ಸುದೀರ್ಘ ಆರ್ಥಿಕ ಹಿಂಜರಿತದ ಅಪಾಯದಲ್ಲಿ ಬ್ರಿಟನ್: ವರದಿ

Update: 2022-11-04 18:21 GMT

ಲಂಡನ್, ನ.4: ಬ್ರಿಟನ್‌ನ ಅರ್ಥವ್ಯವಸ್ಥೆ ಅತ್ಯಂತ ಸುದೀರ್ಘ ಆರ್ಥಿಕ ಹಿಂಜರಿತದ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಸೆಂಟ್ರಲ್ ಬ್ಯಾಂಕ್ ಎಚ್ಚರಿಕೆ ನೀಡಿರುವುದಾಗಿ ಬಿಬಿಸಿ ವರದಿ ಮಾಡಿದೆ. ಆರ್ಥಿಕತೆಯು ಬೆಳೆಯುವುದನ್ನು ನಿಲ್ಲಿಸಿದಾಗ ಮತ್ತು ಕುಗ್ಗಲು ಪ್ರಾರಂಭಿಸುವುದನ್ನು ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ. ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಎಂದು ಕರೆಯಲ್ಪಡುವ, ಒಂದು ದೇಶದಲ್ಲಿ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಮೌಲ್ಯವು 2 ಸತತ ತ್ರೈಮಾಸಿಕ ಅವಧಿ ಅಥವಾ ಅರ್ಧ ವರ್ಷದ ಅವಧಿಯಲ್ಲಿ ಕುಸಿಯುವುದು ಆರ್ಥಿಕ ಹಿಂಜರಿತದ ಪ್ರಾರಂಭವಾಗಿದೆ.

ಹಣದುಬ್ಬರ ನಿಯಂತ್ರಣದ ಉದ್ದೇಶದಿಂದ ಗುರುವಾರ ಬ್ಯಾಂಕ್ ಆಫ್ ಇಂಗ್ಲೆಂಡ್ ತನ್ನ ಮೂಲ ಬಡ್ಡಿದರವನ್ನು 1989ರ ಬಳಿಕದ ಅತೀ ಹೆಚ್ಚಿನ ಪ್ರಮಾಣಕ್ಕೆ (2.25%ದಿಂದ 3 %ಕ್ಕೆ) ಹೆಚ್ಚಳ ಮಾಡಿದೆ. ಬ್ರಿಟನ್‌ನ ಅರ್ಥವ್ಯವಸ್ಥೆ ಮುಂದಿನ 2 ವರ್ಷ ಬೆಳವಣಿಗೆ ಹೊಂದದೆ ಇರಬಹುದು. ಈ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ 3.5%ದಿಂದ 6.5%ಕ್ಕೆ ಏರಿಕೆಯಾಗಬಹುದು. ಹಣದುಬ್ಬರದ ಪ್ರಮಾಣ ಕಡಿಮೆಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ಎಂದು ಬ್ಯಾಂಕ್‌ನ ಗವರ್ನರ್ ಆ್ಯಂಡ್ರೂ ಬೈಲಿ ಹೇಳಿದ್ದಾರೆ.ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಸರಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಬ್ರಿಟನ್‌ನ ವಿತ್ತಸಚಿವ ಜೆರೆಮಿ ಹಂಟ್ ಪ್ರತಿಕ್ರಿಯಿಸಿದ್ದಾರೆ.

Similar News