಿಗಿ ನಿಗಿ ಕೆಂಡದ ಮುಂದೆ ಪ್ರತಿಯೊಬ್ಬರ ತಗಲೂಫಿತನ ಬಯಲಾಗುತ್ತಾ ಹೋಗುತ್ತದೆ. ಇದು ಸಿನೆಮಾದ ಒಂದು ಧಾರೆ. ಇದರಾಚೆಗೆ ಇಲ್ಲಿ ಇನ್ನೂ ಅನೇಕ ಧಾರೆಗಳಿವೆ. ಆರಂಭದ ದೃಶ್ಯದಲ್ಲಿ ರಂಜಿತ್ ಆಸ್ಟ್ರಿಯಾದ ಚಿತ್ರಕಾರ ಗುಸ್ತೋವ್ ಕ್ಲಿಮ್‌ನ ಪೇಂಟಿಂಗ್ ‘ದ ಕಿಸ್’ನ್ನು ಹಿನ್ನೆಲೆಯಲ್ಲಿ ಉಲ್ಲೇಖಿಸುತ್ತಾ ಪ್ರೇಮದಲ್ಲಿನ ಭರವಸೆಯನ್ನು ಸಾಂಕೇತಿವಾಗಿ ತೋರಿಸುತ್ತಾರೆ. ಗುಸ್ತೋವ್‌ನ ಪೇಂಟಿಂಗ್‌ನಂತೆಯೇ ಪ್ರೀತಿಯೂ ಜೀವಂತಿಕೆಯ ಅಭಿವ್ಯಕ್ತಿ ಎನ್ನುವ ನಿರ್ದೇಶಕರ ಹೇಳಿಕೆ ಅಲ್ಲಿಗೆ ನಿಲ್ಲುವುದಿಲ್ಲ ಮುಂದುವರಿದು ಪ್ರೀತಿ ಎಂದರೆ ಏನು? ಅದು ಭಾವುಕತೆಯೇ? ಕಳಚಿಕೊಳ್ಳದ ಸಂಬಂಧವೇ? ಲೈಂಗಿಕತೆಯೇ? ಎನ್ನುವ ಪ್ರಶ್ನೆಗಳನ್ನು ಕೇಳುತ್ತಲೇ ತನ್ನ ಪ್ರೊಟಗಾನಿಸ್ಟ್ ರೆನಾ ಮೂಲಕ ಪ್ರೀತಿ ಎಂಬುದು ರಾಜ ಕಾರಣ ಎಂದು ಹೇಳಿಸುತ್ತಾರೆ. ಸಿನೆಮಾದ ಎರಡೂವರೆ ತಾಸಿನ ಅವಧಿಯುದ್ದಕ್ಕೂ ಇದು ಪುನರಾವರ್ತಿತವಾಗುತ್ತಾ ಹೋಗುತ್ತದೆ. ಆರಂಭದ ದೃಶ್ಯದಿಂದಲೇ ತನ್ನ ಉದ್ದೇಶಿತ ಹೇಳಿಕೆಯನ್ನು ರೆನಾ ಪಾತ್ರದ ಮೂಲಕ ದಾಖಲಿಸುತ್ತಾರೆ. ಇಳೆಯರಾಜ ಸಂಗೀತ ನೀಡಿರುವ ‘ಜಾನಿ’ ಸಿನೆಮಾದ ‘‘ಎನ್ ವಾನಿಲೇ ಒರೆ ವೆನ್ನಿಲಾ.. ನೀರೋಡಿ ಪೊಲವೆ ಎನ್ ಪೆಣ್ಮೈ, ನೀರಾಡಿ ವಾಂದಾತೈ ಎನ್ ಮೆನ್ಮೈ’’ ಸಾಲುಗಳನ್ನು ಹಾಡುವ ಮೂಲಕ ರೆನಾ ಹೇಳುತ್ತಿರುವುದೇನು? ಇದನ್ನು ಕಂಡುಕೊಳ್ಳುವುದು ಸಂಕೀರ್ಣವಲ್ಲ. ಜಾತಿ ಎನ್ನುವ ಭೂತದ ನೆರಳು ತನ್ನ ಜೀವನದ ಉದ್ದಕ್ಕೂ ಕಾಡಿದೆ, ತಾನು