ಜರ್ಮನಿಗೆ 20,000 ಆನೆಗಳನ್ನು ರವಾನಿಸುವುದಾಗಿ ಬೊಟ್ಸ್ವಾನಾ ಬೆದರಿಕೆಯೊಡ್ಡಿದ್ದೇಕೆ?

Update: 2024-04-07 12:28 GMT

Photo : PTI

ಹೊಸದಿಲ್ಲಿ : ಬೊಟ್ಸ್ವಾನಾದ ಅಧ್ಯಕ್ಷ ಮೊಕ್ವೇಸಿ ಮಸಿಸಿ ಅವರು ಜರ್ಮನಿಗೆ 20,000 ಆನೆಗಳನ್ನು ರವಾನಿಸುವುದಾಗಿ ಇತ್ತೀಚಿಗೆ ಬೆದರಿಕೆಯೊಡ್ಡಿದ್ದಾರೆ. ಜರ್ಮನಿಯು ಈ ವರ್ಷದ ಆರಂಭದಲ್ಲಿ ಪ್ರಾಣಿ ಬೇಟೆಗಳ ಟ್ರೋಫಿಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಕಠಿಣ ಮಿತಿಗಳನ್ನು ಜಾರಿಗೊಳಿಸುವುದನ್ನು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಬೊಟ್ಸ್ವಾನಾ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದಿದೆ.

ಬೊಟ್ಸ್ವಾನಾದಲ್ಲಿ ಸರಕಾರದಿಂದ ಪರವಾನಿಗೆ ಪಡೆದುಕೊಂಡು ನಿಗದಿತ ಶುಲ್ಕವನ್ನು ಪಾವತಿಸಿ ಆನೆಗಳನ್ನು ಬೇಟೆಯಾಡಬಹುದು. ಇದೊಂದು ಕ್ರೀಡೆಯಾಗಿದ್ದು, ಬೇಟೆಗಾರ ತಾನು ಕೊಂದ ಆನೆಯ ಅಂಗಾಂಗವನ್ನು ಸ್ಮರಣಿಕೆಯಾಗಿ ಇಟ್ಟುಕೊಳ್ಳಬಹುದು. ಈ ಕ್ರೀಡೆಯನ್ನು ‘ಟ್ರೋಫಿ ಹಂಟಿಂಗ್ ’ ಎಂದು ಕರೆಯಲಾಗುತ್ತದೆ.

ಜರ್ಮನ್ ಟ್ಯಾಬ್ಲಾಯ್ಡ್ ‘ಬಿಲ್ಡ್’ ಗೆ ನೀಡಿದ ಸಂದರ್ಶನದಲ್ಲಿ ಮಸಿಸಿ, ಐರೋಪ್ಯ ಒಕ್ಕೂಟದಲ್ಲಿ ಹಂಟಿಂಗ್ ಟ್ರೋಫಿಗಳ ಬಹುದೊಡ್ಡ ಆಮದು ದೇಶಗಳಲ್ಲಿ ಒಂದಾಗಿರುವ ಜರ್ಮನಿಯ ಇಂತಹ ಕ್ರಮವು ತನ್ನ ದೇಶದ ಜನರನ್ನು ಬಡತನಕ್ಕೆ ತಳ್ಳುತ್ತದೆ. ಬೇಟೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು (ಸುಮಾರು 1.3 ಲಕ್ಷ) ಆನೆಗಳನ್ನು ಹೊಂದಿರುವ ಬೊಟ್ಸ್ವಾನಾದಲ್ಲಿ ಗಗನಕ್ಕೇರುತ್ತಿರುವ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲೂ ನೆರವಾಗುತ್ತಿದೆ ಎಂದು ಹೇಳಿದರು.

