ಜಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಉಂಟಾಗಿಲ್ಲ : ಸಚಿವ ಶರಣಪ್ರಕಾಶ್ ಪಾಟೀಲ್

ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ : ಇಲ್ಲಿನ ಜಿಮ್ಸ್ (GIMS) ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದಾಗಿ ಆಕ್ಸಿಜನ್ ಕೊರತೆ ಉಂಟಾಗಿ ರೋಗಿಗಳು ಪರದಾಡಿದ ಕುರಿತು ವಿವಾದ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, “ಜಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಉಂಟಾಗಿಲ್ಲ. ವಿದ್ಯುತ್ ಸಮಸ್ಯೆ ಇತ್ತು, ಆದರೆ ತಾಂತ್ರಿಕ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಅದನ್ನು ಸರಿಪಡಿಸಿದ್ದಾರೆ. ಸಮಸ್ಯೆಯು ಎಲೆಕ್ಟ್ರಿಕಲ್ ಓವರ್‌ಲೋಡ್ ಆಗಿ ಟ್ರಿಪ್ ಆಗಿದ್ದರಿಂದ ಉಂಟಾಗಿದೆ" ಎಂದು ಹೇಳಿದ್ದಾರೆ.
ಜಿಮ್ಸ್ ಕಟ್ಟಡದಲ್ಲಿದ್ದ ಜಯದೇವ ಆಸ್ಪತ್ರೆ ಬೇರೆಡೆ ಸ್ಥಳಾಂತರಗೊಂಡಿರುವ ಕಾರಣ, ಆ ವಿಭಾಗದ ಫ್ಲೋರ್‌ಗಳನ್ನು ಈಗ ಜಿಮ್ಸ್ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ, ಜಯದೇವದವರು ತಮ್ಮ ಟ್ರಾನ್ಸ್ಫಾರ್ಮರ್ ಕಿತ್ತುಕೊಂಡು ಹೋಗಿದ್ದರಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸಿ, ಜಿಮ್ಸ್‌ಗೆ ಒಬ್ಬ ಇಂಜಿನಿಯರ್ ನಿಯೋಜಿಸಲು ಜೆಸ್ಕಾಂ ಎಂ.ಡಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಇಲ್ಲ, ಆದರೆ ರೋಗಿಗಳ ಸಂಖ್ಯೆ ಹೆಚ್ಚು ಆಗುತ್ತಿರುವುದು ಸತ್ಯ. ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವುದರಿಂದ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಕೆಲವು ಖಾಸಗಿ ಆಸ್ಪತ್ರೆಗಳು ಜಿಮ್ಸ್‌ಗೆ ಕಳಪೆ ಹೆಸರು ತರಲು ಯತ್ನಿಸುತ್ತಿದ್ದಾರೆ. ಈ ಸಂಬಂಧ ಉದ್ದೇಶಪೂರ್ವಕವಾಗಿ ಕೆಲವು ಭ್ರಾಂತಿಕರ ವೀಡಿಯೋಗಳು ಹರಿದಾಡುತ್ತಿವೆ. ಜನರು ಈ ಅಪಪ್ರಚಾರವನ್ನೂ ಅರಿತುಕೊಳ್ಳಬೇಕು ಎಂದು ಸಚಿವರು, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಕಾಡಿದ ಈ ವಿದ್ಯುತ್ ಸಮಸ್ಯೆಯನ್ನು ಕೆಲವೇ ನಿಮಿಷಗಳಲ್ಲಿ ಸರಿಪಡಿಸಲಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಪ್ರಸ್ತುತ ಎಲ್ಲಾ ಅಗತ್ಯ ಸೌಲಭ್ಯಗಳು ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.