ಒಡಿಶಾ ರೈಲು ದುರಂತ: ಸಿಗ್ನಲ್ ವ್ಯವಸ್ಥೆಯಲ್ಲಿನ ಗಂಭೀರ ದೋಷಗಳ ಬಗ್ಗೆ ಫೆಬ್ರವರಿಯಲ್ಲೇ ಎಚ್ಚರಿಸಿದ್ದ ಅಧಿಕಾರಿಗಳು

Update: 2023-06-04 13:46 GMT

ಹೊಸದಿಲ್ಲಿ: ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಸಿಗ್ನಲ್ ವ್ಯವಸ್ಥೆಯ ವೈಫಲ್ಯವು ಕಾರಣವಾಗಿರುವ ಸಾಧ್ಯತೆಯಿದೆ ಎನ್ನುವುದು ಭಾರತೀಯ ರೈಲ್ವೆಯು ನಡೆಸಿದ ಪ್ರಾಥಮಿಕ ಆಂತರಿಕ ತನಿಖೆಯಿಂದ ತಿಳಿದುಬಂದಿದೆ. ಕಳೆದ ಫೆಬ್ರುವರಿಯಲ್ಲಿಯೇ ರೈಲ್ವೆ ಮಂಡಳಿಯಲ್ಲಿನ ಅಧಿಕಾರಿಗಳು ಸಿಗ್ನಲ್ ವ್ಯವಸ್ಥೆಯಲ್ಲಿನ ಗಂಭೀರ ದೋಷಗಳ ಬಗ್ಗೆ ಎಚ್ಚರಿಕೆ ನೀಡಿದ್ದರು ಮತ್ತು ಇಂಟರ್ಲಾಕಿಂಗ್ನ ವೈಫಲ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು ಹಾಗೂ ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ ಕೋರಿದ್ದರು ಎಂದು theprint.in ವರದಿ ಮಾಡಿದೆ.

ನೈಋತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕರು ಫೆ.9ರಂದು ಮೇಲಾಧಿಕಾರಿಗಳಿಗೆ ಬರೆದಿದ್ದ ಪತ್ರವೊಂದನ್ನು theprint.in ಪರಿಶೀಲಿಸಿದೆ. ಫೆ.8ರಂದು ಮೈಸೂರು ವಿಭಾಗದ ಬೀರೂರು-ಚಿಕ್ಕಜಾಜೂರು ಮಾರ್ಗದಲ್ಲಿಯ ಹೊಸದುರ್ಗ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 12649 ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ನ್ನು ಒಳಗೊಂಡ ಗಂಭೀರ ಅಸುರಕ್ಷಿತ ಘಟನೆ ಸಂಭವಿಸಿದ್ದು, ಗೂಡ್ಸ್ರೈಲಿನೊಂದಿಗೆ ಮುಖಾಮುಖಿ ಢಿಕ್ಕಿಯು ಕೊನೆಯ ಘಳಿಗೆಯಲ್ಲಿ ತಪ್ಪಿತ್ತು ಎಂದು ಪತ್ರದಲ್ಲಿ ತಿಳಿಸಿದ್ದ ಅವರು ಎಕ್ಸ್ಪ್ರೆಸ್ ರೈಲಿನ ಸಿಗ್ನಲ್ ವೈಫಲ್ಯದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದರು.

ವಿಚಿತ್ರವೆಂದರೆ, ರವಾನೆಯ ಮಾರ್ಗವನ್ನು ನಿಗದಿಗೊಳಿಸಲಾಗಿತ್ತು ಮತ್ತು ಸ್ಟಾರ್ಟರ್ ಅನ್ನು ತೆಗೆಯಲಾಗಿತ್ತು, ಪಿಎಲ್ಸಿಟಿಯನ್ನು ನೀಡಲಾಗಿತ್ತು. ಆದರೆ ಪಾಯಿಂಟ್ ನಂ.65ಎ ಸ್ವಯಂಚಾಲಿತವಾಗಿ ತಪ್ಪು ದಿಕ್ಕಿನಲ್ಲಿ ಹೊಂದಿಸಲ್ಪಟ್ಟಿತ್ತು ಎಂದು ಅವರು ಪತ್ರದಲ್ಲಿ ಬರೆದಿದ್ದರು. ಪಿಎಲ್ಸಿಟಿ ಅಥವಾ ಪೇಪರ್ ಲೈನ್ ಕ್ಲಿಯರ್ ಟಿಕೆಟ್ ಅನ್ನು ವಿಶೇಷ ಸಂದರ್ಭಗಳಲ್ಲಿ ಬಳಸಲಾಗುತ್ತದೆ ಮತ್ತು ಇದು ರೈಲು ಬ್ಲಾಕ್ ಸೆಕ್ಷನ್ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಲೋಕೋ ಪೈಲಟ್ (ರೈಲು ಚಾಲಕ)ನ ಜಾಗರೂಕತೆಯಿಂದಾಗಿ ರೈಲು ತಪ್ಪು ಮಾರ್ಗವನ್ನು ಪ್ರವೇಶಿಸುವ ಮುನ್ನವೇ ಅದನ್ನು ನಿಲ್ಲಿಸಲಾಗಿತ್ತು ಮತ್ತು ದೊಡ್ಡ ಅನಾಹುತವೊಂದನ್ನು ತಪ್ಪಿಸಲಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದ ಪ್ರಧಾನ ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕರು, ಸಿಗ್ನಲ್ ನಿರ್ವಹಣೆ ವ್ಯವಸ್ಥೆಯ ಮೇಲೆ ನಿಗಾಯಿರಿಸದಿದ್ದರೆ ಮತ್ತು ಅದನ್ನು ತಕ್ಷಣ ಸರಿಪಡಿಸದಿದ್ದರೆ ಇಂತಹ ಘಟನೆಯು ಪುನರಾವರ್ತನೆಗೊಳ್ಳುತ್ತದೆ ಮತ್ತು ಗಂಭೀರ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದರು. 