ಬೊಟ್ಸ್ವಾನಾ ತನ್ನ ನೆರೆಹೊರೆಯ ದೇಶಗಳಿಗಿಂತ ಭಿನ್ನವಾಗಿ ಸ್ಥಿರ ಸರಕಾರವನ್ನು ಮತ್ತು ಕಡಿಮೆ ಜನಸಂಖ್ಯೆಯನ್ನು ಹೊಂದಿರುವುದರಿಂದ ಆನೆಗಳಿಗೆ ಸುರಕ್ಷಿತ ಧಾಮವಾಗಿದೆ. ಉದಾಹರಣೆಗೆ ನಮೀಬಿಯಾ ಮತ್ತು ಅಂಗೋಲಾಗಳಲ್ಲಿ ಸಾಮೂಹಿಕ ಬೇಟೆಯ ಬಳಿಕ ಹೆಚ್ಚು ಬುದ್ಧಿವಂತ ಪ್ರಾಣಿಗಳೆಂದು ಹೆಸರಾಗಿರುವ ಆನೆಗಳು ಚೋಬ್ ನದಿಯನ್ನು ದಾಟುವುದನ್ನು ನಿಲ್ಲಿಸಿ ಬೊಟ್ಸ್ವಾನಾದಲ್ಲಿಯೇ ಉಳಿದುಕೊಂಡಿವೆ.

ಬೊಟ್ಸ್ವಾನಾ ಕಟ್ಟುನಿಟ್ಟಿನ ಸಂರಕ್ಷಣಾ ನೀತಿಗಳನ್ನೂ ಜಾರಿಗೊಳಿಸಿದೆ. 2013ರಲ್ಲಿ ಆನೆಗಳನ್ನು ಬೇಟೆಯಾಡುವ ಘಟನೆಗಳು ಹೆಚ್ಚಾದಾಗ ಅದು ಶಂಕಿತ ಬೇಟೆಗಾರರನ್ನು ಗುರಿಯಾಗಿಸಿಕೊಂಡು ‘ಶೂಟ್-ಟು-ಕಿಲ್’ ನೀತಿಯನ್ನು ಪ್ರಕಟಿಸಿತ್ತು. ಮರುವರ್ಷ ಅದು ಅಧಿಕೃತ ಸರಕಾರಿ ಪರವಾನಿಗೆಯಡಿ ನಡೆಯುತ್ತಿದ್ದ ಟ್ರೋಫಿ ಹಂಟಿಂಗ್‌ನ್ನು ನಿಷೇಧಿಸಿತ್ತು.

ಈ ಕಾರಣಗಳಿಂದಾಗಿ ವರ್ಷಗಳಿಂದಲೂ ದೇಶದಲ್ಲಿ ಆನೆಗಳ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ. 1960ರ ದಶಕದ ಆರಂಭದಲ್ಲಿ 10,000ಕ್ಕೂ ಕಡಿಮೆಯಿದ್ದ ಆನೆಗಳ ಸಂಖ್ಯೆ 1990ರ ದಶಕದ ಮಧ್ಯದ ವೇಳೆಗೆ 80,000ಕ್ಕೆ ಏರಿತ್ತು. ಇಂದು ಆನೆಗಳು ಬೊಟ್ಸ್ವಾನಾದ ಸುಮಾರು ಶೇ.40ರಷ್ಟು ಭೂಪ್ರದೇಶದಲ್ಲಿ ವಾಸವಾಗಿವೆ.

ಬೊಟ್ಸ್ವಾನಾದಲ್ಲಿ ಹೆಚ್ಚುತ್ತಿರುವ ಆನೆಗಳ ಸಂಖ್ಯೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷಗಳೂ ಹೆಚ್ಚುತ್ತಿವೆ. ದೇಶದ ಗ್ರಾಮೀಣ ಸಮುದಾಯಗಳ ಪಾಲಿಗೆ ಆನೆ ಪಿಡುಗಾಗಿ ಪರಿಣಮಿಸಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಆಗಾಗ್ಗೆ ಮನೆಗಳಿಗೆ ಹಾನಿಯನ್ನುಂಟು ಮಾಡುವ ಆನೆಗಳು ಪೈಪ್‌ಗಳಲ್ಲಿಯ ನೀರನ್ನು ಕುಡಿಯುತ್ತವೆ, ಬೆಳೆಗಳನ್ನು ತಿನ್ನುತ್ತವೆ ಅಥವಾ ಅವುಗಳನ್ನು ನಾಶಗೊಳಿಸುತ್ತಿವೆ, ಜನರು ಮತ್ತು ಜಾನುವಾರುಗಳನ್ನು ತುಳಿದು ಕೊಲ್ಲುತ್ತವೆ.

ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಇತರ ಪ್ರಾಣಿ ಸಂಕುಲಗಳಿಗೂ ಬೆದರಿಕೆಯನ್ನೊಡ್ಡಿದೆ ಮತ್ತು ಜೀವವೈವಿಧ್ಯ ನಷ್ಟ ಹಾಗೂ ಆವಾಸಸ್ಥಾನದ ಅವನತಿಗೂ ಕಾರಣವಾಗುತ್ತಿದೆ. ಆನೆಗಳು ಮೇವಿಗಾಗಿ ಮರಗಳನ್ನು ಕಿತ್ತು ಹಾಕುತ್ತಿವೆ ಮತ್ತು ಭಾರೀ ಪ್ರಮಾಣದಲ್ಲಿ ನೀರನ್ನು ಸೇವಿಸುತ್ತಿವೆ. ಇದು ಆನೆಗಳನ್ನು ಹೊರತು ಪಡಿಸಿ ಇತರ ವನ್ಯಜೀವಿಗಳ ಸಂಖ್ಯೆ ಕುಗ್ಗಲು ಕಾರಣವಾಗುತ್ತದೆ.

ಹೆಚ್ಚುತ್ತಿರುವ ಆನೆಗಳ ಸಂಖ್ಯೆ ಬೊಟ್ಸ್ವಾನಾಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಎದುರಿಸುವ ಪ್ರಯತ್ನವಾಗಿ ಅದು ಇತರ ದೇಶಗಳಿಗೆ ಆನೆಗಳನ್ನು ದಾನ ಮಾಡಿದೆ. ಆದರೆ ವಾಸ್ತವದಲ್ಲಿ ಇದು ಹೆಚ್ಚುತ್ತಿರುವ ಆನೆಗಳ ಸಂಖ್ಯೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಆನೆಗಳಿದ್ದು, ಗರ್ಭ ನಿರೋಧಕ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿಲ್ಲ.

ಇದೇ ಕಾರಣದಿಂದ ಬೊಟ್ಸ್ವಾನಾ 2019ರಲ್ಲಿ ಟ್ರೋಫಿ ಹಂಟಿಂಗ್ ಮೇಲಿನ ನಿಷೇಧವನ್ನು ರದ್ದುಗೊಳಿಸಿತ್ತು. ಟ್ರೋಫಿ ಹಂಟಿಂಗ್ ಆನೆಗಳ ಸಂಖ್ಯೆಯನ್ನು ಸೀಮಿತಗೊಳಿಸಲು ನೆರವಾಗುವ ಜೊತೆಗೆ ಇತರ ದೇಶಗಳ ಬೇಟೆಗಾರರಿಂದಾಗಿ ಸ್ಥಳೀಯ ಆರ್ಥಿಕತೆಯು ಹೆಚ್ಚುತ್ತದೆ ಎನ್ನುವುದು ಬೊಟ್ಸ್ವಾನಾದ ವಾದವಾಗಿದೆ. ಬೇಟೆಗಾರರು ತಾವು ಕೊಲ್ಲುವ ಪ್ರತಿ ಆನೆಗೂ 50,000 ಡಾಲರ್ ಗಳನ್ನು ಪಾವತಿಸುತ್ತಾರೆ.

ಹೀಗಿರುವಾಗ ಜರ್ಮನಿಯ ಪ್ರಸ್ತಾವ ಬೊಟ್ಸ್ವಾನಾ ಸರಕಾರಕ್ಕೆ ಸಹಜವಾಗಿಯೇ ಕಳವಳವನ್ನು ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News