ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ : ರಝಾಕ್ ಉಸ್ತಾದ್

ರಾಯಚೂರು : ಕಲ್ಯಾಣ ಕರ್ನಾಟಕ ನೈಸರ್ಗಿಕ, ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಭಾಗವಾಗಿದೆ. ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲು ಕೇವಲ ಐತಿಹಾಸಿಕ ಕಾರಣ ಮಾತ್ರವಲ್ಲ ಅದಕ್ಕೆ ನಾವುಗಳು ಆಯ್ಕೆ ಮಾಡಿದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಕಾರಣವೇ ಹೊರತು ಮತ್ಯಾವುದು ಅಲ್ಲವೆಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ರಝಾಕ್ ಉಸ್ತಾದ್ ರವರು ತಿಳಿಸಿದರು.
ಅವರಿಂದು ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಎಲ್.ವಿ.ಡಿ ಹಳೆಯ ವಿದ್ಯಾರ್ಥಿ ಸಂಘದಿಂದ ಹಮ್ಮಿಕೊಂಡಿದ್ದ ಪ್ರಾದೇಶಿಕ ಅಸಮಾತೋಲನಕ್ಕೆ ಪರಿಹಾರ -ಸಾಧ್ಯತೆಗಳು ಹಾಗೂ ಸವಾಲುಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸಕದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಯಾಣ ಕರ್ನಾಟಕವು ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 77 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ದಿ ಮರೀಚಿಕೆಯಾಗಿದೆ. ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ. ಇದಕ್ಕೆ ಮುಖ್ಯ ಕಾರಣ ಜನಗಳು ಹಾಗೂ ನಾವುಗಳು ಆಯ್ಕೆಮಾಡುವಂತಹ ಪ್ರತಿನಿಧಿಗಳಾಗಿದ್ದಾರೆ. ಇದೆಲ್ಲವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಭಾಗ್ಯದ ಬಾಗಿಲೇ ಸಂವಿಧಾನ ನಮಗೆ ನೀಡಿದ 371(ಜೆ) ತಿದ್ದುಪಡಿಯಾಗಿದ್ದು, ಈ ಭಾಗದಲ್ಲಿ ಹಿಂದೆ ಮುಲ್ಕಿ ಕಾನೂನು ಅಸ್ತಿತ್ವದಲ್ಲಿದ್ದು ನಂತರದಲ್ಲಿ ಈ ವಿಶೇಷ ಕಾನೂನಿನ ರದ್ದಾದ ನಂತರ ನಮ್ಮ ಭಾಗ ಹಲವು ರೀತಿಯ ನಿರ್ಲಕ್ಷ್ಯಕ್ಕೆ ಒಳಪಟ್ಟ ಭಾಗವಾಗಿ ಮಾರ್ಪಾಡಾಯಿತು. ಡಾ.ವೈಜನಾಥ್ ಪಾಟೀಲ್ ಅವರ ನೇತೃತ್ವದಲ್ಲಿ 371 ಜೆ ಕಲಂಜಾರಿಗಾಗಿ ಪ್ರಾರಂಭವಾಗಿ ಹೋರಾಟ 2 ದಶಕದ ಸುದೀರ್ಘ ಹೋರಾಟದ ಫಲವಾಗಿ ದಕ್ಕಿತು.
ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ 114 ತಾಲ್ಲೂಕುಗಳ ಪೈಕಿ 29 ತಾಲ್ಲೂಕುಗಳು ಈ ಭಾಗದಲ್ಲಿವೆ. ತೆಲಂಗಾಣ 371 (ಡಿ) ಮತ್ತು ವಿದರ್ಭ 371 (2) ತಿದ್ದುಪಡಿಯನ್ನು ಮಾದರಿಯಾಗಿಟ್ಟುಕೊಂಡೇ 2013 ರಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರ ವಿಶೇಷ ಪ್ರಾತಿನಿಧ್ಯದಿಂದ 371 (ಜೆ) ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ನಂತರದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದರ ಫಲ ಈ ಭಾಗದವರಿಗೆ ಸಿಗುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳೂ ವೈದ್ಯಕೀಯ ಶಿಕ್ಷಣ ಪಡೆಯುವಂತಹ ಅವಕಾಶದ ಹೆಬ್ಬಾಗಿಲು ತೆರೆದಿದೆ.
