ಹಿಂಡೆನ್‍ಬರ್ಗ್ ವರದಿಯಿಂದ ಅಮೆರಿಕದ ಉದ್ಯಮಿಗೆ ಭಾರೀ ನಷ್ಟ
Update: 2023-03-24 17:21 GMT
ವಾಷಿಂಗ್ಟನ್, ಮಾ.24: ಹಿಂಡನ್‍ಬರ್ಗ್ ರಿಸರ್ಚ್‍ನ ಇತ್ತೀಚಿನ ವರದಿಯಿಂದ ಅಮೆರಿಕದ ಖ್ಯಾತ ಉದ್ಯಮಿ ಜಾಕ್ ಡಾರ್ಸೆ 526 ದಶಲಕ್ಷ ಡಾಲರ್ ನಷ್ಟ ಅನುಭವಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಡಿಜಿಟಲ್ ಸೇವೆ ಮತ್ತು ಹಣಕಾಸು ಪಾವತಿ ಕಂಪೆನಿಯಾಗಿರುವ ಬ್ಲಾಕ್ ಇನ್‍ಕಾರ್ಪೊರೇಶನ್ ಎಂಬ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ವ್ಯಾಪಕ ವಂಚನೆ ನಡೆಯುತ್ತಿರುವ ವರದಿಯನ್ನು ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಜಾಕ್ ಡಾರ್ಸೆ ನಿರ್ಲಕ್ಷಿಸಿದ್ದಾರೆ ಎಂದು ಹಿಂಡೆನ್‍ಬರ್ಗ್ ವರದಿ ಮಾಡಿತ್ತು. ಈ ವರದಿ ಪ್ರಕಟವಾದ ಬೆನ್ನಿಗೇ ಸಂಸ್ಥೆಯ ಶೇರುಗಳ ಮೌಲ್ಯ ಒಂದೇ ದಿನದಲ್ಲಿ 11%ದಷ್ಟು ಇಳಿಕೆಯಾಗಿರುವುದರಿಂದ ಡಾರ್ಸೆಯ ಸುಮಾರು 526 ದಶಲಕ್ಷ ಡಾಲರ್‍ನಷ್ಟು ಸಂಪತ್ತು ಕರಗಿದೆ ಎಂದು `ಬ್ಲೂಮ್‍ಬರ್ಗ್ ಕೋಟ್ಯಾಧಿಪತಿಗಳ ಸೂಚ್ಯಾಂಕ'ದ ವರದಿ ಹೇಳಿದೆ.