ಇರಾನ್‍ನ ಉನ್ನತ ಗುಪ್ತಚರ ಅಧಿಕಾರಿಗಳು ಇಸ್ರೇಲಿ ಬೇಹುಗಾರರು : ಇರಾನ್‍ನ ಮಾಜಿ ಅಧ್ಯಕ್ಷರ ಸ್ಪೋಟಕ ಹೇಳಿಕೆ
ಟೆಹ್ರಾನ್ : ಇರಾನ್‍ನಲ್ಲಿ ಇಸ್ರೇಲ್ ಬೇಹುಗಾರಿಕೆಯನ್ನು ಎದುರಿಸುವ ರಹಸ್ಯ ಸೇವಾ ಘಟಕದ ಮುಖ್ಯಸ್ಥರು ಸ್ವತಃ ಇಸ್ರೇಲಿ ಗೂಢಚಾರಿ ಎಂದು ಇರಾನ್‍ನ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇರಾನ್‍ನಲ್ಲಿ ಇಸ್ರೇಲ್‍ನ ಗುಪ್ತಚರ ಕಾರ್ಯಾಚರಣೆಗಳನ್ನು ಹತ್ತಿಕ್ಕುವ ಜವಾಬ್ದಾರಿ ಹೊಂದಿದ್ದ ಅತ್ಯಂತ ಉನ್ನತ ಅಧಿಕಾರಿ ಇಸ್ರೇಲ್‍ನ ಗುಪ್ತಚರ ಏಜೆನ್ಸಿ ಮೊಸಾದ್ ಏಜೆಂಟ್ ಎಂಬುದು 2021ರ ವೇಳೆಗೆ ಸ್ಪಷ್ಟವಾಗಿದೆ. ಇರಾನ್‍ನ ಒಳಗೆ ಇಸ್ರೇಲ್ ಸಂಕೀರ್ಣ ಕಾರ್ಯಾಚರಣೆಗಳನ್ನು ಆಯೋಜಿಸಿತು. ಅವರು ಸುಲಭವಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇರಾನ್‍ನ ಗುಪ್ತಚರ ಇಲಾಖೆಯಲ್ಲಿ ಸುಮಾರು 20 ಅಧಿಕಾರಿಗಳು ಮೊಸಾದ್ ಪರ ಕೆಲಸ ಮಾಡುತ್ತಿದ್ದಾರೆ. ಇವರು ಇರಾನ್‍ನ ಪರಮಾಣು ಕಾರ್ಯಕ್ರಮದ ಕುರಿತ ಸೂಕ್ಷ್ಮ ಮಾಹಿತಿಯನ್ನು ಇಸ್ರೇಲ್‍ಗೆ ಒದಗಿಸುತ್ತಿದ್ದಾರೆ. 2018ರಲ್ಲಿ ಇರಾನ್‍ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಕಳವಾದ ಪ್ರಕರಣದಲ್ಲೂ ಇವರು ಶಾಮೀಲಾಗಿದ್ದಾರೆ ಎಂದು ಅಹ್ಮದಿಜೆನಾದ್ ಪ್ರತಿಪಾದಿಸಿದ್ದಾರೆ.