ಈ ವರೆಗೆ 30 ಸಾವಿರದಷ್ಟು ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಆದರೆ ದಶಕ ಕಳೆದರೂ ಕೂಡ ಕೆಕೆಆರ್‌ಡಿಬಿಯ ಹೆಚ್ಚಿನ ಅನುದಾನ ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕೇ ವ್ಯಯವಾಗುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಸೃಜನೆಯಂತಹ ಮಾನವ ಸಂಪನ್ಮೂಲ ಅಭಿವೃದ್ಧಿಯ ಆದ್ಯತಾ ವಲಯವನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಅಪೌಷ್ಟಿಕತೆ, ರಕ್ತ ಹೀನತೆ, ವಲಸೆ ಸಮಸ್ಯೆಗೆ ಮುಕ್ತಿ ದೊರೆತಿಲ್ಲ. ಕೆಕೆಆರ್‌ಡಿಬಿಗೆ ‘ಮಿನಿ ಸರ್ಕಾರ’ದಂತೆ ಕೆಲಸ ಮಾಡುವ ಅಧಿಕಾರ ಇದ್ದರೂ ಅದನ್ನು ಮಾಡುತ್ತಿಲ್ಲ. ಮಾನವ ಸಂಪನ್ಮೂಲ ಸದ್ಬಳಕೆ ಮತ್ತು ಯುವಜನತೆಯಲ್ಲಿ ಕೌಶಲ ಹೆಚ್ಚಿಸುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಹಲವು ರೀತಿಯ ತಾಂತ್ರಿಕ ಸಂಸ್ಥೆಗಳನ್ನು ಸ್ಥಾಪಸದೇ ಇರುವುದು ನಮ್ಮಗಳ ದುರಂತವೇ ಸರಿ ಈಗಾಗಿ ಅಂಬೇಡ್ಕರ್ ರವರ ತ್ರಿವಳಿ ಸೂತ್ರವಾದ ಶಿಕ್ಷಣ , ಸಂಘಟನೆ , ಹೋರಾಟ ಎಂಬಂತಹ ಅಂಶಗಳನ್ನು ನಾವುಗಳು ಅಳವಡಿಸಿಕೊಂಡು ನಮ್ಮ ಪಾಲಿನ ಹಕ್ಕನ್ನು ನಾವುಗಳು ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದಂತಹ ಪ್ರಾಧ್ಯಾಪಕರಾದ ಡಾ.ಚೆನ್ನಮಲ್ಲಿಕಾರ್ಜುನರವರು ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶವು ಹಿಂದುಳಿದಿದೆ ಎನ್ನುವ ಕೀಳರಿಮೆ ಇಟ್ಟುಕೊಳ್ಳದೆ, ಆಗಬೇಕಾದ ಅಭಿವೃದ್ಧಿ ಕೆಲಸಗಳೇನು ಎಂಬುದನ್ನು ಗುರುತಿಸಿ ಮುನ್ನಡೆಯಬೇಕು. ಮನಸ್ಥಿತಿ ಬದಲಿಸಿಕೊಳ್ಳಬೇಕು ಅಲ್ಲದೇ ಶಿಕ್ಷಣ ರಂಗ ಮಾತ್ರವಲ್ಲ ಎಲ್ಲಾ ರಂಗದಲ್ಲೂ ನಮ್ಮ ಭಾಗದ ಜನರು ಮುಂದೆ ಬರಲು 371 ಜೆ ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಸಂಜಯ್ ಪವಾರ್, ರಾಜ್ಯಶಾಸ್ತ್ರ ಮುಖ್ಯಸ್ಥರಾದ ತ್ರಿವೇಣಿ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಡಾ.ಆಂಜನೇಯ್ಯ ಓಬಳೇಶ್ ಸೇರಿದಂತೆ ಕಾಲೇಜಿನ ಉಪನ್ಯಾಸಕರುಗಳು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.