ಕಲಬುರಗಿ: ಸೋಲಾರ್ ಕಂಪನಿಯ ಕೇಬಲ್ ವೈರ್ ಕಳ್ಳತನ; ಆರೋಪಿಗಳಿಬ್ಬರ ಬಂಧನ

ಕಲಬುರಗಿ: ಸೇಡಂ ತಾಲೂಕಿನ ಕಲಕಂಭ ಗ್ರಾಮದ ಹತ್ತಿರ ಇರುವ ಸೋಲಾರ್ ಕಂಪನಿಗೆ ಒಳಪಟ್ಟ ಸುಮಾರು 1.20 ಲಕ್ಷ ರೂ. ಮೌಲ್ಯದ ಕನೆಕ್ಟರ್ ವೈರ್ ಮತ್ತು ವಿದ್ಯುತ್ ಸಾಮಗ್ರಿಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ,
ಬಂಧಿತರನ್ನು ತೆಲಂಗಾಣ ರಾಜ್ಯದ ವನಪರ್ತಿ ಜಿಲ್ಲೆಯ ಯರಕಲ್ ರಮೇಶ್ (31) ಹಾಗೂ ಕುಲಿಕಾರ ಪೋಲಾ ನಾಗೇಶ್ (35) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೇಬಲ್ ವೈರ್ ಕಳವುಗೈದು ಮಾರಾಟ ಮಾಡಿ ಬಂದ ಒಟ್ಟು 80000, ರೂ. ಹಾಗೂ ಉಳಿದ 120 ಫೀಟ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಟಿಂಗ್ ಪ್ಲೇಯರ್, ಒಂದು ಕಬ್ಬಿಣದ ಸುತ್ತಿಗೆಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡರು.
ಸೋಲಾರ್ ಕಂಪನಿಯ ಪ್ಲೇಟ್ ಉಸ್ತುವಾರಿ ಮೋಹನ್ ರಂಗನ್ ಅವರು ನೀಡಿದ ದೂರಿನ ಅನ್ವಯ ಸಿಪಿಐ ಅವರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ, ಎಂಎಸ್ ಐ ರಾಮರೆಡ್ಡಿ, ಅಪರಾಧ ಪತ್ತೆ ದಳದ ಸಿಬ್ಬಂದಿ ಹೋನಪ್ಪ, ನಾಗರಾಜ್, ಬಾಲಕೃಷ್ಣರೆಡ್ಡಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳುವಾದ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಪೊಲೀಸರು ಗುರುವಾರ ತೆಲಂಗಾಣ ರಾಜ್ಯಕ್ಕೆ ಹೋದಾಗ ಆತ್ಮಕುರಿ ಗ್ರಾಮದ ಸಾಯಿಬಾಬಾ ದೇವಸ್ಥಾನದ ಹತ್ತಿರ ಆರೋಪಿಗಳನ್ನು ಸಂಶಯಾಸ್ಪದವಾಗಿ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಜಾಲ ಬಯಲಾಗಿದೆ.
ಪೊಲೀಸರ ಕಾರ್ಯಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.