ಇರಾಕ್ | ಅಮೆರಿಕ ಯೋಧರಿದ್ದ ಸೇನಾನೆಲೆಯ ಮೇಲೆ ರಾಕೆಟ್ ದಾಳಿ
Update: 2024-10-01 16:23 GMT
ಬಗ್ದಾದ್ : ಇರಾಕ್ ರಾಜಧಾನಿ ಬಗ್ದಾದ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ನೇತೃತ್ವದ ಮೈತ್ರಿ ಪಡೆಗಳಿದ್ದ ಸೇನಾ ನೆಲೆಯತ್ತ ರಾಕೆಟ್‍ಗಳನ್ನು ಪ್ರಯೋಗಿಸಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಇರಾಕ್‍ನ ಆಂತರಿಕ ಸಚಿವಾಲಯ ಹೇಳಿದೆ.
ಬಗ್ದಾದ್ ವಾಯುಪಡೆಯಲ್ಲಿನ ವಿಕ್ಟರಿ ಸೇನಾ ನೆಲೆಯನ್ನು ಗುರಿಯಾಗಿಸಿ ಮೂರು ರಾಕೆಟ್‍ಗಳನ್ನು ಪ್ರಯೋಗಿಸಲಾಗಿದ್ದು ಇದರಲ್ಲಿ ಎರಡನ್ನು ಸೇನಾನೆಲೆಯ ವಿಶೇಷ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಮೂರನೆ ರಾಕೆಟ್ ಭಯೋತ್ಪಾದನೆ ನಿಗ್ರಹ ಸೇವಾ ಘಟಕದ ಪ್ರಧಾನ ಕಚೇರಿಯ ಬಳಿಗೆ ಅಪ್ಪಳಿಸಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಭದ್ರತಾ ಮೂಲಗಳು ಹೇಳಿವೆ.