ಕಲಬುರಗಿ ಕೇಂದ್ರ ಕಾರಾಗೃಹದ ಜೈಲರ್‌ಗೆ ಬೆದರಿಕೆ ಪ್ರಕರಣ : 11 ಮಂದಿ ವಿರುದ್ಧ ಎಫ್ಐಆರ್ ದಾಖಲು
ಕಲಬುರಗಿ : ನಗರದ ಹೊರವಲಯದ ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ 9 ಕೈದಿಗಳು ಸೇರಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೇವರಾಜ್ ಶರಣಪ್ಪ, ಮುಸ್ತಫಾ, ನಾಗರಾಜ್ ಬಳಿಗಾರ, ಶ್ರೀಕಾಂತ್ ಬೆನ್ನೂರು, ಶ್ರೀಶೈಲ ಹರಳಯ್ಯ, ನಾಸೀರ್, ಅಲ್ತಾಫ್ ರಾಜ್, ಹಸನ್ ಶೇಕ್, ಜಮೀರ್ ಚಾಂದ್ಪೀರ್, ಅನಿಷಾ ಬೇಗಮ್, ನೂರ್ ಜಹಾನ್ ಅವರ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
( ಕೇಂದ್ರ ಕಾರಾಗೃಹದ ಅಧೀಕ್ಷಕಿ ಅನಿತಾ)
ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಸೇರಿದಂತೆ ಇನ್ನಿತರ ಚಟುವಟಿಕೆಗಳು ನಿಲ್ಲಿಸಿದಕ್ಕಾಗಿ ಕಾರಾಗೃಹದ ಅಧೀಕ್ಷಕಿ ವಿರುದ್ಧ ಕೈದಿಗಳು ಪ್ರತಿಭಟನೆ ನಡೆಸಿದ್ದರು. ತದನಂತರ ಅನಾಮಿಕ ದುಷ್ಕರ್ಮಿಯೊಬ್ಬನಿಂದ ಆಡಿಯೋ ಮೂಲಕ ಕಾರು ಸ್ಫೋಟಿಸುವ ಬೆದರಿಕೆ ಸಂದೇಶ ಬಂದಿತ್ತು. ಇದನ್ನು ಜೈಲಿನಲ್ಲಿರುವ ಕೈದಿಗಳೇ ಕಳುಹಿಸಿದ್ದಾರೆ ಎಂಬ ಅನುಮಾನ ಅವರಿಗೆ ಗೊತ್ತಾಗಿದ್ದು, ಕಾರಾಗೃಹದ ಅಧೀಕ್ಷಕಿ ಅನಿತಾ ಅವರು, ಇಬ್ಬರು ಮಹಿಳೆಯರು ಸೇರಿದಂತೆ 9 ಕೈದಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದೀಗ ಈ ಪ್ರಕರಣದ ಹಿಂದೆ 9 ಜನ ಕೈದಿಗಳ ಕೈವಾಡ ಇರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.