ಶನಿವಾರ ವಾಟ್ಸ್ಆ್ಯಪ್ ಮೂಲಕ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವಾಲಯವು ‘ನಿನ್ನೆಯ ಅಪಘಾತಕ್ಕೆ ಕಾರಣವಿನ್ನೂ ಸಾಬೀತಾಗಬೇಕಿದೆ ’ಎಂದು ತಿಳಿಸಿದೆ.

ಅಪಘಾತಕ್ಕೆ ಕೆಲವೇ ಗಂಟೆಗಳ ಮೊದಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ನೇತೃತ್ವದಲ್ಲಿ ನಡೆದಿದ್ದ ‘ಚಿಂತನ ಶಿಬಿರ ’ದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ವಿವಿಧ ವಲಯಗಳ ಪ್ರಸ್ತುತಿಗಳನ್ನು ಕೈಬಿಡಲಾಗಿತ್ತು. ಸುರಕ್ಷತೆಯ ಕುರಿತು ಪ್ರಸ್ತಾವವನ್ನು ಮಂಡಿಸಲು ಒಂದು ವಲಯಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ವಂದೇ ಭಾರತ ರೈಲುಗಳ ಆರಂಭ ಮತ್ತು ಆದಾಯವನ್ನು ಹೆಚ್ಚಿಸುವ ಕುರಿತು ಚರ್ಚೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು ಎಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಹಿರಿಯ ಅಧಿಕಾರಿಯೋರ್ವರು ಅನಾಮಧೇಯತೆಯ ಷರತ್ತಿನೊಂದಿಗೆ ತಿಳಿಸಿದರು.

ಗೂಡ್ಸ್ ರೈಲುಗಳು ಇತ್ತೀಚಿಗೆ ಹಳಿ ತಪ್ಪುತ್ತಿರುವ ಬಗ್ಗೆಯೂ ಸಭೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿತ್ತು. ಇಂತಹ ಅಪಘಾತಗಳಲ್ಲಿ ಲೋಕೋ ಪೈಲಟ್ಗಳು ಮೃತಪಟ್ಟಿದ್ದಾರೆ ಮತ್ತು ವ್ಯಾಗನ್ಗಳು ಸಂಪೂರ್ಣವಾಗಿ ನಾಶಗೊಂಡಿವೆ,ಇದು ಆತಂಕ ಹೆಚ್ಚಲು ಕಾರಣವಾಗಿದೆ ಎಂದು ಇನ್ನೋರ್ವ ಅಧಿಕಾರಿ ಹೇಳಿದರು.

ಮಾನವ ಸಂಪನ್ಮೂಲ ಕೊರತೆ,ಹದಗೆಡುತ್ತಿರುವ ಮೂಲ ಸೌಕರ್ಯ:
ಪ್ರತಿ ದಿನ ಹಳಿಗಳನ್ನು ಪರಿಶೀಲಿಸುವ ಗ್ಯಾಂಗ್ಮನ್ಗಳ ಕೊರತೆಯಿದೆ,ಇದೇ ವೇಳೆ ಸ್ಟೇಷನ್ ಮಾಸ್ಟರ್ಗಳು ಅವಧಿ ಮೀರಿ ಕೆಲಸ ಮಾಡುತ್ತಿದ್ದಾರೆ. ರೈಲು ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಯು ನಿರ್ಣಾಯಕವಾಗಿದೆ. ಅವರನ್ನು 12 ಗಂಟೆಗಳ ಪಾಲಿಗಳಲ್ಲಿ ದುಡಿಸಲಾಗುತ್ತಿದೆ. ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ. ಯಾವುದೇ ಅಸಹಜತೆಯನ್ನು ಪತ್ತೆ ಹಚ್ಚಲು ರೈಲಿನ ಗಾಲಿಗಳಿಂದ ಹಿಡಿದು ಅದು ಹಾದು ಹೋಗುವಾಗ ಮಾಡುವ ಶಬ್ದದ ವರೆಗೆ ಪ್ರತಿಯೊಂದರ ಮೇಲೂ ಸ್ಟೇಷನ್ ಮಾಸ್ಟರ್ ನಿಗಾ ವಹಿಸಬೇಕಾಗುತ್ತದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಕಡಿಮೆ ವೆಚ್ಚದ,ಡಿಕ್ಕಿ ತಡೆ ವ್ಯವಸ್ಥೆ ‘ಕವಚ್ ’ಅನ್ನು ಇನ್ನೂ ಎಲ್ಲ ವಲಯಗಳಲ್ಲಿ ಅಳವಡಿಸಲಾಗಿಲ್ಲ. ಎಪ್ರಿಲ್ ನಲ್ಲಿ ನೀಡಿದ್ದ ಆರ್ಟಿಐ ಉತ್ತರವೊಂದರಲ್ಲಿ ಸಚಿವಾಲಯವು,39 ರೈಲ್ವೆ ವಲಯಗಳು ಮತ್ತು ಉತ್ಪಾದನಾ ಘಟಕಗಳಲ್ಲಿ ಹೆಚ್ಚಿನವು ಅಗತ್ಯ ಮಾನವ ಸಂಪನ್ಮೂಲಗಳನ್ನು ಹೊಂದಿಲ್ಲ ಎಂದು ತಿಳಿಸಿತ್ತು.

Similar News