ಪಠ್ಯಪುಸ್ತಕಗಳಿಂದ ತಮ್ಮ ಹೆಸರು ಕೈಬಿಡುವಂತೆ NCERTಯನ್ನು ಕೇಳಿದ ಸಲಹೆಗಾರರು

"ಈ ಪಠ್ಯಪುಸ್ತಕಗಳೊಂದಿಗೆ ಗುರುತಿಸಿಕೊಳ್ಳಲು ಮುಜುಗರವಾಗುತ್ತಿದೆ"

Update: 2023-06-09 17:14 GMT

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಶಾಲಾ ಪಠ್ಯಪುಸ್ತಕಗಳಲ್ಲಿ ಹಲವಾರು ಹಾಗೂ ಅತಾರ್ಕಿಕ ಕಡಿತ ಮಾಡಿರುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ಪಠ್ಯಗಳನ್ನು ಕಿತ್ತು ಹಾಕಿರುವ ಕ್ರಮವನ್ನು ಆಕ್ಷೇಪಿಸಿರುವ ಮೂಲತಃ 2006-07ರಲ್ಲಿ ಪ್ರಕಟವಾಗಿದ್ದ ಒಂಬತ್ತರಿಂದ ಹನ್ನೆರಡನೇ ತರಗತಿ ಪಠ್ಯಪುಸ್ತಕಗಳ ಮುಖ್ಯ ಸಲಹೆಗಾರರಾಗಿದ್ದ ಸುಹಾಸ್ ಪಾಲ್ಷಿಕರ್ ಹಾಗೂ ಯೋಗೇಂದ್ರ ಯಾದವ್ ಅವರು, ಹಾಲಿ ಪಠ್ಯಪುಸ್ತಕಗಳ ಸ್ವರೂಪದಿಂದ ತಾವು ದೂರ ಉಳಿಯುತ್ತಿರುವುದಾಗಿಯೂ ಹಾಗೂ ಆ ಪಠ್ಯಪುಸ್ತಕಗಳಿಂದ ತಮ್ಮ ಹೆಸರನ್ನು ಕೈಬಿಡಬೇಕು ಎಂತಲೂ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ ಮನವಿ ಮಾಡಿದ್ದಾರೆ ಎಂದು indianexpress.com ವರದಿ ಮಾಡಿದೆ.

ಕೋವಿಡ್-19 ಸಾಂಕ್ರಾಮಿಕದಿಂದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಪಠ್ಯಕ್ರಮವನ್ನು ಕಡಿತಗೊಳಿಸಲು ಭಾರಿ ಬದಲಾವಣೆ ಹಾಗೂ ಪಠ್ಯಗಳನ್ನು ಕಿತ್ತು ಹಾಕಲು ಕಳೆದ ವರ್ಷ ನಿರ್ಣಯ ಕೈಗೊಂಡು, ಈ ವರ್ಷದಿಂದ ಜಾರಿಗೊಳಿಸಿರುವ NCERT ಕ್ರಮವು ಶಿಕ್ಷಣ ತಜ್ಞರು ಹಾಗೂ ರಾಜಕಾರಣಿಗಳಿಂದ ತೀವ್ರ ಟೀಕೆಗೆ ಗುರಿಯಾಗಿ ಮತ್ತೊಂದು ಸುತ್ತಿನ ವಿವಾದಕ್ಕೆ ಗುರಿಯಾಗಿದೆ. ಈ ಬದಲಾವಣೆಗಳಲ್ಲಿ 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಎಲ್ಲ ಉಲ್ಲೇಖಗಳನ್ನು ಕೈಬಿಟ್ಟಿರುವುದು, ಮುಘಲ್ ಅವಧಿ ಹಾಗೂ ಜಾತಿ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಕಡಿತಗೊಳಿಸಿರುವುದು ಮತ್ತು ಪ್ರತಿಭಟನೆಗಳು ಹಾಗೂ ಸಾಮಾಜಿಕ ಚಳವಳಿಗಳ ಕುರಿತ ಪಠ್ಯಗಳನ್ನು ಕೈಬಿಟ್ಟಿರುವುದು ಸೇರಿವೆ.

