ಒಡಿಶಾ ರೈಲು ಅಪಘಾತ: ಗಾಯಗೊಂಡಿದ್ದ ಮೂವರು ಮೃತ್ಯು; ಸಾವನ್ನಪ್ಪಿದವರ ಸಂಖ್ಯೆ 278ಕ್ಕೇರಿಕೆ
ಬಾಲಾಸೋರ್: ಒಡಿಶಾ ರೈಲು ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಮೂರು ಜನರು ಮೃತಪಟ್ಟ ಕಾರಣ ಸಾವಿನ ಸಂಖ್ಯೆ 278 ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ರೈಲ್ವೆ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಒಡಿಶಾ ಸರಕಾರದ ಪರಿಷ್ಕೃತ ಪಟ್ಟಿಯ ಪ್ರಕಾರ ಒಟ್ಟು ಸಾವಿನ ಸಂಖ್ಯೆ 275 ರಲ್ಲಿ ಬದಲಾಗದೆ ಉಳಿದಿದೆ.
ಸೋಮವಾರದ ತನಕ 278 ಸಾವುಗಳನ್ನು ಹೊರತುಪಡಿಸಿ, 1,100 ಜನರು ಜೂನ್ 2ರ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಖುರ್ದಾ ರೋಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ರಿಂಕೇಶ್ ರೇ ಹೇಳಿದರು.
ರಾಜ್ಯ ಸರಕಾರದ ಪ್ರಕಾರ ಸಾವಿನ ಸಂಖ್ಯೆ 275 ನಲ್ಲಿ ಉಳಿದಿರುವ ಕುರಿತು ಉತ್ತರಿಸಿದ ರಿಂಕೇಶ್ ರೇ, "ಅಂಕಿಅಂಶಗಳು ಕಾಲಾನಂತರದಲ್ಲಿ ಬದಲಾಗುತ್ತವೆ" ಎಂದು ಹೇಳಿದರು.
ಒಟ್ಟು ಸಾವಿನ ಸಂಖ್ಯೆ 288 ಎಂದು ಮೊದಲು ಹೇಳಲಾಗಿತ್ತು, ಕೆಲವು ಮೃತದೇಹಗಳನ್ನು ಎರಡು ಬಾರಿ ಎಣಿಸಲಾಗಿದೆ ಎಂದು ಹೇಳಿಕೊಂಡಿದ್ದ ರಾಜ್ಯ ಸರಕಾರವು ರವಿವಾರ ಮೃತರ ಸಂಖ್ಯೆಯನ್ನು 275 ಕ್ಕೆ ಪರಿಷ್ಕರಿಸಿತು