ಮಹೇಶಕುಮಾರ್ ರಾಠೋಡ್ ವಿರುದ್ಧ ಪ್ರಕರಣ ವಿರೋಧಿಸಿ ಎಐಟಿಯುಸಿ ಪ್ರತಿಭಟನೆ

Update: 2025-03-21 09:45 IST
ಮಹೇಶಕುಮಾರ್ ರಾಠೋಡ್ ವಿರುದ್ಧ ಪ್ರಕರಣ ವಿರೋಧಿಸಿ ಎಐಟಿಯುಸಿ ಪ್ರತಿಭಟನೆ
  • whatsapp icon

ಕಲಬುರಗಿ: ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಮಹೇಶಕುಮಾರ್ ರಾಠೋಡ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹಿಂದಕ್ಕೆ ಪಡೆಯುವಂತೆ ಹಾಗೂ ಜೇವರ್ಗಿ ಪುರಸಭೆ ಕಾರ್ಮಿಕರನ್ನು ಪುನರ್ ನೇಮಕ ಮಾಡುವಂತೆ ಒತ್ತಾಯಿಸಿ ಗುರುವಾರ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಪತಕಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಜಿಲ್ಲಾ ಕಾರ್ಯದರ್ಶಿ ಹಣಮಂತ್ರಾಯ್ ಅಟ್ಟೂರ್, ಪದ್ಮಾವತಿ ಪಾಟೀಲ್, ಸಿದ್ದಪ್ಪ ಪಾಲ್ಕಿ, ಭೀಮಾಶಂಕರ್ ಮಾಡಿಯಾಳ್, ಶಿವಲಿಂಗಮ್ಮ ಲೆಂಗಟಿಕರ್, ಬಾಬು ಮುಲ್ಲಾ, ಅಶೋಕ್ ಸಾಸನೂರ್, ಮೊಹ್ಮದ್ ಹುಸೇನ್, ಕೈಲಾಶ್ ವಾಡೇಕರ್, ಕಲ್ಯಾಣಿ ತುಕ್ಕಾಣಿ ಮುಂತಾದವರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಜಿಲ್ಲೆಯ ಜೇವರ್ಗಿ ಪುರಸಭೆಯಲ್ಲಿ ಈ ಹಿಂದೆ 17 ಜನ ಕಾರ್ಮಿಕರನ್ನು ವಿನಾಃಕಾರಣ ಕೆಲಸದಿಂದ ತೆಗೆದಿದ್ದು, ಹಲವು ಬಾರಿ ಮನವಿ ಸಲ್ಲಿಸಿದ್ದು, ಅಲ್ಲದೆ ಕಳೆದ 12 ದಿನಗಳಿಂದ ಪುರಸಭೆಯ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸಿ ಒತ್ತಾಯ ಮಾಡುತ್ತಿದ್ದರೂ ಕೂಡಾ ಸದರಿ ಪುರಸಭೆಯ ಅಧಿಕಾರಿಗಳು ಗಮನಹರಿಸದೆ ನಿಷ್ಕಾಳಜಿ ಮಾಡಿರುವುದಲ್ಲದೆ, ಸದರಿ ಹೋರಾಟದ ದಾರಿ ತಪ್ಪಿಸಲು ಪುರಸಭೆಯ ಅಧಿಕಾರಿಗಳೆಲ್ಲ ಸೇರಿ ಷಡ್ಯಂತ್ರ ರೂಪಿಸಿ ಡಾ. ಮಹೇಶ್ ಕುಮಾರ್ ರಾಠೋಡ್ ಮತ್ತು ಇತರ ಹೋರಾಟಗಾರರ ವಿರುದ್ದ ಸುಳ್ಳು ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಹೋರಾಟದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ ಎಂದು ದೂರಿದರು.

ಜೇವರ್ಗಿ ಪುರಸಭೆಯಲ್ಲಿ ಮೊದಲ ಆದ್ಯತೆಯ ಮೇರೆಗೆ ಸದರಿ 17 ಜನ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳುವಂತೆ, ಸದರಿ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ಸದರಿ 17 ಜನ ಕಾರ್ಮಿಕರನ್ನು ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವಂತೆ, ಕಾರ್ಮಿಕರ ಅನಕ್ಷರತೆಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಮೋಸ ಮಾಡಿರುವ ಪುರಸಭೆಯ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ದಲಿತ ಮಹಿಳೆಯರು ಪುರಸಭೆ ಅಧಿಕಾರಿಯ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು ಕೂಡಾ ಈವರೆಗೂ ಪ್ರಕರಣ ದಾಖಲಿಸಿರುವುದಿಲ್ಲ. ಆದ್ದರಿಂದ ಕೂಡಲೇ ಸದರಿ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆಯೂ ಸಹ ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News