ಪಠ್ಯಕ್ರಮದ ಸುಧಾರಣಾ ಪ್ರಕ್ರಿಯೆಯಲ್ಲಿನ ಬದ್ಧತೆ ಕುರಿತು ಕಳವಳ ವ್ಯಕ್ತಪಡಿಸಿ NCERT ನಿರ್ದೇಶಕ ಡಿ.ಎಸ್.ಸಕ್ಲಾನಿ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಯಾದವ್ ಹಾಗೂ ಪಾಲ್ಷಿಕರ್, "ಇಲ್ಲಿ ಯಾವುದೇ ಶೈಕ್ಷಣಿಕ ಸುಧಾರಣೆ ಕಾಣುವಲ್ಲಿ ನಾವು ವಿಫಲವಾಗಿದ್ದೇವೆ. ಪಠ್ಯಗಳನ್ನು ಗುರುತು ಸಿಗಲಾರದಷ್ಟು ತಿರುಚಿರುವುದು ನಮಗೆ ಕಾಣುತ್ತಿದೆ. ಅದರಿಂದ ಉಂಟಾಗಿರುವ ನಿರ್ವಾತವನ್ನು ತುಂಬಿಸುವ ಯಾವುದೇ ಪ್ರಯತ್ನವೂ ಇಲ್ಲದೆ." ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

"ಯಾವುದೇ ಪಠ್ಯವೂ ಆಂತರಿಕ ತಾರ್ಕಿಕತೆ ಹೊಂದಿರುತ್ತದೆ ಎಂದು ನಾವು ನಂಬಿದ್ದೇವೆ ಹಾಗೂ ಇಂತಹ ಮನಸೋಇಚ್ಛೆ ಕಡಿತ ಹಾಗೂ ಕಿತ್ತು ಹಾಕುವ ಪ್ರಕ್ರಿಯೆಯು ಪಠ್ಯದ ಸ್ಫೂರ್ತಿಯನ್ನು ಉಲ್ಲಂಘಿಸುತ್ತದೆ. ಪುನರಾವರ್ತಿತ ಹಾಗೂ ಸರಣಿ ಕಿತ್ತೊಗೆಯುವಿಕೆಯ ಹಿಂದೆ ಅಧಿಕಾರದಲ್ಲಿರುವವರನ್ನು ಸಂಪ್ರೀತರನ್ನಾಗಿಸುವ ಇರಾದೆ ಕಾಣುತ್ತಿದೆಯೇ ಹೊರತು ಅದರ ಹಿಂದೆ ಯಾವುದೇ ತರ್ಕವಿಲ್ಲ" ಎಂದೂ ಪತ್ರದಲ್ಲಿ ಹೇಳಲಾಗಿದೆ.

ಆದರೆ, ತನ್ನ ಇತ್ತೀಚಿನ ಪಠ್ಯಪುಸ್ತಕ ಸುಧಾರಣಾ ಕ್ರಮಗಳನ್ನು ಸರಣಿ ಟ್ವೀಟ್‌ಗಳ ಮೂಲಕ ಬಲವಾಗಿ ಸಮರ್ಥಿಸಿಕೊಂಡಿದ್ದ NCERT, "ಸಾಂಕ್ರಾಮಿಕದ ಅವಧಿಯಲ್ಲಿ ವಿದ್ಯಾರ್ಥಿಗಳು ಎದುರಿಸಿದ್ದ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವಿಷಯದ ಹೊರೆಯನ್ನು ತಗ್ಗಿಸುವ ಗುರಿ ಹೊಂದಿರುವ ಅವಶ್ಯಕ ಕ್ರಮವನ್ನು ಕೈಗೊಳ್ಳಲಾಗಿದೆ" ಎಂದು ಪ್ರತಿಪಾದಿಸಿತ್ತು.

Similar News