ಕಲಬುರಗಿ | ರಟಕಲ್ ನಲ್ಲಿ ಜೆಜೆಎಂ ಯೋಜನೆಯಡಿ ಕಳಪೆ ಕಾಮಗಾರಿ ಆರೋಪ; ಕ್ರಮಕ್ಕೆ ಆಗ್ರಹ

ಕಲಬುರಗಿ : ಜಲಜೀವನ್ ಮಿಷನ್ ಯೋಜನೆಯಡಿ ಅಧಿಕಾರಿಗಳು ಹಣ ಲಪಟಾಯಿಸಿದ್ದು, ಪೈಪ್ ಲೈನ್ ಮತ್ತು ಇತರ ಕಾರ್ಯಗಳು ಸರಿಯಾಗಿ ನಡೆದಿಲ್ಲ. ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನೀರಿಗೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಗ್ರಾಮದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಬೇಸಿಗೆ ಶುರುವಾಗಿದ್ದರಿಂದ ಕುಡಿಯಲು ನೀರಿನ ಸಮಸ್ಯೆ ಉದ್ಭವವಾಗಿದೆ. ಕಾರಣ ಅದಕ್ಕೆ ಕೇಳಿದರೆ ಜೆಜೆಎಂ ಕೆಲಸ ಸರಿಯಾಗಿ ಮಾಡದ ಕಾರಣ ಹಣ ದುರ್ಬಳಕೆ ಲೂಟಿ ಮಾಡಿದ್ದಾರೆ. ಹಾಗಾಗಿ ಅವರು ನೀರಿನ ಪೈಪ್ ಲೈನ್ ಸರಿಯಾಗಿ ಮಾಡಿಲ್ಲ. ಪಂಚಾಯತ್‌ನಲ್ಲಿ ಪಿಡಿಒ ಅವರು ಇರುವುದಿಲ್ಲ, ಕೇಳಿದರೆ ಬೇರೆ ಪಂಚಾಯತ್ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಗ್ರಾಮ ಪಂಚಾಯತಿಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಇಂತಹ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸೇನೆ ಹಾಗೂ ರೈತ ಸಂಘದ ಚಿಂಚೋಳಿ ಮತ್ತು ಕಾಳಗಿ ಅಧ್ಯಕ್ಷ ವೀರಣ್ಣ ಗಂಗಾಣಿ, ನಮ್ಮ ಸಮಸ್ಯೆಗಳು ಕೇಳಬೇಕೆಂದರೆ ಫೋನ್ ಕರೆ ಮಾಡಿದರೂ ತೆಗೆಯೋದಿಲ್ಲ. ಇದು ಈಗಿರುವ ಸಮಸ್ಯೆ ಅಲ್ಲ ವರ್ಷಗಳಿಂದ ದಿನನಿತ್ಯ ಸಮಸ್ಯೆ ಇದೆ. ಗ್ರಾಮೀಣ ಭಾಗದಲ್ಲಿರುವವರು ನಾವು, ದನ-ಕರು ಪ್ರಾಣಿ ಪಕ್ಷಿಗಳಿಗೆ ಮತ್ತು ಮನೆ ಉಪಯೋಗಕ್ಕೆ ಕುಡಿಯಲು ಸಹ ನೀರಿಲ್ಲದೆ ಪರದಾಡುತ್ತಿದ್ದೇವೆ. ಹತ್ತಾರು ಬಾರಿ ಪಂಚಾಯತ್ ಮುತ್ತಿಗೆಯು ಸಹ ಹಾಕಿದ್ದೇವೆ, ರೋಡಗೆ ಇಳಿದು ಹೋರಾಟ ಆಡಿದ್ದೇವೆ. ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕೂಡಲೇ ಮೇಲಾಧಿಕಾರಿಗಳು ಗ್ರಾಮಕ್ಕೆ ಕುಡಿಯುವ ನೀರು ಒದಗಿಸಿ ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ, ವಿಳಂಬ ನೀತಿ ಅನುಸರಿಸಿದ್ದಲ್ಲಿ ಗ್ರಾಮ ಪಂಚಾಯತಿಗೆ ಕಚೇರಿಗೆ ಬಿಗಹಾಕಿ ಪ್ರತಿಭಟನೆ ನಡೆಸುವ ಬಗ್ಗೆ ಗ್ರಾಮಸ್ಥರು ತೀರ್ಮಾನ ಕೈಗೊಂಡಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ವೇಳೆ ಸುಭಾಷ್ ಹುಳಗೇರಾ, ರೇವಣಸಿದ್ದ ಬಿರಾದಾರ್, ಜಲೀಲ್, ನಾಗರಾಜ್ ಹಡಪದ, ಗ್ರಮದ ಮಹಿಳೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.