ಖೇಲೊ ಇಂಡಿಯಾ ಕಾರ್ಯಕ್ರಮದಲ್ಲಿ ಸಂಘಟಕರ ವಿರುದ್ಧ ಹರಿಹಾಯ್ದ ಗಾಯಕ ಕೈಲಾಶ್ ಖೇರ್; ವಿಡಿಯೋ ವೈರಲ್

Update: 2023-05-26 08:57 GMT

ಲಕ್ನೊ: ಗಾಯಕ ಕೈಲಾಶ್ ಖೇರ್ ಅವರನ್ನು ಇತ್ತೀಚೆಗೆ ನಡೆದ ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023 ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಗಾಯಕ ಕೈಲಾಶ್ ಖೇರ್ ಸಂಘಟಕರ ವಿರುದ್ಧ ಹರಿಹಾಯ್ದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023 ಈವರೆಗಿನ ಅತಿ ದೊಡ್ಡ ಕ್ರೀಡಾಕೂಟ ಎಂಬ ಹಿರಿಮೆಗೆ ಪಾತ್ರವಾಗಿದ್ದು, ಈ ಕ್ರೀಡಾಕೂಟವನ್ನು ಉತ್ತರ ಪ್ರದೇಶದ ಲಕ್ನೊದಲ್ಲಿನ ಬಿಬಿಡಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈ ಐತಿಹಾಸಿಕ ಕ್ರೀಡಾಕೂಟವು ಮೇ 25, ಗುರುವಾರದಂದು ಆಯೋಜನೆಗೊಂಡಿದ್ದು, ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಜೂನ್ 3ರಂದು ಕೊನೆಗೊಳ್ಳಲಿದೆ.

ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023ರ ಕಾರ್ಯಕ್ರಮದಲ್ಲಿ ಗಾಯಕ ಕೈಲಾಶ್ ಖೇರ್ ಅವರು ತಮ್ಮ ಕೆಲವು ಪ್ರಸಿದ್ಧ ಹಾಡುಗಳನ್ನು ಹಾಡಿದ್ದರು. ಆದರೆ, ಕಾರ್ಯಕ್ರಮದ ಸಂಘಟಕರ ವಿರುದ್ಧ ಕೈಲಾಶ್ ಖೇರ್ ಅವರು ಹರಿಹಾಯ್ದಿರುವ ಹಲವಾರು ವಿಡಿಯೊಗಳು ಅಂತರ್ಜಾಲ ತಾಣದಲ್ಲಿ ವೈರಲ್ ಆಗಿವೆ. ಹೀಗೆ ಕೈಲಾಶ್ ಖೇರ್ ಹರಿಹಾಯಲು ಕಾರಣವೇನು ಎಂಬುದು ಇನ್ನೂ ಅಸ್ಪಷ್ಟವಾಗಿದ್ದರೂ, ಅವರು ತನ್ನನ್ನು ಒಂದು ಗಂಟೆಗಿಂತ ಹೆಚ್ಚು ಕಾಲ ಕಾಯಿಸಲಾಗಿದೆ ಎಂದು ದೂರುತ್ತಿರುವುದು ಹಾಗೂ ಸಂಘಟಕರ ವರ್ತನೆಯ ವಿರುದ್ಧ ಟೀಕಿಸುತ್ತಿರುವುದು ಆ ವಿಡಿಯೊಗಳಲ್ಲಿ ಸೆರೆಯಾಗಿದೆ.

ಖೇಲೊ ಇಂಡಿಯೊ ಯೂನಿವರ್ಸಿಟಿ ಗೇಮ್ಸ್ 2023ರಲ್ಲಿ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 4,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಅವರು ಸುಮಾರು 21 ಕ್ರೀಡಾಪ್ರಕಾರಗಳನ್ನು 10 ದಿನಗಳ ಈ ಕ್ರೀಡಾಕೂಟದಲ್ಲಿ ಪ್ರಸ್ತುತಪಡಿಸಲಿದ್ದಾರೆ.

Similar News