ಚೀನಾ: ಕ್ಸಿ ಜಿಂಪಿಂಗ್ 3ನೇ ಅವಧಿಯ ಅಧ್ಯಕ್ಷತೆಗೆ ಪಕ್ಷದ ಅನುಮೋದನೆ

Update: 2022-10-22 18:17 GMT
ಕ್ಸಿ ಜಿನ್‌ಪಿಂಗ್,

ಬೀಜಿಂಗ್, ಅ.22: ದೇಶದ ನಾಯಕತ್ವದಲ್ಲಿ ಕ್ಸಿಜಿಂಪಿಂಗ್ ಅವರ ಪ್ರಮುಖ ಸ್ಥಾನವನ್ನು ದಾಖಲೆಯ ಮೂರನೇ ಅವಧಿಗೆ ವಿಸ್ತರಿಸುವ ಪ್ರಸ್ತಾವನೆಗೆ ಚೀನಾ ಕಮ್ಯುನಿಸ್ಟ್ ಪಕ್ಷ ಶನಿವಾರ ಅನುಮೋದನೆ ನೀಡಿದೆ.

ಬೀಜಿಂಗ್‌ನಲ್ಲಿ ಶನಿವಾರ ಮುಕ್ತಾಯಗೊಂಡ ಚೀನಾ ಕಮ್ಯುನಿಸ್ಟ್ ಪಕ್ಷದ ಅಧಿವೇಶನದಲ್ಲಿ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆಯನ್ನೂ ಪಕ್ಷದ 2,300 ಪ್ರತಿಧಿಗಳು ಅನುಮೋದಿಸಿದ್ದು ಇದರೊಂದಿಗೆ ಪ್ರೀಮಿಯರ್ ಲಿ ಕೆಖಿಯಾಂಗ್ ಸಹಿತ ಹಲವು ಉನ್ನತ ಪದಾಧಿಕಾರಿಗಳನ್ನು ಬದಲಾಯಿಸಿ ಹೊಸ ಮುಖಗಳನ್ನು ಸೇರ್ಪಡೆಗೊಳಿಸಲು ಕ್ಸಿಜಿಂಪಿಂಗ್‌ಗೆ ಅಧಿಕಾರ ಲಭಿಸಿದೆ. ನಿರೀಕ್ಷಿಸಿದಂತೆಯೇ ಮುಂದಿನ 5 ವರ್ಷಾವಧಿಗೆ ಕ್ಸಿಜಿಂಪಿಂಗ್ ಆಡಳಿತ ಮುಂದುವರಿಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ಪಕ್ಷದ ಚಾರ್ಟರ್(ಸನ್ನದು)ನಲ್ಲಿ ಬದಲಾವಣೆಯನ್ನು ಪ್ರತಿನಿಧಿಗಳು ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯದ ಪ್ರಕಾರ ‘ಪಕ್ಷದ ಕೇಂದ್ರ ಸಮಿತಿಯಲ್ಲಿ ಮತ್ತು ಒಟ್ಟಾರೆಯಾಗಿ ಪಕ್ಷದಲ್ಲಿ ಕಾಮ್ರೆಡ್ ಕ್ಸಿ ಜಿಂಪಿಂಗ್ ಅವರ ಪ್ರಮುಖ ಸ್ಥಾನವನ್ನು ಎತ್ತಿಹಿಡಿಯಲು ಪಕ್ಷದ ಎಲ್ಲಾ ಸದಸ್ಯರನ್ನು ನಿರ್ಬಂಧಿಸುವ ಕರೆಯನ್ನು ಅನುಮೋದಿಸಲಾಗಿದೆ’ ಎಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ರವಿವಾರ ನಡೆಯುವ ನೂತನ ಕೇಂದ್ರ ಸಮಿತಿಯ ಪ್ರಥಮ ಸಭೆಯ ಬಳಿಕ ಕ್ಸಿಜಿಂಪಿಂಗ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವುದು ಖಚಿತವಾಗಿದೆ. ಇದು ಚೀನಾದ ಅಧ್ಯಕ್ಷರಾಗಿ 3ನೇ ಅವಧಿಗೆ ಮುಂದುವರಿಯಲು ಜಿಂಪಿಂಗ್‌ಗೆ ಅವಕಾಶ ಮಾಡಿಕೊಡುತ್ತದೆ. ಅಧಿವೇಶನದ ಮುಕ್ತಾಯ ಸಮಾರಂಭಕ್ಕೂ ಮುನ್ನ ಪಕ್ಷದ ಸುಮಾರು 200 ಹಿರಿಯ ಸದಸ್ಯರನ್ನು ಒಳಗೊಂಡ ನೂತನ ಕೇಂದ್ರ ಸಮಿತಿಯನ್ನು ರಚಿಸಲಾಗಿದೆ. 7 ಸದಸ್ಯರ ಉನ್ನತ ಸ್ಥಾಯಿ ಸಮಿತಿಯನ್ನು ಪುನರ್‌ರಚಿಸಲಾಗಿದ್ದು 4 ಹಾಲಿ ಸದಸ್ಯರನ್ನು ಕೈಬಿಡಲಾಗಿದೆ.

