ಕಲಬುರಗಿ | ವಿಶ್ವ ಜಲ ದಿನ ಆಚರಣೆ : ನ್ಯಾ.ಶ್ರೀನಿವಾಸ ನವಲೆ ಉದ್ಘಾಟನೆ

ಕಲಬುರಗಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಅಶೋಕನಗರ ವಲಯದ ಬ್ರಹ್ಮಪುರ ವಡ್ಡರಗಲ್ಲಿರುವ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮವನ್ನು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಸಕಲ ಜೀವರಾಶಿಗಳಿಗೆ ನೀರು ಅತ್ಯಾವಶ್ಯಕ. ಜಗತ್ತಿಗೆ ನೀರಿನ ಮಹತ್ವವನ್ನು ತಿಳಿಸಲು ವಿಶ್ವಸಂಸ್ಥೆಯಿಂದ 1993ರ ಮಾ.22 ರಿಂದ ವಿಶ್ವ ಜಲ ದಿನವನ್ನು ಆರಂಭಿಸಲಾಗುತ್ತಿದೆ. ಅಂದಿನಿಂದ ಪ್ರತಿವರ್ಷ ಮಾ.22 ರಂದು ವಿಶ್ವಜಲ ದಿನಾಚರಣೆ ಆಚರಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಈ ಸಂಪನ್ಮೂಲವನ್ನು ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ಕೆರೆ, ಭಾವಿ, ಹಳ್ಳ, ನದಿಗಳಲ್ಲಿ ನೀರು ಕಲುಶಿತವಾಗದಂತೆ ನೋಡಿಕೊಳ್ಳಬೇಕು. ವಿಶ್ವದ ಎಲ್ಲ ಜನರಿಗೂ ಶುದ್ಧ ನೀರು ಸಿಗುವಂತಾಗಬೇಕೆನ್ನುವುದೇ ಈ ದಿನದ ಉದ್ದೇಶವಾಗಿದೆ. ಪ್ರತಿ ನೀರಿನ ಹನಿಯನ್ನು ಜಾಗರೂಕತೆಯಿಂದ ಬಳಸೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಸಂಸ್ಥೆ ಮುಖ್ಯಸ್ಥ ಆನಂದರಾಜ, ಬ್ರಹ್ಮಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಾವಿತ್ರಿ ಪಾಟೀಲ್, ಕಲಬುರಗಿ ಶಿಶು ಅಭಿವೃದ್ಧಿ ಯೋಜನೆ ಸಂರಕ್ಷಣಾಧಿಕಾರಿ ಅಂಬಿಕಾ, ಆರೋಗ್ಯ ಇಲಾಖೆಯ ಜಿಲ್ಲಾ ಸಂಯೋಜಕ ಲಕ್ಷ್ಮೀ, ಮಾರ್ಗದರ್ಶಿ ಸಂಸ್ಥೆಯ ಸಹಾಯಕ ನಿರ್ದೇಶಕ ಯಶೋಧಾ, ಮೇಲ್ವಿಚಾರಕಿ ಪಿಂಕುಬಾಯಿ ಗಾಯಕವಾಡ ಹಾಗೂ ವಲಯದ ಮೇಲ್ವಿಚಾರಕಿ ಶಿವಲೀಲಾ ಬಿ ಕಡಗಂಚಿ ಉಪಸ್ಥಿತರಿದ್ದರು.