ದಿಟ್ಟತನ, ಆತ್ಮವಿಶ್ವಾಸದ ಮೂಲಕ ಆ ನೆರಳಿನಿಂದ ಹೊರಬಂದೆನೆಂದು ಮತ್ತು ಇದು ನನ್ನ ಸಾಮಾಜಿಕ ಅಸ್ಮಿತೆಯೆಂದು ತನ್ನ ಪ್ರೇಮಿ ಇನಿಯನ್‌ಗೆ ಹೇಳುತ್ತಾಳೆ. ದಲಿತ ಮಹಿಳೆಯಾಗಿ ತಾನು ಬದುಕುವ ದಾರಿ ತನಗೆ ಸ್ಪಷ್ಟವಾಗಿದೆ ಎನ್ನುತ್ತಾಳೆ. ಆದರೆ ಅಮೆರಿಕದ ಕಲಾವಿದೆ ನಿನಾ ಸಿಮೋನೆ ತನಗೆ ಅಚ್ಚುಮೆಚ್ಚು ಎಂದು ವಾದಿಸುವ ‘‘ಇನಿಯನ್‌ಗೆ ಇಳೆಯರಾಜ ಸಹ ಆಕೆಯಷ್ಟೆ ಗ್ರೇಟ್’’ ಎಂದು ಉತ್ತರಿಸುತ್ತಾಳೆ. ಇದು ಕೇವಲ ಒಂದು ಹಾಡು, ಇಳೆಯರಾಜ ಮತ್ತು ಸಿಮೋನೆಗೆ ಸೀಮಿತವಾದ ಜಗಳವಲ್ಲ. ಏಕೆಂದರೆ ‘‘ಎಷ್ಟಿದ್ದರೂ ನಿನ್ನ ಜಾತಿಯವ ತಾನೆ’’ ಎಂದು ಕೀಳಾಗಿ ಹಂಗಿಸುವ ಸಂಕುಚಿತ ವ್ಯಕ್ತಿತ್ವದ ಇನಿಯನ್ ವಿರುದ್ಧ ರೆನಾ ಸಿಡಿದೇಳುತ್ತಾಳೆ. ತಮಿಳು ಹೆಸರಿನ ತಾನು ರೆನಾ ಆಗಿ ಬದಲಾಗಿದ್ದು ಕೇವಲ ಆಧುನಿಕತೆಗೋಸ್ಕರವಲ್ಲ. ಜೊತೆಗೆ ಆಧುನಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ತನ್ನ ದಲಿತ ಅಸ್ಮಿತೆಯನ್ನು ಸ್ಪಷ್ಟಪಡಿಸಿಕೊಳ್ಳುವುದು ತನಗೆ ಜೀವನ್ಮರಣದ ಪ್ರಶ್ನೆ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾಳೆ. ಪ್ರೀತಿ ಎಂಬುದು ರಾಜಕಾರಣವೆಂದು ನಿರೂಪಿಸಲು ಪ.ರಂಜಿತ್ ರಂಗ ಚಳವಳಿ ತಂಡದ ಪರಿಕಲ್ಪನೆ ಬಳಸುತ್ತಾರೆ. ಈ ಗುಂಪಿನಲ್ಲಿ ಟ್ರಾನ್ಸ್ ಜೆಂಡರ್ ಜೋಡಿ, ಗೇ ಜೋಡಿ, ಲೆಸ್ಬಿನ್ ಜೋಡಿ ಹಾಗೂ ವಿಭಿನ್ನ ಜಾತಿ, ವರ್ಗಗಳಿಂದ ಬಂದ ಕಲಾವಿದರು ‘ಪ್ರೀತಿ’ ಕುರಿತು ನಾಟಕ ಮಾಡಲು ಮುಂದಾಗುತ್ತಾರೆ. ಭಿನ್ನವಾಗಿರುವ ವೈವಿಧ್ಯತೆಗಳ ಒಳಗೊಳ್ಳುವಿಕೆಯು ಈ ಸಿನೆಮಾದ ಮುಖ್ಯ ದನಿ. ಈ ಕಲಾವಿದರಲ್ಲಿ ಒಬ್ಬನಾದ ಮೇಲ್ಜಾತಿ ಶ್ರೇಷ್ಠತೆಯನ್ನು ನಂಬುವ ಜಾತಿವಾದಿ ಅರ್ಜುನ್ ಮತ್ತು ಆತನ ಪೂರ್ವಾಗ್ರಹಗಳು ಇಲ್ಲಿ ಪ್ರತಿನಾಯಕನ ರೂಪದಲ್ಲಿ ನಿರೂಪಿತವಾಗಿದೆ. ಅಪಕ್ವತೆ ಮತ್ತು ಜಾತಿ ಮನಸ್ಥಿತಿಯ ಅರ್ಜುನ್ ಪಾತ್ರವನ್ನು ಇನಿಯನ್‌ಗೆ ಪ್ರತಿಯಾಗಿ ಕಟ್ಟಿದರೂ ಕಡೆಗೆ ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಮಾತ್ರ. ಈ ಎರಡು ಪಾತ್ರಗಳು ಕ್ರಮೇಣ ನಿರ್ದೇಶಕರ ಹಂಗಿನಿಂದ ಬಿಡಿಸಿಕೊಳ್ಳುವುದು ಕುತೂಹಲವಾಗಿದೆ. ಆದರೆ ನಿರ್ದೇಶಕರ ಆಶಯಗಳನ್ನು ಮುನ್ನಡೆಸುವ ರೆನಾಳನ್ನು ಒಳಗೊಂಡಂತೆ ಮಿಕ್ಕ ಪಾತ್ರಗಳಿಗೆ ಈ ಅದೃಷ್ಟವಿಲ್ಲ. ಇದು ರಂಜಿತ್ ಉದ್ದೇಶಪೂರ್ವಕವಾಗಿ ನಿರ್ಮಿಸಿದ ಮಿತಿಯಾದಂತಿದೆ. ದಲಿತರು ಪ್ರೇಮದ ಹೆಸರಿನಲ್ಲಿ ಮೇಲ್ಜಾತಿಯವರನ್ನು ಸೆಳೆಯುತ್ತಾರೆ ಎಂದು ಅಂತರ್ಜಾತಿ ವಿವಾಹಗಳನ್ನು ಅಪರಾಧೀಕರಣಗೊಳಿಸುವ ನಡಗ ಕಾದಲ್ (ಮರೆ ಮೋಸದ ಪ್ರೀತಿ) ನುಡಿಕಟ್ಟಿನ ವಂಚನೆ ಮತ್ತು ಕ್ರೌರ್ಯವನ್ನು ನಿರ್ದೇಶಕರು ಮರ್ಯಾದೆ ಹತ್ಯೆ ದೃಶ್ಯಗಳ ರಂಗಭೂಮಿ ಪ್ರದರ್ಶನದ ಮೂಲಕ ಬಹಿರಂಗಗೊಳಿಸುತ್ತಾರೆ. ‘ರಂಗ ಚಳವಳಿಯ ತಂಡ’ದ ಕೆಲ ಕಲಾವಿದರ ‘ಪ್ರೀತಿಯು ಶುದ್ದ ಮತ್ತು ಸಾರ್ವತ್ರಿಕ’ ಎನ್ನುವ ಅಭಿಪ್ರಾಯವನ್ನು ಮರ್ಯಾದೆಗೇಡು ಹತ್ಯೆಯ ಕಥನ ಮೂಲಕ ತಿರಸ್ಕರಿಸುವ ರಂಜಿತ್ ಜಾತಿ ಎಂಬುದು ನಿಶ್ವಲಗೊಂಡ ಜಡಸ್ಥಿತಿಯೆಂದು ಮತ್ತೆ ಮತ್ತೆ ಹೇಳುತ್ತಾರೆ. ಪರಿಶುದ್ಧ ಪ್ರೇಮದ ಕುರಿತು ಮಾತನಾಡಿದ ಈ ಮುಂಚಿನ ಸಿನೆಮಾಗಳು ನಚ್ಚತ್ತಿರಂ.. ಕೇಳುವ ‘‘ಜಾತಿ ಕೊಚ್ಚೆಯಲ್ಲಿ ನಿಮ್ಮ ಪ್ರೀತಿ ಹೇಗೆ ಪರಿಶುದ್ಧ’’ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಪೇಲವವಾಗಿ ಕಾಣುತ್ತವೆ. ನಚ್ಚತ್ತಿರಂನಲ್ಲಿ ಆ ಸಾಂಪ್ರದಾಯಿಕ ಸಿನೆಮಾಗಳಲ್ಲಿನ ದೃಶ್ಯ ಸೌಂದರ್ಯವಿಲ್ಲ, ಕತೆಯನ್ನು ಬೆಳೆಸುತ್ತಾ ಹೋಗುವ ಸಿನೆಮಾಟಿಕ್ ಕಲಾವಂತಿಕೆಯಿಲ್ಲ. ಬದಲಿಗೆ ಪ್ರೀತಿ ಎನ್ನುವ ರಾಜಕೀಯದ ಮೂಲಕ ಜಾತಿ ವಿರೋಧಿ ಚಳವಳಿಯನ್ನು ಹೀಗೂ ಕಟ್ಟಬಹುದೆನ್ನುವ ಬಂಡಾಯದ ಚಲನೆಯಿದೆ. ಪ್ರೀತಿ ಎನ್ನುವ ನುಣುಪು ಪದರಿನ ಒಳಗೆ ಹುದುಗಿರುವ ಜಾತಿ, ಲಿಂಗತ್ವ ಅಸಮಾನತೆಯ ಅಸಂಗತೆ ಮತ್ತು ಕತ್ತಲನ್ನು ಪ್ರೇಕ್ಷಕರಿಗೆ ತೋರಿಸುವ ಈ ನಿರೂಪಣೆ ಸಂಪೂರ್ಣವಾಗಿ ಪ್ರಯೋಗಾತ್ಮಕವಾಗಿದೆ. ಜೊತೆಗೆ ಬುದ್ಧನ ಕಾರುಣ್ಯವನ್ನೂ ಮೈಗೂಡಿಸಿಕೊಂಡಿದೆ. ಪುರುಷಾಧಿಪತ್ಯ ಮನಸ್ಥಿತಿಯ ಅರ್ಜುನ್‌ನನ್ನು ತಂಡದಿಂದ ಹೊರ ಹಾಕದೆ ಉಳಿಸಿಕೊಂಡು ಆತನಿಗೆ ಪರಿವರ್ತನೆಗೊಳ್ಳುವ ಅವಕಾಶ ಕೊಡುವ ಈ ಕಥನಕ್ಕೆ ಬುದ್ಧ ದಮ್ಮದ ಸ್ಫೂರ್ತಿಯಿದೆ. ಕುಪಿತ ಅಭಿವ್ಯಕ್ತಿಗಿಂತಲೂ ಶಾಂತಿಯುತ ಪರಿವರ್ತನೆ ಮುಖ್ಯವಾಗಿದೆ. ಹೊಡೆದಾಟಕ್ಕಿಂತಲೂ ಸಂವಾದಗಳು ದಾರಿಯನ್ನು ನಿರ್ಮಿಸಬಲ್ಲವು ಎಂಬ ನಂಬಿಕೆಯಿದೆ. ಸಂಗೀತ ನಿರ್ದೇಶಕ ತೆನ್ಮಾ ಸಂಯೋಜಿಸಿರುವ ಕಾದಲಳ್ ತೊಡುವುಳಿ ತೊಡುವುಳಿ, ರಂಗರಾತಿನಮ್, ಅರಿವು, ಶರಣ್ಯ ಹಾಡಿರುವ ಪರುವಮೆ ಹಾಡುಗಳು ಸಿನೆಮಾದ ಕೆಮಿಸ್ಟ್ರಿಗೆ ಅದ್ಭುತವಾಗಿ ಬೆರೆತಿವೆ. ‘ಒನ್ ನೈಟ್ ಇನ್ ಮಿಯಾಮಿ’ ಸಿನೆಮಾದಂತೆಯೇ ಸಂಭಾಷಣೆ ಮತ್ತು ಅಭಿನಯ ‘ನಚ್ಚತ್ತಿರಂ ನಗರಗಿರದು’ ಸಿನೆಮಾದ ಆತ್ಮ, ಬೆನ್ನೆಲುಬು. ಹರಿತವಾದ ಸಂಬಾಷಣೆಗಳು ಸಿನೆಮಾವನ್ನು ಹಳಿ ತಪ್ಪದಂತೆ ಕಾಪಾಡಿವೆ. ದುಶಾರ ವಿಜಯನ್, ಕಲೈಯರಸನ್, ಕಾಳಿದಾಸ್ ಜಯರಾಂ ಒಳಗೊಡಂತೆ ಪ್ರತಿಯೊಬ್ಬರೂ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಆದರೆ ಸಂಕಲನ ಈ ಸಿನೆಮಾದ ಮಿತಿಯಾಗಿದೆ. ಸಿನೆಮಾದ ಅಂತ್ಯದಲ್ಲಿ ಬರುವ ಬಜರಂಗದಳದ ಮತಾಂಧ ಪಾತ್ರದ ಪ್ರವೇಶ ನಾಟಕೀಯವಾಗಿದೆ. ಅಂತ್ಯವನ್ನು ಅಂತಿಮಗೊಳಿಸಲು ಪ್ರತ್ಯಕ್ಷವಾದಂತಿದೆ. ಆದರೆ ಅಂತ್ಯವೂ ಸಹ ಗಾಯವನ್ನು ಶಮನಗೊಳಿಸುವ ಮುಲಾಮಿನಂತಿದೆ. ಸಿನೆಮಾದ ಕಡೆಗೆ ಇನಿಯನ್ ಪ್ರಾಯಶ್ಚಿತ್ತದ ದನಿಯಲ್ಲಿ ‘‘ಇಳೆಯರಾಜ ಸಂಗೀತದಲ್ಲಿ ಕಸುವು ಇದೆ, ನಾನು ಒಪ್ಪಿಕೊಂಡೆ’’ ಎನ್ನುತ್ತಾನೆ. ಇದಕ್ಕೆ ರೆನಾ ‘‘ನೀನು ಒಪ್ಪಿಕೊಳ್ಳಲೇ ಬೇಕು’’ ಎಂದು ಉತ್ತರಿಸುತ್ತಾಳೆ. ಹಾಗೆಯೇ ‘ನಚ್ಚತ್ತಿರಂ ನಗರಗಿರದು’ ರೀತಿಯ ಪ್ರಯೋಗಾತ್ಮಕ ಸಿನೆಮಾಗೆ ಮೆಚ್ಚುಗೆಯ, ನಿರಾಸೆಯ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ ಪ.ರಂಜಿತ್ ಸಿನೆಮಾ ಮಾಧ್ಯಮದ ಮೂಲಕ ಜಾತಿ ವಿರೋಧಿ ಚಳವಳಿಯ ಸೌಂದರ್ಯ ಮೀಮಾಂಸೆಯನ್ನು ಪ್ರಸ್ತುಪಡಿಸುತ್ತಿರುವ ಮಹತ್ವದ ನಿರ್ದೇಶಕ ಎಂಬುದನ್ನು ಒಪ್ಪಿಕೊಳ್ಳಲೇಬೇಕು

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News