ಮಾವೋ ನಂತರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕನಾಗಿ ಕ್ಸಿ ಸ್ಥಾನವನ್ನು ಅಧಿವೇಶನ ಪರಿಣಾಮಕಾರಿಯಾಗಿ ಭದ್ರಪಡಿಸಿದೆ. ಕ್ಸಿ ಅವರ ಅಧಿಕಾರವು ಸರ್ವಾಧಿಕಾರಿಯಂತೆಯೇ ಇರುತ್ತದೆ ಮತ್ತು ಯಾವುದೇ ತಿದ್ದುಪಡಿಯ ಬಗ್ಗೆ ಅವರಿಗೆ ಸಲಹೆ ನೀಡಲು ಯಾರಿಗೂ ಅವಕಾಶ ಇರುವುದಿಲ್ಲ ಎಂದು ಲಂಡನ್ ವಿವಿಯ ಎಸ್‌ಒಎಎಸ್ ಚೀನಾ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಸ್ಟೀವ್ ತ್ಸಾಂಗ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಅಧ್ಯಕ್ಷರನ್ನು ಸಭೆಯಿಂದ ಹೊರಕಳುಹಿಸಿದ ಸಿಬಂದಿ:

ಶನಿವಾರ ನಡೆದ ಚೀನಾ ಕಮ್ಯುನಿಸ್ಟ್ ಪಕ್ಷದ ಅಧಿವೇಶನದ ಮುಕ್ತಾಯ ಕಾರ್ಯಕ್ರಮ ಅನಿರೀಕ್ಷಿತ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಮಾಜಿ ಅಧ್ಯಕ್ಷ ಹು ಜಿನಾಟೊರನ್ನು ಸಭೆಯಿಂದ ಹೊರಕಳುಹಿಸಿದ್ದು ಈ ಬಗ್ಗೆ ಯಾವುದೇ ವಿವರಣೆ ನೀಡಲಾಗಿಲ್ಲ. ಸಭೆಯ ಮುಂದಿನ ಸಾಲಿನಲ್ಲಿ ಹಾಲಿ ಅಧ್ಯಕ್ಷ ಜಿಂಪಿಂಗ್ ಪಕ್ಕ ಕುಳಿತಿದ್ದ 79 ವರ್ಷದ ಜಿನಾಟೊ ಬಳಿ ಬಂದ ಭದ್ರತಾ ಸಿಬಂದಿ, ಅವರನ್ನು ಕೈಹಿಡಿದು ಎಬ್ಬಿಸಲು ಮುಂದಾದಾಗ ಜಿನಾಟೊ ಕೈ ಕೊಡವಿಕೊಳ್ಳುತ್ತಾರೆ. ಆಗ ಸಿಬಂದಿ ಕಂಕುಳಿನಡಿ ಕೈಹಾಕಿ ಜಿನಾಟೊರನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಆತನಿಗೆ ಏನೋ ಹೇಳಿದ ಜಿನಾಟೊ, ಪಕ್ಕದಲ್ಲಿದ್ದ ಜಿಂಪಿಂಗ್ ಮತ್ತು ಪ್ರೀಮಿಯರ್ ಲಿ ಕೆಖಿಯಾಂಗ್ ಜತೆ ಕೆಲಕ್ಷಣ ಮಾತನಾಡಿದ ಬಳಿಕ ಆಸನದಿಂದ ಮೇಲಕ್ಕೆದ್ದು, ತಮ್ಮ ಎದುರಿಗೆ ಡೆಸ್ಕ್‌ನಲ್ಲಿದ್ದ ಪೇಪರ್‌ಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಅವಕಾಶ ನೀಡದ ಸಿಬಂದಿ, ಜಿನಾಟೊರನ್ನು ಸಭೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚೀನಾ: ಸಂವಿಧಾನದಲ್ಲಿ ತೈವಾನ್ ಸ್ವಾತಂತ್ರಕ್ಕೆ ವಿರೋಧದ ಸೇರ್ಪಡೆ

ಚೀನಾ ಕಮ್ಯುನಿಸ್ಟ್ ಪಕ್ಷದ ಸಂವಿಧಾನದಲ್ಲಿ ತೈವಾನ್ ಸ್ವಾತಂತ್ರ್ಯಕ್ಕೆ ವಿರೋಧವನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಶನಿವಾರ ಮುಕ್ತಾಯಗೊಂಡ ಪಕ್ಷದ ಅಧಿವೇಶನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತೈವಾನ್ ಸ್ವಾತಂತ್ರ್ಯವನ್ನು ಬಯಸುವ ಪ್ರತ್ಯೇಕತಾವಾದಿಗಳನ್ನು ದೃಢವಾಗಿ ವಿರೋಧಿಸುವುದು ಮತ್ತು ತಡೆಯುವುದನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ಸಂವಿಧಾನದಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News